ಜನವಾಹಿನಿ News ಸಿದ್ದಾಪುರ : ಅಗಲಿದ ಗೆಳೆಯನ ಅಂತಿಮ ಯಾತ್ರೆಯಲ್ಲಿ ಆಟೋ ಹಾಗೂ ಬೈಕ್ ಗಳು ಸರದಿ ಸಾಲಿನಲ್ಲಿ ಸಾಗುವ ಮೂಲಕ ಗೆಳೆಯನಿಗೆ ಅಂತಿಮ ನಮನ ಸಲ್ಲಿಸಿದ ಭಾವನಾತ್ಮಕ ದೃಶ್ಯ ವಿರಾಜಪೇಟೆ ತಾಲೂಕಿನ ಸಿದ್ದಾಪುರದಲ್ಲಿ ಕಂಡುಂಬಂತು.
ಕಳೆದ ಕೆಳ ತಿಂಗಳುಗಳಿಂದ ಅನಾರೋಗ್ಯಕ್ಕೆ ಒಳಗಾಗಿ ಚಿಕಿತ್ಸೆ ಪಡೆಯುತ್ತಿದ್ದ ಸಿದ್ದಾಪುರ ಆಟೋ ಚಾಲಕ ಕಾರ್ತಿಕ್ (33) ಭಾನುವಾರ ಮೃತಪಟ್ಟಿದ್ದು, ಅವರ ಅಂತಿಮ ಕ್ರಿಯೆ ಸೋಮವಾರ ಸಿದ್ದಾಪುರದ ಹಿಂದೂ ರುದ್ರಭೂಮಿಯಲ್ಲಿ ನಡೆಯಿತು.
ಇದಕ್ಕೂ ಮುನ್ನ ಗುಹ್ಯ ಗ್ರಾಮದ ನೇತಾಜಿ ಬಡಾವಣೆಯಲ್ಲಿರುವ ಕಾರ್ತಿಕ್ ನಿವಾಸಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ ಆಟೋಚಾಲಕರು, ಗೆಳೆಯರು ಹಾಗೂ ಸಾರ್ವಜನಿಕರು ಅಂತಿಮ ದರ್ಶನ ಪಡೆದರು.
ಬಳಿಕ ನೇತಾಜಿ ಬಡಾವಣೆಯಿಂದ ಸಿದ್ದಾಪುರ ಪಟ್ಟಣದ ಮೂಲಕ ಮೈಸೂರು ರಸ್ತೆಯಲ್ಲಿರುವ ಮುಳ್ಳತೋಡು ಸಮೀಪದ ಹಿಂದೂ ರುದ್ರಭೂಮಿಗೆ ಪಿಕಪ್ ವಾಹನದಲ್ಲಿ ಮೆರವಣಿಗೆ ಮೂಲಕ ಮೃತದೇಹವನ್ನು ಕೊಂಡೊಯ್ಯಲಾಯಿತು.
ಈ ಸಂದರ್ಭ ಬೈಕ್ ಗಳು ಹಾಗೂ 60ಕ್ಕೂ ಅಧಿಕ ಸಂಖ್ಯೆಯ ಆಟೋಗಳು ಸರದಿ ಸಾಲಿನಲ್ಲಿ ಮೆರವಣಿಗೆಯಲ್ಲಿ ಸಾಗಿದವು ಆ ಮೂಲಕ ತಮ್ಮ ಆತ್ಮೀಯ ಸ್ನೇಹಿತನಿಗೆ ಆಟೋ ಚಾಲಕರ ಸಂಘ ಹಾಗೂ ಗೆಳೆಯರಿಂದ ಅಂತಿಮ ಗೌರವ ಸಲ್ಲಿಸಲಾಯಿತು. ಅಲ್ಲದೆ ಗೆಳೆಯನ ಕುಟುಂಬಕ್ಕೆ ಭಾವನಾತ್ಮಕ ಬೆಂಬಲ ಸೂಚಿಸಿದರು.
ಎಲ್ಲರೊಂದಿಗೆ ಉತ್ತಮ ಒಡನಾಟ ಹೊಂದಿದ್ದ ಮೃತ ಕಾರ್ತಿಕ್ ಪತ್ನಿ ಹಾಗೂ ಒಂದು ವರ್ಷದ ಹೆಣ್ಣು ಮಗು ಹಾಗೂ ಅಪಾರ ಬಂಧುಬಳಗವನ್ನು ಅಗಲಿದ್ದಾರೆ.







