ಮಡಿಕೇರಿ : ಗೋಣಿಕೊಪ್ಪಲು ಕಾವೇರಿ ಎಜುಕೇಷನ್ಸೊಸೈಟಿ ಆಧೀನದಲ್ಲಿರುವ ವೀರಾಜಪೇಟೆ ಕಾವೇರಿ ಕಾಲೇಜಿನಲ್ಲಿ ಕಾನೂನು ಪದವಿ ಕಾಲೇಜನ್ನು ಆರಂಭಿಸಲು ಅನುಮತಿ ದೊರೆತ್ತಿದ್ದು, ಆ.೨೮ರೊಳಗೆ ವಿದ್ಯಾರ್ಥಿಗಳು ನೋಂದಣಿ ಮಾಡಕೊಳ್ಳಬೇಕು ಎಂದು ಗೋಣಿಕೊಪ್ಪ ಕಾವೇರಿ ಎಜುಕೇಷನ್ ಸೊಸೈಟಿ ಅಧ್ಯಕ್ಷ ಸುಗುಣ ಮುತ್ತಣ್ಣ ತಿಳಿಸಿದ್ದಾರೆ.
ನಗರದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೊಡಗು ಜಿಲ್ಲೆಯಲ್ಲಿ ಕಾನೂನು ಕಾಲೇಜು ಪ್ರಾರಂಭಿಸಬೇಕು ಮತ್ತು ಇಲ್ಲಿನ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ಕಾನೂನು ಪದವಿ ಶಿಕ್ಷಣವನ್ನು ಕೊಡಿಸುವ ಪ್ರಯತ್ನದಲ್ಲಿ ಸಫಲರಾಗಿದ್ದೇವೆ. ಈ ನಿಟ್ಟಿನಲ್ಲಿ ೨೦೨೫-೨೬ನೇ ಶೈಕ್ಷಣಿಕ ವರ್ಷದಲ್ಲಿ ವೀರಾಜಪೇಟೆಯ ಕಾವೇರಿ ಕಾಲೇಜು ಆವರಣದಲ್ಲಿ ಕೆ.ವಿ.ವಿ ಎಜುಕೇಷನ್ನಲ್ ಟ್ರಸ್ಟ್ ಅವರ ಸಹಯೋಗದೊಂದಿಗೆ ಮೂರು ವರ್ಷಗಳ ಕಾನೂನು ಪದವಿ ಕಾಲೇಜನ್ನು ನೂತನವಾಗಿ ಪ್ರಾರಂಭಿಸಲಾಗಿದೆ. ಇದಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಮತ್ತು ಬಾರ್ ಕೌನ್ಸಿಲ್ನ ಅನುಮತಿ ಪಡೆಯಲಾಗಿದೆ. ಕಾನೂನು ಪದವಿ ಕಾಲೇಜು, ಕರ್ನಾಟಕ ರಾಜ್ಯ ಕಾನೂನು ಮಹಾ ವಿಶ್ವವಿದ್ಯಾನಿಲಯ ಹುಬ್ಬಳ್ಳಿ ಮಾನ್ಯತೆಗೊಳಪಟ್ಟಿದು, ಬಾರ್ ಕೌನ್ಸಿಲ್ ಆಫ್ ಇಂಡಿಯಾ ದೆಹಲಿ ಇವರಿಂದ ಅನುಮೋದನೆಗೊಂಡಿದೆ ಎಂದು ಮಾಹಿತಿ ನೀಡಿದರು.
ಗೋಣಿಕೊಪ್ಪ ಕಾವೇರಿ ಎಜುಕೇಷನ್ ಸೊಸೈಟಿ ಗೌರವ ಕಾರ್ಯದರ್ಶಿ ಕುಲ್ಲಚಂಡ.ಪಿ.ಬೋಪಣ್ಣ ಮಾತನಾಡಿ, ಕೊಡಗಿನಲ್ಲಿ ಇದೇ ಪ್ರಥಮ ಬಾರಿಗೆ ಪ್ರಾರಂಭಿಸಲಾಗಿರುವ ಏಕೈಕ ಕಾನೂನು ಪದವಿ ಕಾಲೇಜು ಇದಾಗಿದೆ. ಇದೇ ಶೈಕ್ಷಣಿಕ ವರ್ಷದಿಂದ ೩ ವರ್ಷಗಳ ಕಾನೂನು ಪದವಿ ಕೋರ್ಸ್ಗಳಿಗೆ ದಾಖಲಾತಿ ಪ್ರಾರಂಭಿಸಲಾಗುವುದು. ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯ ಇವರು ನಿಗದಿಪಡಿಸಿರುವ ಆ.೨೮ ರಂದು ಪ್ರವೇಶಾತಿ ಪಡೆಯಲು ಕೊನೆಯ ದಿನವಾಗಿದೆ. ತರಗತಿಗಳು ಸೆಪ್ಟೆಂಬರ್ ಮೊದಲ ವಾರದಲ್ಲಿ ಪ್ರಾರಂಭವಾಗುತ್ತದೆ ಎಂದು ತಿಳಿಸಿದರು.
ಕೆ.ವಿ.ವಿ ಎಜುಕೇಷನಲ್ ಟ್ರಸ್ಟ್ನ ಅಧ್ಯಕ್ಷ ಜಿ.ಎನ್.ನಾಗೇಂದ್ರ ಮಾತನಾಡಿ, ಮೂರು ವರ್ಷದ ಕಾನೂನು ಪದವಿ ಶಿಕ್ಷಣವನ್ನು ಅತ್ಯಾಧುನಿಕ ಸೌಲಭ್ಯದೊಂದಿಗೆ ನುರಿತ ಉಪನ್ಯಾಸಕರು, ಸುಸಜ್ಜಿತ ಗ್ರಂಥಾಲಯ ಸೌಲಭ್ಯ, ಮಾದರಿ ಕೋರ್ಟ್, ಇಂಟರ್ನ್ಶಿಫ್ ಸಹಾಯ, ಪ್ರಾಯೋಗಿಕ ತರಗತಿಗಳು, ಕರ್ನಾಟಕ ಲಾ ಅಕಾಡಮಿ ಇವರೊಂದಿಗೆ ಆನ್ಲೈನ್ ಉಪನ್ಯಾಸಗಳು, ವಸತಿ ನಿಲಯ, ಬಸ್ ಸೌಲಭ್ಯ ಸೇರಿದಂತೆ ಇನ್ನಿತರ ಸೌಲಭ್ಯಗಳನ್ನು ಒದಗಿಸಲಾಗಿದೆ. ಕೊಡಗು ಹಾಗೂ ಅಕ್ಕ ಪಕ್ಕದ ಜಿಲ್ಲೆಯ ವಿದ್ಯಾರ್ಥಿಗಳು ಕಾನೂನು ಪದವಿ ಕಾಲೇಜಿನ ಸದುಪಯೋಗ ಪಡೆದುಕೊಳ್ಳುವಂತೆ ಮನವಿ ಮಾಡಿದ ಅವರು, ಹೆಚ್ಚಿನ ಮಾಹಿತಿಗಾಗಿ ೮೭೯೨೮೩೯೧೭೬, ೯೮೪೪೨೩೧೧೯೧ ಸಂಪರ್ಕಿಸಬಹುದು ಎಂದರು.
ಸುದ್ದಿಗೋಷ್ಠಿಯಲ್ಲಿ ಕೆ.ವಿ.ವಿ ಎಜುಕೇಷನಲ್ ಟ್ರಸ್ಟ್ನ ಕಾರ್ಯದರ್ಶಿ ವೇದಿಕ ರೆಡ್ಡಿ, ಟ್ರಸ್ಟಿ ಪ್ರಶಾಂತ್ ಸುದ್ದಿಗೋಷ್ಠಿಯಲ್ಲಿದ್ದರು.







