ಆ.22 ರಂದು ಕಿರು ಆಹಾರ ಸಂಸ್ಕರಣಾ ಉದ್ದಿಮೆ ಬಗ್ಗೆ ತರಬೇತಿ ಕಾರ್ಯಗಾರ
ಮಡಿಕೇರಿ : ಪ್ರಧಾನಮಂತ್ರಿಯವರ ಕಿರು ಆಹಾರ ಸಂಸ್ಕರಣಾ ಉದ್ದಿಮೆಗಳ ನಿಯಮ ಬದ್ಧಗೊಳಿಸುವಿಕೆ (ಪಿಎಂಎಫ್‍ಎಂಇ) ಯೋಜನೆಯು ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಒಂದು ಮಹತ್ವಾಕಾಂಕ್ಷೆ ಯೋಜನೆಯಾಗಿದ್ದು, ರಾಜ್ಯದಲ್ಲಿ ಕಿರು ಆಹಾರ ಸಂಸ್ಕರಣಾ ಉದ್ದಿಮೆಯ ಅಭಿವೃದ್ಧಿಗೆ ಸುವರ್ಣಾವಕಾಶ ಕಲ್ಪಿಸುತ್ತದೆ.
ಈವರೆಗೂ ಜಿಲ್ಲೆಯಲ್ಲಿ ಈ ಯೋಜನೆಯಡಿ 89 ಉದ್ದಿಮೆದಾರರಿಗೆ ಸಾಲ ಮಂಜೂರಾತಿ ದೊರೆತಿದೆ. ಮುಖ್ಯಮಂತ್ರಿಯವರು ತಮ್ಮ 2025-26 ನೇ ಸಾಲಿನ ಆಯವ್ಯಯ ಭಾಷಣದಲ್ಲಿ 5 ಸಾವಿರ ಕಿರು ಆಹಾರ ಸಂಸ್ಕರಣಾ ಉದ್ದಿಮೆಗಳನ್ನು ಸ್ಥಾಪಿಸುವ ಘೋಷಣೆ ಮಾಡಿ, ಈ ಉದ್ದೇಶಕ್ಕಾಗಿ ರೂ.206 ಕೋಟಿ ಅನುದಾನವನ್ನು ಒದಗಿಸಿದ್ದಾರೆ.
ಅದರಂತೆ ಕೊಡಗು ಜಿಲ್ಲೆಗೆ 75 ಉದ್ದಿಮೆಗಳ ಸ್ಥಾಪನೆಯ ಗುರಿ ನಿಗಧಿಪಡಿಸಲಾಗಿದೆ. ಪ್ರಸಕ್ತ ಹಣಕಾಸಿನ ವರ್ಷವು ಯೋಜನೆಯ ಅನುಷ್ಠಾನದ ಕೊನೆಯ ವರ್ಷವಾಗಿದ್ದು, ಈ ಯೋಜನೆಯ ಪ್ರಯೋಜನವನ್ನು ಜಿಲ್ಲೆಯಲ್ಲಿ ಹೆಚ್ಚಿನ ಫಲಾನುಭವಿಗಳು ಪಡೆದುಕೊಳ್ಳುವ ಸಲುವಾಗಿ ಆಗಸ್ಟ್, 22 ರಂದು ಜಿಲ್ಲಾ ಉಸ್ತುವಾರಿ ಸಚಿವರ ಮುಂದಾಳತ್ವದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತಿ ಹಾಗೂ ಕೃಷಿ ಇಲಾಖೆಯ ಸಹಯೋಗದೊಂದಿಗೆ ಯೋಜನೆಯ ಬಗ್ಗೆ ವಿವಿಧ ಪಾಲುದಾರರಿಗೆ ಅರಿವು ಮೂಡಿಸುವ ಕಾರ್ಯಕ್ರಮವನ್ನು ಜಿಲ್ಲಾ ಪಂಚಾಯತ್ ಸಭಾಂಗಣ, ಮಡಿಕೇರಿ ಇಲ್ಲಿ ಆಯೋಜಿಸಲಾಗಿದೆ. ಈ ಕಾರ್ಯಕ್ರಮದಲ್ಲಿ ಜಿಲ್ಲೆಯ ಎಲ್ಲಾ ಆಸಕ್ತ ರೈತರು, ಉದ್ದಿಮೆದಾರರು ಹಾಗೂ ಫಲಾನುಭವಿಗಳು ಭಾಗವಹಿಸಿ ಈ ಯೋಜನೆಯ ಪ್ರಯೋಜನವನ್ನು ಪಡೆದುಕೊಳ್ಳುವಂತೆ ಕೃಷಿ ಇಲಾಖೆಯ ಜಂಟಿ ಕೃಷಿ ನಿರ್ದೇಶಕರಾದ ಬಿ.ಎಸ್.ಚಂದ್ರಶೇಖರ್ ಅವರು ತಿಳಿಸಿದ್ದಾರೆ.

 
								 
															 
															






