ಆ.೧ಕ್ಕೆ ಕನ್ನಡದ ಎಲ್ಟು ಮುತ್ತಾ ಚಿತ್ರ ಬಿಡುಗಡೆ
ಮಡಿಕೇರಿ : ಹೈ೫ ಸ್ಟುಡಿಯೋಸ್ ಹಾಗೂ ಎಸಿಇ ೨೨ ಪ್ರೊಡಕ್ಷನ್ಸ್ ಸಂಸ್ಥೆಯಡಿ ನಿರ್ಮಾಣವಾಗಿರುವ ಕನ್ನಡದ ಎಲ್ಟು ಮುತ್ತಾ ಚಿತ್ರ ಆ.೧ಕ್ಕೆ ತೆರೆಕಾಣಲಿದೆ ಎಂದು ಚಿತ್ರದ ನಿರ್ಮಾಪಕ ಸತ್ಯ ಶ್ರೀನಿವಾಸನ್ ತಿಳಿಸಿದ್ದಾರೆ.
ನಗರದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೂಲತಃ ಕೊಡಗಿನವರಾದ ರಾ.ಸೂರ್ಯ ನಿರ್ದೇಶನದ ಚಿತ್ರ ಪೂರ್ಣ ಪ್ರಮಾಣದಲ್ಲಿ ಕೊಡಗಿನ ಸೊಗಡನ್ನೇ ಇಟ್ಟುಕೊಂಡು ನಿರ್ಮಾಣವಾಗಿದೆ. ಕನ್ನಡದ ಮಟ್ಟಿಗೆ ಮೊದಲ ಪ್ರಯತ್ನ ಇದಾಗಿದ್ದು, ಸದ್ಯಕ್ಕೆ ಕನ್ನಡ ಭಾಷೆಯಲ್ಲಿ ಬಿಡುಗಡೆಗೆ ಸಜ್ಜಾಗಿದೆ. ಚಿತ್ರಕ್ಕೆ ಪ್ರಸನ್ನ ಕೇಶವ್ ಸಂಗೀತ ಸಂಯೋಜಿಸಿದ್ದಾರೆ. ಚಿತ್ರದಲ್ಲಿ ಪ್ರಿಯಾಂಕಾ ಮಳಲಿ ನಾಯಕಿಯಾಗಿ ನಟಿಸಿದ್ದಾರೆ. ೫ ಹಾಡಿನೊಂದಿಗೆ ೨ ಫೈಟ್ ಇರಲಿದೆ ಎಂದು ಮಾಹಿತಿ ನೀಡಿದರು.
ನಿರ್ದೇಶಕ ಹಾಗೂ ನಟ ರಾ ಸೂರ್ಯ ಮಾತನಾಡಿ, ಕೊಡಗಿನಲ್ಲೇ ಸಿನಿಮಾ ಮಾಡಿದ್ದೇವೆ. ಕಥೆಗಳ ಜತೆಗೆ ಪಾತ್ರ ವರ್ಗವೂ ವಿಶಿಷ್ಟವಾಗಿದೆ. ನನ್ನ ಆರಂಭಿಕ ವರ್ಷಗಳಲ್ಲಿ ನನ್ನ ಮೇಲೆ ಆಳವಾದ ಪ್ರಭಾವ ಬೀರಿದ ನೈಜ ಘಟನೆಗಳಿಂದ ಸ್ಫೂರ್ತಿ ಪಡೆದ ಈ ಕಥೆಯು ಎಲ್ಟು ಮತ್ತು ಮುತ್ತಾ ಎಂಬ ಎರಡು ಪ್ರಮುಖ ಪಾತ್ರಗಳ ಸುತ್ತ ಸುತ್ತುತ್ತದೆ ಎಂದ ತಿಳಿಸಿದರು.
ಸಹ ನಿರ್ಮಾಪಕ ಕೂಪದಿರ ಪವೀಂದ್ರ ಮುತ್ತಪ್ಪ ಮಾತನಾಡಿ, ಸಿನಿಮಾದಲ್ಲಿ ಕಾಕ್ರೋಚ್ ಸುಧಿ, ಯಮುನಾ ಶ್ರೀನಿಧಿ, ನವೀನ್ ಪಡಿಲ್ ಮುಂತಾದವರು ನಟಿಸಿದ್ದಾರೆ. ಆ.೧ಕ್ಕೆ ಬಿಡುಗಡೆಗೆ ಸಿದ್ಧವಾಗಿದ್ದು, ೭೫ ಚಿತ್ರಮಂದಿರಗಳಲ್ಲಿ ತೆರೆಕಾಣಲಿದೆ. ಜಿಲ್ಲೆಯಲ್ಲಿ ಸುಂಟಿಕೊಪ್ಪ, ಸಿದ್ಧಾಪುರ, ಶನಿವಾರಸಂತೆ ಟಾಕಿಸ್ಗಳಲ್ಲಿ ತೆರೆಕಾಣಲಿದೆ ಎಂದು ವಿವರಿಸಿದರು.
ಸುದ್ದಿಗೋಷ್ಠಿಯಲ್ಲಿ ನಾಯಕ ನಟ ಶೌರ್ಯ ಪ್ರತಾಪ, ನಟರಾದ ರುಹಾನ್ ಆರ್ಯ, ಧನು ದೇವಯ್ಯ ಉಪಸ್ಥಿತರಿದ್ದರು.








