ಹೆಗ್ಗಳ ಪಾಲ್ಟ್ ಮಕ್ಕಿಯಲ್ಲಿ ಶ್ರೀ ನಾಗರ ಪಂಚಮಿ
ವಿರಾಜಪೇಟೆ :ಸಮೀಪದ ಹೆಗ್ಗಳ ಗ್ರಾಮದ ಪಾಲ್ಟ್ ಮಕ್ಕಿಯಲ್ಲಿರುವ ಶ್ರೀ ನಾಗ ದೇವಸ್ಥಾನದಲ್ಲಿ ನಾಗರ ಪಂಚಮಿಯ ಪ್ರಯುಕ್ತ ವಿಶೇಷ ಪೂಜಾ ಕಾರ್ಯಕ್ರಮಗಳನ್ನು ಶ್ರದ್ದಾ ಭಕ್ತಿಯಿಂದ ನೆರವೇರಿಸಲಾಯಿತು. ಅರ್ಚಕರಾದ ವೇಣುಗೋಪಾಲ್ ಭಟ್ ರವರು ಪೂಜಾ ವಿಧಾನಗಳನ್ನು ನಡೆಸಿದರು. ಅರ್ಚಕರು ಮೊದಲಿಗೆ ಸಂಕಲ್ಪ ಪೂಜೆ, ಅಲಂಕಾರ, ಶ್ರೀ ನಾಗ ದೇವರಿಗೆ ಸೀಯಾಳ ಅಭಿಷೇಕ, ಕ್ಷೀರಾಭಿಷೇಕ, ಕುಂಕುಮಾರ್ಚನೆ, ಪುಷ್ಪರ್ಚನೆ ಯನ್ನು ನೆರವೇರಿಸಿದರು. ತದನಂತರ ನಾಗ ತಂಬಿಲವನ್ನು ನಡೆಸಲಾಯಿತು. ದೇವಸ್ಥಾನದ ಸಮೀಪವಿರುವ ಹುತ್ತಕ್ಕೆ ಗ್ರಾಮದ ಮಹಿಳೆಯರು ಹಾಲನ್ನು ಎರೆಯುವುದರ ಮೂಲಕ ಪೂಜೆಯನ್ನು ಸಲ್ಲಿಸಿದರು. ತದನಂತರ ಅರ್ಚಕರು ಮಹಾ ಮಂಗಳಾರತಿಯನ್ನು ನೆರವೇರಿಸಿದರು. ತದನಂತರ ಭಕ್ತಾದಿಗಳಿಗೆ ಪ್ರಸಾದ ವಿತರಣೆ ಹಾಗೂ ಅನ್ನ ಸಂತರ್ಪಣಾ ಸೇವೆಯು ನಡೆಯಿತು. ಈ ಸಂದರ್ಭದಲ್ಲಿ ದೇವಸ್ಥಾನದ ಆಡಳಿತ ಮಂಡಳಿಯವರು ಹಾಗೂ ಭಕ್ತಾದಿಗಳು ಉಪಸ್ಥಿತರಿದ್ದರು.








