ಮೊದಲ ದಿನವೇ ಪ್ರೇಕ್ಷಕರ ಮನಗೆದ್ದ ಎಲ್ಟು ಮುತ್ತಾ : ಬಾಲಕಿಯ ನಟನೆಗೆ ಪ್ರೇಕ್ಷರು ಫಿದಾ
ಮಡಿಕೇರಿ : ಕೊಡಗಿನಲ್ಲಿ ಚಿತ್ರೀಕರಣಗೊಂಡು ಇಂದು ಬೆಳ್ಳಿ ತೆರೆ ಕಂಡಿರುವ ಕನ್ನಡದ ಎಲ್ಟು ಮುತ್ತಾ ಸಿನಿಮಾ ಮೊದಲ ದಿನವೇ ಪ್ರೇಕ್ಷಕರ ಮನಗೆದಿದ್ದು, ಉತ್ತಮ ಸ್ಪಂದನೆ ದೊರೆತಿದೆ.
ರಾಜ್ಯದ ವಿವಿಧ ಚಿತ್ರಮಂದಿರಗಳಲ್ಲಿ ತೆರೆ ಕಂಡಿರುವ ಕೊಡಗಿನ ಎಲ್ಟು ಮುತ್ತಾ ಸಿನಿಮಾ ಕೊಡಗಿನ ಕಲಾವಿದರ ಪಾಲಿಗೆ ಹೊಸ ಅಧ್ಯಾಯವನ್ನೇ ಸೃಷ್ಟಿಸಿದೆ. ಪ್ರೇಕ್ಷಕರು ಕೂಡ ಉತ್ತಮ ಅಭಿಪ್ರಾಯ ವ್ಯಕ್ತ ಪಡಿಸಿದ್ದಾರೆ.
ಕೊಡಗಿನ ಸಂಸ್ಕೃತಿ ಹಾಗೂ ಇಲ್ಲಿನ ಜನ ಜೀವನ ಆಧಾರಿತ ಈ ಸಿನಿಮಾ ನಿರ್ಮಾಣಕ್ಕೆ ಚಿತ್ರ ತಂಡ ಕಳೆದೆರಡು ವರ್ಷಗಳಿಂದ ಸತತ ಪ್ರಯತ್ನ ನಡೆಸಿ ಯಶಸ್ವಿಯಾಗಿ ಇಂದು ಬೆಳ್ಳಿ ಪರದೆ ಮೇಲೆ ಬಿಡುಗಡೆಗೊಳಿಸಿದೆ.
ಕ್ಯಾಮರಾ ವರ್ಕಿಂಗ್ ಅದ್ಬುತವಾಗಿ ಮೂಡಿಬಂದಿದ್ದು , ಚಿತ್ರವನ್ನು ನಿರ್ಮಾಪಕರು ಕೊನೆವರೆಗೂ ಸ್ವಾರಸ್ಯಕರವಾಗಿ ಕೊಂಡೊಯ್ದಿದ್ದಾರೆ.
ನಾಯಕ ನಟ ಮುತ್ತಾ ಅವರ ಮಗಳ ಪಾತ್ರ ವಹಿಸಿರುವ ಪುಟ್ಟ ಬಾಲಕಿ ಜನಮನ ಗೆಲ್ಲುವ ಮೂಲಕ ಬೃಹತ್ ಅಭಿಮಾನಿ ಬಳಗವನ್ನೇ ತನ್ನತ್ತ ಸೆಳೆದು ಕೊಂಡಿದ್ದಾಳೆ.
ತಿತಿಮತಿ ಒಂಟಿಯಂಗಡಿ ನಿವಾಸಿಯಾದ ದಿವಂಗತ ಮುರುಗ ಹಾಗೂ ಸುಶೀಲಾ ದಂಪತಿಗಳ ಪುತ್ರಿ ಪ್ರಿಯಾ (12) ಪ್ರಮುಖ ಪಾತ್ರದಲ್ಲಿ ನಟನೆ ಮಾಡಿದ್ದು, ನೋಡುಗರ ಗಮನ ಸೆಳೆದಿದ್ದಾಳೆ.
ಬಾಲಕಿ ಪ್ರಿಯಾ ಪ್ರಸ್ತುತ ತಿತಿಮತಿ ಸರ್ಕಾರಿ ಶಾಲೆಯ 7ನೇ ತರಗತಿ ವಿದ್ಯಾರ್ಥಿನಿ.
ಚಿತ್ರದಲ್ಲಿ ನಟಿಸಿರುವ ಬಹುತೇಕ ಕಲಾವಿದರು ಕೊಡಗಿನವರೇ ಆಗಿದ್ದು, ಹೊಸ ಪ್ರಯತ್ನ ಮಾಡಿರುವ ಚಿತ್ರತಂಡ ದೊಡ್ಡಮಟ್ಟದ ಯಶಸ್ಸು ಸಿಗುವ ಭರವಸೆ ಹೊಂದಿದ್ದಾರೆ.
ಎಲ್ಟು ಮುತ್ತಾ: ಕೊಡಗಿನ ಸಿದ್ದಾಪುರದ(WOODLAND CINE FLEX) ವುಡ್ಲ್ಯಾಂಡ್ಸ್ ಸಿನಿ ಫ್ಲೆಕ್ಸ್, ಸುಂಟಿಕೊಪ್ಪದ (GANESH) ಗಣೇಶ ಚಿತ್ರಮಂದಿರ ಹಾಗೂ ಶನಿವಾರಸಂತೆಯ (YASHASWI) ಯಶಸ್ವಿ ಚಿತ್ರಮಂದಿರ ಸೇರಿದಂತೆ ರಾಜ್ಯದ ವಿವಿಧ ಚಿತ್ರಮಂದಿರಗಳಲ್ಲಿ ಇಂದು ಬಿಡುಗಡೆ ಮಾಡಲಾಗಿದೆ.
ಸಿದ್ದಾಪುರ ಹಾಗೂ ಸುಂಟಿಕೊಪ್ಪ ಚಿತ್ರಮಂದಿರದಲ್ಲಿ ಬೆಳಗ್ಗೆ 11 ಗಂಟೆಯ ಮಾರ್ನಿಂಗ್ ಶೋ ಪ್ರದರ್ಶನಗೊಳ್ಳುತ್ತಿದ್ದು, ಶನಿವಾರಸಂತೆಯಲಯ ಸಿನಿ ಮಂದಿರದಲ್ಲಿ ಪ್ರತಿದಿನ ನಾಲ್ಕು ಶೋ ಪ್ರದರ್ಶನಗೊಳ್ಳುತ್ತಿದೆ.








