Breaking News :

ಕಕ್ಕಡ ನಮ್ಮೆ ಒತ್ತೊರ್ಮೆ ಕೂಟ : ಪ್ರತಿಯೊಬ್ಬರು ಹಿರಿಯರ ಮಾರ್ಗದರ್ನದಲ್ಲಿ ಸಾಗುವಂತಾಗಬೇಕು : ಮಂತರ್ ಗೌಡ ಕಿವಿ ಮಾತು


ಕಕ್ಕಡ ನಮ್ಮೆ ಒತ್ತೊರ್ಮೆ ಕೂಟ : ಪ್ರತಿಯೊಬ್ಬರು ಹಿರಿಯರ ಮಾರ್ಗದರ್ನದಲ್ಲಿ ಸಾಗುವಂತಾಗಬೇಕು : ಮಂತರ್ ಗೌಡ ಕಿವಿ ಮಾತು


ಮಡಿಕೇರಿ : ಹಿರಿಯರ ಮಾರ್ಗದರ್ಶನಲ್ಲಿ ನಾವು ಸಾಗುವಂತಾಗಬೇಕು ಎಂದು ಮಡಿಕೇರಿ ವಿಧಾನ ಸಭಾಕ್ಷೇತ್ರದ ಶಾಸಕ ಡಾ.ಮಂತರ್ ಗೌಡ ಕಿವಿಮಾತು ಹೇಳಿದರು.

ಮಡಿಕೇರಿ ಕೊಡವ ಸಮಾಜ, ಕೊಡವ ಸಮಾಜ ಪೊಮ್ಮಕ್ಕಡ ಕೂಟ ಮತ್ತು ಮಡಿಕೇರಿ ಕೊಡವ ಕೇರಿಯ ಸಂಯುಕ್ತಾಶ್ರಯದಲ್ಲಿ ನಗರದ ಕೊಡವ ಸಮಾಜದಲ್ಲಿ ಭಾನುವಾರ ಆಯೋಜಿಸಿದ್ದ ಕಕ್ಕಡ ನಮ್ಮೆ ಒತ್ತೊರ್ಮೆ ಕೂಟ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಪ್ರಸ್ತುತ ದಿನಗಳಲ್ಲಿ ನಮ್ಮ ಇತಿಹಾಸವನ್ನು ಮರೆಯುತ್ತಿದ್ದೇವೆ. ನಾವುಗಳೇ ಮಕ್ಕಳಿಗೆ ತಿಳಿಸಲು ಮರೆಯುತ್ತಿದ್ದೇವೆ. ಇಂತಹ ಕಾರ್ಯಕ್ರಮಗಳಿಂದ ನಮ್ಮ ಸಂಪ್ರದಾಯ ಉಳಿಯುತ್ತದೆ ಎಂದರು.

ಪೂರ್ವಜರು ಮಳೆಗಾಲದಲ್ಲಿ ಗದ್ದೆ ಕೆಲಸಗಳಲ್ಲಿ ಸಂಪೂರ್ಣವಾಗಿ ತೊಡಗಿಕೊಳ್ಳುತ್ತಿದ್ದರು. ನಂತರ ಕಕ್ಕಡ ತಿಂಗಳಲ್ಲಿ ತಮ್ಮ ಅರೋಗ್ಯದ ದೃಷ್ಟಿಯಿಂದ ನೈಸರ್ಗಿಕವಾಗಿ ಬೆಳೆದ ಆಹಾರವನ್ನು ಸೇವಿಸುತ್ತಿದ್ದರು. ಇಂದು ರಾಸಾಯನಿಕ ಗೊಬ್ಬರಗಳಿಂದ ಬೆಳೆದ ಆಹಾರ ಸೇವನೆ ಹೆಚ್ಚಾಗುತ್ತಿದೆ. ಪರಿಣಾಮ ಎಷ್ಟೋ ಯುವಕರು ಇಂದು ಹೃದಯಘಾತಕ್ಕೆ ಒಳಗಾಗುತ್ತಿದ್ದಾರೆ. ಆದ್ದರಿಂದ ಆರೋಗ್ಯ ಪರಿಸ್ಥಿತಿಯನ್ನು ಅರಿಯಲು ಆರೋಗ್ಯ ತಪಾಸಣೆ ಮಾಡಿಕೊಳ್ಳಬೇಕು ಎಂದು ಸಲಹೆ ನೀಡಿದ ಅವರು, ಸಾವಯುವ ಗೊಬ್ಬರದಿಂದ ಬೆಳೆದ ತರಕಾರಿಗಳನ್ನು ಸೇವಿಸುವಂತಾಗಬೇಕು. ಇಂದು ಆರೋಗ್ಯ ಇದ್ದರೆ ಮಾತ್ರ ಸುಖವಾಗಿರಲು ಸಾಧ್ಯ ಎಂದರು.

ಮಡಿಕೇರಿ ಕೊಡವ ಸಮಾಜ ಅಧ್ಯಕ್ಷ ಮಂಡುವಂಡ ಪಿ.ಮುತ್ತಪ್ಪ ಮಾತನಾಡಿ, ಅಂದು ಮಹಿಳೆಯರು ಬೆಳಗ್ಗಿನಿಂದಲೇ ಗದ್ದೆ ಕೆಲಸಗಳಲ್ಲಿ ನಿರತರಾಗಿರುತ್ತಿದ್ದರು. ದೇಹವನ್ನು ಬೆಚ್ಚಗಿಡಲು ಮದ್ದು ಪಾಯಸ, ಮರಕೆಸ, ಹಲಸಿನ ಬೀಜ ಇತ್ಯಾದಿಗಳನ್ನು ಸೇವಿಸುತ್ತಿದ್ದರು. ಇಂದು ಆಹಾರ ಪದ್ಧತಿಗಳು ಬದಲಾಗುತ್ತಿದೆ. ಆರೋಗ್ಯದ ದೃಷ್ಟಿಯಿಂದ ಮುಂದಿನ ಪೀಳಿಗೆಗಳಿಗೆ ತಿಳಿಸುವ ಮೂಲಕ ನಮ್ಮ ಸಂಸ್ಕೃತಿ ಪದ್ಧತಿಯನ್ನು ಉಳಿಸಿ ಬೆಳೆಸಬೇಕು ಎಂದರು.

ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕರು ಮತ್ತು ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾದ ಅಜ್ಜಿಕುಟ್ಟಿರ.ಎಸ್.ಪೊನ್ನಣ್ಣ ಅವರ ಪತ್ನಿ, ಸಮಾಜ ಸೇವಕಿ ಕಾಂಚನ್ ಪೊನ್ನಣ್ಣ ಮಾತನಾಡಿ, ಕಕ್ಕಡ ೧೮ ಕೊಡವರ ಹೆಮ್ಮೆಯ ಹಬ್ಬವಾಗಿದೆ. ಅಂದು ಪೂರ್ವಜರು ತಮ್ಮ ಆರೋಗ್ಯ ಕಾಪಾಡಲು ಕಕ್ಕಡ ತಿಂಗಳ ಖಾದ್ಯಗಳನ್ನು ಹೆಚ್ಚಾಗಿ ಸೇವಿಸುತ್ತಿದ್ದರು. ಆದ್ದರಿಂದ ಆರೋಗ್ಯವಾಗಿದ್ದರು. ಅವರ ಬುದ್ಧಿವಂತಿಕೆಯನ್ನು ನಾವು ಮರೆಯಬಾರದು. ಜತೆಗೆ ಇಂತಹ ಕಾರ್ಯಕ್ರಮಗಳು ಮುಂದಿನ ಪೀಳಿಗೆಗೆ ನಮ್ಮ ಆಚಾರ ವಿಚಾರ ತಿಳಿಸಲು ಸಹಕಾರಿಯಾಗಿದೆ ಎಂದರು.

ವಿಧಾನ ಪರಿಷತ್ ಮಾಜಿ ಸದಸ್ಯೆ ಶಾಂತೆಯಂಡ ವೀಣಾ ಅಚ್ಚಯ್ಯ ಮಾತನಾಡಿ, ಮಡಿಕೇರಿಯ ಕೊಡವರ ನೆಲೆಯೇ ಈ ಕೊಡವ ಸಮಾಜ. ಕೊಡವ ಸಮಾಜಕ್ಕೆ ಹಣಕಾಸಿನ ಅಗತ್ಯವಿದ್ದು, ಅನುದಾನಕ್ಕಾಗಿ ಶಾಸಕರ ನೇತೃತ್ವದಲ್ಲಿ ಸಿಎಂ ಗಮನ ಸೆಳೆಯಲಾಗಿದೆ. ಸರ್ಕಾರದಿಂದ ಅನುದಾನ ಒದಗಿಸಲು ಶಾಸಕರು ಪ್ರಯತ್ನಿಸಬೇಕೆಂದು ಹೇಳಿದರು.

ಶನಿವಾರ ಮಡಿಕೇರಿಯಲ್ಲಿ ವಿಧಾನ ಪರಿಷತ್ ಸದಸ್ಯ ಬಿ.ಕೆ.ಹರಿಪ್ರಸಾದ್ ಅವರನ್ನು ಭೇಟಿಯಾಗಿ ಕೊಡವ ಸಮುದಾಯದ ಸಮಸ್ಯೆಗಳ ಬಗ್ಗೆ ಕವಿತಾ ಬೊಳ್ಳಪ್ಪ ಅವರು ಮನವರಿಕೆ ಮಾಡಿಸಿದ್ದು, ಅಗತ್ಯ ನೆರವಿನ ಭರವಸೆ ನೀಡಿದ್ದಾರೆ. ಪೊಮ್ಮಕ್ಕಡ ಕಟ್ಟಡ ನಿರ್ಮಾಣಕ್ಕೆ ಎಲ್ಲರ ಸಹಕಾರ ಅಗತ್ಯ ಎಂದರು.

ಈ ಸಂದರ್ಭ ಕಾಂಚನ್ ಪೊನ್ನಣ್ಣ ಅವರು ಪೊಮ್ಮಕ್ಕಡ ಕೂಟದ ಬ್ಯಾಡ್ಜ್ ಅನಾವರಣಗೊಳಿಸಲಾಯಿತು. ನಂತರ ಮಡಿಕೇರಿ ಕೊಡವ ಸಮಾಜದ ಪೊಮ್ಮಕ್ಕಡ ತಂಡದಿಂದ ನೃತ್ಯಪ್ರದರ್ಶನ ಗಮನ ಸೆಳೆಯಿತು. ಕಕ್ಕಡ ೧೮ರ ವಿಶೇಷತೆಯ ಬಗ್ಗೆ ಅಜ್ಜಿಕುಟ್ಟಿರ ಸುನಿತಾ ಗಿರೀಶ್ ವಿಚಾರ ಮಂಡನೆ ಮಾಡಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಕೊಡವ ಸಮಾಜ ಪೊಮ್ಮಕ್ಕಡ ಕೂಟದ ಅಧ್ಯಕ್ಷೆ ಕನ್ನಂಡ ಕವಿತಾ ಬೊಳ್ಳಪ್ಪ ಮಾತನಾಡಿದರು. ಪದ್ಮಶ್ರೀ ಪ್ರಶಸ್ತಿ ವಿಜೇತೆ ಐಮುಡಿಯಂಡ ರಾಣಿಮಾಚಯ್ಯ, ಕೊಡವ ಸಮಾಜದ ಉಪಾಧ್ಯಕ್ಷ ಕೇಕಡ ವಿಜುದೇವಯ್ಯ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪೊಮ್ಮಕ್ಕಡ ಕೂಟದ ಸದಸ್ಯರು, ಕೊಡವ ಸಮಾಜದ ಪದಾಧಿಕಾರಿಗಳು, ಸಮಾಜ ಬಾಂಧವರು ಪಾಲ್ಗೊಂಡಿದ್ದರು.

ಗಮನ ಸೆಳೆದ ಖಾದ್ಯಗಳ ಸ್ಪರ್ಧೆ

ಕಾರ್ಯಕ್ರಮದಲ್ಲಿ ಮದ್ದ್ ಪಾಯಸ, ಮದ್ದ್ ಪುಟ್ಟ್, ನಾಡ್ ಕುಮ್ಮ್ ಕರಿ, ಬೈಂಬಳೆ ಕರಿ, ಮಾಂಗೆ ಕರಿ, ಮುದ್‌ರೆ ಕಣ್ಣಿ, ಞಂಡ್ ಕರಿ, ಕೋಳಿ ಕರಿ, ಪಂದಿ ಕರಿ, ಕೊಯಿಲೆ ಪಚ್ಚೆ ಮೀನ್ ಕರಿ, ಚಕ್ಕೆ ಕುರು ಪಜ್ಜಿ, ಕೈಪುಳಿ ಪಜ್ಜಿ ಹಾಗೂ ಕಕ್ಕಡ ಮದ್ದು ಸೊಪ್ಪಿನ ವಿಶೇಷ ಖಾದ್ಯಗಳ ಸ್ಪರ್ಧೆ ಹಾಗೂ ಪ್ರದರ್ಶನ ಗಮನ ಸೆಳೆಯಿತು. ೪೫ ಸ್ಪರ್ಧಿಗಳು ಭಾಗವಹಿಸಿದ್ದರು. ಖಾದ್ಯಗಳ ಸ್ಪರ್ಧೆ ಹಾಗೂ ಪ್ರದರ್ಶನವನ್ನು ಕಾಂಚನ್ ಪೊನ್ನಣ್ಣ ಉದ್ಘಾಟಿಸಿದರು. ತೀರ್ಪುಗಾರರಾಗಿ ಹಂಚೆಟ್ಟಿರ ಮನು ಮುದ್ದಪ್ಪ, ನೆರವಂಡ ಡ್ಯೂಕ್, ಮೂವೆರ ಅನು ದೇಚಮ್ಮ, ಚೌರಿರ ರಿಷಿಕಾ ಶ್ಯಾಂ ಕಾರ್ಯನಿರ್ವಹಿಸಿದರು.

***************************

ಪೊಮ್ಮಕ್ಕಡ ಒಕ್ಕೂಟಕ್ಕೂ ಸ್ವಂತ ಕಟ್ಟಡದ ಅಗತ್ಯತೆ ಇದೆ. ಆ ನಿಟ್ಟಿನಲ್ಲಿ ಕೊಡವ ಸಮಾಜಕ್ಕೆ ಸಂಬಂಧಿಸಿದ ಜಾಗದಲ್ಲಿ ನೂತನ ಕಟ್ಟಡ ನಿರ್ಮಾಣಕ್ಕೆ ರೂ.೨೦ ಲಕ್ಷ ಅನುದಾನ ಒದಗಿಸಲಾಗುವುದು 

ಡಾ.ಮಂತರ್ ಗೌಡ, ಶಾಸಕರು, ಮಡಿಕೇರಿ ವಿಧಾನ ಸಭಾಕ್ಷೇತ್ರ

Share this article

ಟಾಪ್ ನ್ಯೂಸ್

More News