ಕರ್ನಾಟಕ ದಲಿತ ಸಂಘರ್ಷ ಸಮಿತಿಯಿಂದ ಹಾಕತೂರು ಪ್ರೌಢಶಾಲಾ ಶಿಕ್ಷಕರಿಗೆ ಸನ್ಮಾನ : ನಾವು ಉತ್ತಮ ನಾಗರಿಕರಾಗಬೇಕೆನ್ನುವ ಗುರಿ ಪ್ರತಿಯೊಬ್ಬರಿಗಿರಬೇಕು : ಕವನ್ ಭೀಷ್ಮ
ಮಡಿಕೇರಿ : ಕರ್ನಾಟಕ ದಲಿತ ಸಂಘರ್ಷ ಸಮಿತಿ ವತಿಯಿಂದ ಎಪ್ಪತ್ತೊಂಭತ್ತನೇ ಸ್ವತಂತ್ರ ದಿನಾಚರಣೆಯ ಪ್ರಯುಕ್ತ ಹಾಕತ್ತೂರು ಪ್ರೌಢಶಾಲೆಯಲ್ಲಿ ಕಳೆದ ಸಾಲಿನ ವಾರ್ಷಿಕ ಪರೀಕ್ಷಾ ಫಲಿತಾಂಶ ಶೇ.ನೂರು ಬರಲು ಕಾರಣಕರ್ತರಾದ ಶಾಲಾ ಶಿಕ್ಷಕರಿಗೆ ಸನ್ಮಾನಿಸಲಾಯಿತು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಸ್ಥಳಿಯ ದಾನಿಗಳಾದ ಕವನ್ ಭೀಷ್ಮ ಮಾತನಾಡಿ, ನಾವು ಉತ್ತಮ ನಾಗರಿಕರಾಗಬೇಕೆನ್ನುವ ಗುರಿ ಪ್ರತಿಯೊಬ್ಬರಿಗೆ ಇರಬೇಕು ಎಂದು ಅಭಿಪ್ರಾಯ ಪಟ್ಟರು.
ನಮ್ಮ ಶಾಲೆ ಪ್ರತಿ ವರ್ಷ ಸನ್ಮಾನಕ್ಕೆ ಭಾಜನರಾಗುತ್ತಿರುವುದು ನಮ್ಮ ಜವಾಬ್ದಾರಿಯನ್ನು ಹೆಚ್ಚು ಮಾಡುತ್ತಿದೆ. ಈ ಸನ್ಮಾನ ಪಡೆದುಕೊಂಡು ಸಿಕ್ಕ ಗೌರವವನ್ನು ಸದುಪಯೋಗಪಡಿಸಿಕೊಳ್ಳಬೇಕೆಂದು ಅವರು ಸಲಹೆ ನೀಡಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಡಿ.ಎಸ್.ಎಸ್ ಜಿಲ್ಲಾ ಸಂಚಾಲಕ ದಿವಾಕರ್ ಹೆಚ್.ಎಲ್, ದಲಿತ ಸಂಘರ್ಷ ಕಳೆದ ಒಂದು ದಶಕದಿಂದ ನಡೆಸಿದ ಸೇವೆ ಹಾಗು ವಿದ್ಯಾರ್ಥಿಗಳಿಗೆ, ಪೋಷಕರಿಗೆ ನೀಡಿದ ಸನ್ಮಾನದ ಉದ್ದೇಶ ಅವರು ಮತ್ತಷ್ಟು ಸಾಧನೆ ಮಾಡಲಿ ಎನ್ನುವುದು, ಸನ್ಮಾನದಿಂದ ಸ್ಪೂರ್ತಿ ಪಡೆಯುವ ಉಳಿದ ವಿದ್ಯಾರ್ಥಿಗಳು ತಾವೂ ಹೆಚ್ಚಿನ ಸಾಧನೆ ತೋರಲು ಪ್ರಯತ್ನ ಪಡುತ್ತಾರೆ. ವಿದ್ಯಾರ್ಥಿಗಳು ದೇಶದ ಶಕ್ತಿ ಅವರನ್ನು ಚಿಕ್ಕಂದಿನಿಂದಲೇ ಜಾಗೃತಗೊಳಿಸಬೇಕಿದೆ ಎಂದರು.
ಮುಖ್ಯ ಅತಿಥಿಯಾದ ಮೇಕೇರಿ ಗ್ರಾಮ ಪಂಚಾಯತ್ನ ಮಾಜಿ ಸದಸ್ಯ ಭೀಮಯ್ಯ ಮಾತನಾಡಿ ವಿದ್ಯಾರ್ಥಿಗಳನ್ನು ಮುನ್ನಲೆಗೆ ತರುವಂತಹ ಶಿಕ್ಷಕರಿಗೆ ಸನ್ಮಾನ ನಡೆಸುವ ಕಾರ್ಯಕ್ರಮ ಹಾಗು ಮಕ್ಕಳಿಗೆ ಸನ್ಮಾನ ನೀಡುವುದು ನಿಜಕ್ಕೂ ಅಭಿನಂದನೀಯವೆಂದರು.ಅಂಬೇಡ್ಕರ್ ಅವರು ಶಾಲೆಯ ಹೊರಭಾಗದಲ್ಲಿ ಕುಳಿತು ಓದಿ ನಮ್ಮನ್ನೆಲ್ಲಾ ಒಳಗೆ ಕುಳಿತು ಓದುವ ಹಾಗೆ ಕಾನೂನು ರೂಪಿಸಿದ್ದಾರೆ .ಅವರನ್ನು ಎಂದಿಗೂ ಮರೆಯುವಂತಿಲ್ಲ ಎಂದರು.
ತಾಲ್ಲೂಕು ಸಂಚಾಲಕ ದೀಪಕ್ ಪೊನ್ನಪ್ಪ, ಅಂಬೇಡ್ಕರ್ ಅವರ ಮಹತ್ವವನ್ನು ಉದಾಹರಣೆಗಳ ಸಹಿತ ವಿವರಿಸುತ್ತಾ, ಡಾ.ಬಿ ಆರ್ ಅಂಬೇಡ್ಕರ್ ಅವರು ಯಾವ ರೀತಿ ಅಭ್ಯಾಸ ನಡೆಸುತ್ತಿದ್ದರು ಮತ್ತು ಆ ಶ್ರಮದಿಂದ ಅವರು ಗಳಿಸಿದ ಪದವಿಗಳು, ಸ್ಥಾನ, ಗೌರವದ ಅರಿವಿತ್ತರು. ವಿದ್ಯಾರ್ಥಿಗಳು ಯಾವ ಕಾರಣಕ್ಕೆ ತಮ್ಮ ಪಠ್ಯಪುಸ್ತಕಗಳ ಜೊತೆಗೆ ಇತರ ಪುಸ್ತಕಗಳನ್ನು ಓದಬೇಕು ಹಾಗು ಈ ಓದು ಯಾವಾಗ ಅವರಿಗೆ ನೆರವಾಗುತ್ತದೆ ಎನ್ನುವುದನ್ನು ಸ್ಪಷ್ಟಪಡಿಸಿದರು. ಈ ಸಂದರ್ಭದಲ್ಲಿ ವಿದ್ಯಾರ್ಥಿಗಳು ತನ್ಮಯತೆಯಿಂದ ಅವರ ಮಾತುಗಳನ್ನು ಆಲಿಸುತ್ತಿದ್ದರು.
ಶಾಲೆಯ ಮುಖ್ಯ ಶಿಕ್ಷಕರಾದ ವನಜ ಆವರು ಸರ್ವರನ್ನು ಸ್ವಾಗತಿಸಿ, ಮೀನ ಅವರು ವಂದನಾರ್ಪಣೆ ಮಾಡಿದರು.
ಶಿಕ್ಷಕರನ್ನು ಸನ್ಮಾನಿಸಿದ ನಂತರ ಕೊನೆಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.







