ಅರಣ್ಯ ಇಲಾಖೆಯಿಂದ ಕಾರ್ಯಾಚರಣೆ : 27 ಕಾಡಾನೆಗಳು ಮರಳಿ ಅರಣ್ಯಕ್ಕೆ
ಮಡಿಕೇರಿ : ವಿರಾಜಪೇಟೆ ಅರಣ್ಯ ವಿಭಾಗದ ತಿತಿಮತಿ ವಲಯಕ್ಕೆ ಒಳಪಡುವ ಪಾಲಿಬೆಟ್ಟ ವ್ಯಾಪ್ತಿಯ ಚೆನ್ನನಕೋಟೆ, ಮಾಲ್ದಾರೆ ಸುತ್ತಮುತ್ತಲ ಕಾಫಿ ತೋಟಗಳಲ್ಲಿ ಬೀಡುಬಿಟ್ಟಿದ್ದ ಸುಮಾರು 27 ಕಾಡಾನೆಗಳನ್ನು ಮರಳಿ ಅರಣ್ಯಕ್ಕೆ ಅಟ್ಟುವಲ್ಲಿ ಅರಣ್ಯ ಇಲಾಖೆ ಯಶಸ್ವಿಯಾಗಿದೆ.
ಕಾಫಿ ತೋಟಗಳಲ್ಲಿ ಕಾಡಾನೆಗಳು ಬೀಡುಬಿಟ್ಟಿದ್ದರಿಂದ ಕಾರ್ಮಿಕರು ಪ್ರತಿನಿತ್ಯ ಆತಂಕದಲ್ಲೇ ಕೆಲಸ ಮಾಡುತ್ತಿದ್ದರು. ಇದರಿಂದಾಗಿ ಆನೆಗಳನ್ನು ಮರಳಿ ಅರಣ್ಯಕ್ಕೆ ಅಟ್ಟುವಂತೆ ಒತ್ತಾಯ ಕೇಳಿಬಂದಿದ್ದ ಹಿನ್ನೆಲೆ ಜುಲೈ 18 ಹಾಗೂ 19 ರಂದು ಸತತ ಎರಡು ದಿನಗಳ ಕಾಲ ಕಾರ್ಯಾಚನೆ ನಡೆಸಿದ ಅರಣ್ಯ ಇಲಾಖೆ ದಕ್ಷ ಮತ್ತು ಉಷಾ ಗುಂಪಿನ ಸುಮಾರು 27ಆನೆಗಳನ್ನು ಮರಳಿ ಅರಣ್ಯಕ್ಕೆ ಅಟ್ಟಿಸುವಲ್ಲಿ ಯಶಸ್ವಿ ಆಗಿದೆ.
ಆನೆ ಕಾರ್ಯಾಚರಣೆ ನಡೆಯುತ್ತಿದ್ದ ಹಿನ್ನೆಲೆ ಈ ಭಾಗದ ಕಾರ್ಮಿಕರಿಗೆ ಎರಡು ದಿನಗಳ ರಜೆ ನೀಡಲಾಗಿತ್ತು. ಆದರೂ ಕೆಲವು ಮಾಲೀಕರು ರಜೆ ನೀಡದೆ ಕಾರ್ಮಿಕರನ್ನು ಕೆಲಸದಲ್ಲಿ ತೊಡಗಿಸಿಕೊಂಡಿದ್ದರು ಎಂದು ಅರಣ್ಯಾಧಿಕಾರಿಗಳು ಮಾಹಿತಿ ನೀಡಿದ್ದಾರೆ.
ವಿರಾಜಪೇಟೆ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಜಗನ್ನಾಥ್ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಗೋಪಾಲ್ ರವರ ನಿರ್ದೇಶನದ ಮೇರೆಗೆ ವಲಯ ಅರಣ್ಯ ಅಧಿಕಾರಿ ಗಂಗಾಧರ್ ರವರ ನೇತೃತ್ವದಲ್ಲಿ ಉಪವಲಯ ಅರಣ್ಯ ಅಧಿಕಾರಿ ಶಶಿ ಪಿ.ಟಿ ರವರನ್ನು ಒಳಗೊಂಡ ಅರಣ್ಯ ಇಲಾಖೆಯ ಸಿಬ್ಬಂದಿಗಳ ತಂಡ ಕಾಡಾನೆಗಳನ್ನು ಮರಳಿ ಅರಣ್ಯಕ್ಕೆ ಓಡಿಸುವಲ್ಲಿ ಯಶಸ್ವಿಯಾದರು .
ಕಾರ್ಯಾಚರಣೆಯಲ್ಲಿ ಅರಣ್ಯ ರಕ್ಷಕ ರಾಜೇಶ್ ವನ್ಯ ಜೀವಿ ವಲಯದ ಅರಣ್ಯ ರಕ್ಷಕ ಮತ್ತು ಸಿಬ್ಬಂದಿಗಳು ಚನ್ನಂಗಿ ಆರ್ ಆರ್ ಟಿ ಸಿಬ್ಬಂದಿಗಳು ದೇವಮಚ್ಚಿ ಶಾಖೆಯ ಆರ್ ಆರ್ ಟಿ ಸಿಬ್ಬಂದಿಗಳು, ಟಾಟಾ ಕಾಫಿ ಸಂಸ್ಥೆಯ ಎಲಿಫೆಂಟ್ ಟ್ರಾಕರ್ಸ್ ಭಾಗವಹಿಸಿದ್ದರು.








