ಜನವಾಹಿನಿ News ಮಡಿಕೇರಿ : ಮಡಿಕೇರಿ ತಾಲೂಕಿನ ಬೆಟ್ಟತ್ತೂರು ಗ್ರಾಮದಲ್ಲಿ ಕಾಡಾನೆ ದಾಳಿಯಿಂದ ಶಾಲಾ ಬಾಲಕಿ ಸ್ಥಳದಲ್ಲೇ ಸಾವನ್ನಪ್ಪಿದ ದಾರುಣ ಘಟನೆ ಶನಿವಾರ ಸಂಜೆ ಸಂಭವಿಸಿದೆ.
ಮೃತ ಬಾಲಕಿಯನ್ನು ಮದೆ ಬೆಟ್ಟತ್ತುರು ಗ್ರಾಮದ ಗಿರೀಶ್ ಅವರ ಪುತ್ರಿ ಪೂಜಾ (16) ಎಂದು ಗುರುತಿಸಲಾಗಿದೆ.
ಮಡಿಕೇರಿಯ ಸಂತ ಮೈಕಲರ ಶಾಲೆಯ ಪ್ರಥಮ PUC ಯಲ್ಲಿ ವ್ಯಾಸಂಗ ಮಾಡುತಿದ್ದ ಪೂಜಾ ನಿನ್ನೆ ಸಂಜೆ 5:30 ಕ್ಕೆ ಬೆಟ್ಟತ್ತೂರಿನ ತನ್ನ ಮನೆಗೆ ಬಸ್ಸಿನಲ್ಲಿ ಬಂದು ಇಳಿದು ಸ್ವಲ್ಪ ದೂರ ನಡೆಯುವಾಗ ಏಕಏಕಿ ಆನೆಯೊಂದು ದಾಳಿ ನಡೆಸಿದ್ದು , ವಿದ್ಯಾರ್ಥಿನಿ ಸ್ಥಳದಲ್ಲಿಯೇ ಮೃತಪಟ್ಟಿದ್ದಾಳೆ.
ಯುವತಿಯ ಶವವನ್ನು ಮರಣೋತ್ತರ ಪರೀಕ್ಷೆಗಾಗಿ ಮಡಿಕೇರಿಯ ಸರ್ಕಾರಿ ಆಸ್ಪತ್ರೆ ಯ ಶವಾಗಾರದಲ್ಲಿ ಇರಿಸಲಾಗಿದೆ.
ಗ್ರಾಮಸ್ಥರ ಆಕ್ರೋಶ :
ಈ ದುರ್ಘಟನೆಯ ಹಿನ್ನೆಲೆಯಲ್ಲಿ ಗ್ರಾಮಸ್ಥರು ಅರಣ್ಯ ಇಲಾಖೆಯ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬೆಟ್ಟತ್ತೂರು ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಕಾಡಾನೆಗಳ ಓಡಾಟ ಹೆಚ್ಚಾಗಿರುವುದರಿಂದ ಹಲವು ಬಾರಿ ದೂರು ನೀಡಿದ್ದರೂ ಸಮರ್ಪಕ ಕ್ರಮ ಕೈಗೊಳ್ಳಲಾಗಿಲ್ಲ ಎಂದು ಆರೋಪಿಸಿದ್ದಾರೆ.
“ಗ್ರಾಮದ ಬಳಿ ಕಾಡಾನೆಗಳ ಸಂಚಾರ ನಿಯಂತ್ರಿಸಲು ಅರಣ್ಯ ಇಲಾಖೆ ಸಂಪೂರ್ಣ ವಿಫಲವಾಗಿದೆ. ನಿರಪರಾಧ ಬಾಲಕಿಯ ಜೀವ ಹೋಗಿರುವುದು ಅತ್ಯಂತ ದುಃಖಕರ,” ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು.
ಕ್ರಮಕ್ಕೆ ಆಗ್ರಹ :ಗ್ರಾಮಸ್ಥರು ತಕ್ಷಣ ಕಾಡಾನೆಗಳನ್ನು ಕಾಡಿಗೆ ಓಡಿಸುವ ಕ್ರಮ ಕೈಗೊಳ್ಳಬೇಕು, ಶಾಶ್ವತ ತಡೆಗೋಡೆ ನಿರ್ಮಿಸಬೇಕು ಹಾಗೂ ಕುಟುಂಬಕ್ಕೆ ಸಮರ್ಪಕ ಪರಿಹಾರ ನೀಡಬೇಕು ಎಂದು ಆಗ್ರಹಿಸಿದ್ದಾರೆ.






