ಜನವಾಹಿನಿ News ಸಿದ್ದಾಪುರ: ಕಾಡಾನೆ ದಾಳಿಗೆ ಬೆಳೆಗಾರ ಬಲಿಯಾಗಿರುವ ಘಟನೆ ವಿರಾಜಪೇಟೆ ತಾಲೂಕಿನ ಸಿದ್ದಾಪುರ ಸಮೀಪದ ಹೈ ಸ್ಕೂಲ್ ಪೈಸಾರಿ ವ್ಯಾಪ್ತಿಯಲ್ಲಿ ನಡೆದಿದೆ.
ಚೌರಿರ ಕುಟುಂಬಕ್ಕೆ ಸೇರಿದ ಡಿ ಗಣಪತಿ (ಗಪ್ಪು)49, ಎಂಬುವವರೇ ಆನೆ ದಾಳಿಗೆ ಬಲಿಯಾದ ಬೆಳೆಗಾರ.
ಕಾಫಿ ತೋಟ ನೋಡಲು ತೆರಳಿದ ಸಂದರ್ಭ ಕಾಡಾನೆ ದಾಳಿ ಮಾಡಿದ್ದು ಘಟನೆಯಲ್ಲಿ ಗಣಪತಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಹಾಡಗಲೇ ಕಾಫಿ ತೋಟದಲ್ಲಿ ಕಾಡಾನೆಗಳು ಕಾಣಿಸಿಕೊಳ್ಳುತ್ತಿದ್ದರು, ಆನೆಗಳನ್ನು ನಿಯಂತ್ರಣಕ್ಕೆ ತರಲು ಅರಣ್ಯ ಇಲಾಖೆ ವಿಫಲಗೊಂಡಿದೆ ಎಂದು ಆರೋಪಿಸಿರುವ ಸಾರ್ವಜನಿಕರು, ಆನೆ ಹಾವಳಿ ಶಾಶ್ವತವಾಗಿ ತಡೆಗಟ್ಟಲು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.
ಘಟನಾ ಸ್ಥಳಕ್ಕೆ ವಿರಾಜಪೇಟೆ ವಲಯ ಅರಣ್ಯಾಧಿಕಾರಿ, ಸಿದ್ದಾಪುರ ಠಾಣಾಧಿಕಾರಿ ಸೇರಿದಂತೆ ಇಲಾಖಾ ಸಿಬ್ಬಂದಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮುಂದಿನ ಕ್ರಮಕ್ಕಾಗಿ ಮೃತದೇಹವನ್ನು ಸಿದ್ದಾಪುರ ಆಸ್ಪತ್ರೆಗೆ ಸಾಗಿಸಿದ್ದಾರೆ.
ಕಳೆದ ಎರಡು ದಿನಗಳ ಹಿಂದೆಯಷ್ಟೇ ಕಾಡಾನೆ ದಾಳಿಗೆ ಗ್ರಾಮ ಪಂಚಾಯಿತಿ ಸದಸ್ಯೆಯೊಬ್ಬರು ಮೃತ ಪಟ್ಟ ಘಟನೆ ಬಾಳೆಗುಂಡಿ ವ್ಯಾಪ್ತಿಯಲ್ಲಿ ನಡೆದಿತ್ತು. ಅದರ ಬೆನ್ನೆಲೆ ಸಿದ್ದಾಪುರ ವ್ಯಾಪ್ತಿಯಲ್ಲಿ ಬೆಳೆಗಾರ ಆನೆ ದಾಳಿಗೆ ಸಾವನ್ನಪಿರುವ ಘಟನೆ ನಡೆದಿರುವುದು, ಇದೀಗ ಸಾರ್ವಜನಿಕರ ಆತಂಕಕ್ಕೆ ಕಾರಣವಾಗಿದೆ.
ಕೊಡಗು ಜಿಲ್ಲೆಯಲ್ಲಿ ಕಳೆದ ಎರಡು ತಿಂಗಳ ಅವಧಿಯಲ್ಲಿ ಸುಮಾರು 5 ಮಂದಿ ಆನೆ ದಾಳಿಗೆ ಮೃತಪಟ್ಟಿರುವ ಕುರಿತು ವರದಿಯಾಗಿದೆ.







