Breaking News :

ಕೊಡಗು ಬ್ರಾಹ್ಮಣ ವಿದ್ಯಾಭಿವೃದ್ಧಿ ನಿಧಿ ಯಿಂದ ವಿಪ್ರ ಕ್ರೀಡೋತ್ಸವ


ಜನವಾಹಿನಿ News ಮಡಿಕೇರಿ: ಬ್ರಾಹ್ಮಣ ವಿದ್ಯಾಭಿವೃದ್ಧಿ ನಿಧಿ ಮಡಿಕೇರಿ ಇವರ ನೇತೃತ್ವದಲ್ಲಿ ಕುಶಾಲನಗರ, ಸೋಮವಾರಪೇಟೆ, ಪೊನ್ನಂಪೇಟೆ, ವಿರಾಜಪೇಟೆ ತಾಲೂಕು ಬ್ರಾಹ್ಮಣ ಸಮಾಜಗಳ ಸಂಯುಕ್ತಾಶ್ರಯದಲ್ಲಿ ಡಿ.೭ ಮತ್ತು ಡಿ.೧೪ರಂದು ೪ನೇ ವರ್ಷದ ವಿಪ್ರ ಕ್ರೀಡೋತ್ಸವ ಹಮ್ಮಿಕೊಳ್ಳಲಾಗಿದೆ ಎಂದು ಬ್ರಾಹ್ಮಣ ವಿದ್ಯಾಭಿವೃದ್ಧಿ ನಿಧಿ ಅಧ್ಯಕ್ಷ ಮೂಗೂರು ರಾಮಚಂದ್ರ ತಿಳಿಸಿದರು.

ನಗರದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಡಿ.೭ರಂದು ಜಿಲ್ಲಾಮಟ್ಟದ ಶೆಟಲ್ ಹಾಗೂ ಟೇಬಲ್ ಟೆನಿಸ್ ಪಂದ್ಯಾಟ ನಗರದ ಮ್ಯಾನ್ಸ್ ಕಾಂಪೌಂಡ್‌ನಲ್ಲಿರುವ ಒಳಾಂಗಣ ಕ್ರೀಡಾಂಗಣದಲ್ಲಿ ನಡೆಯಲಿದೆ. ಬೆಳಗ್ಗೆ ೯ ಗಂಟೆಗೆ ಪಂದ್ಯಾಟ ಆರಂಭಗೊಳ್ಳಲಿದ್ದು, ಪುರುಷರ ಸಿಂಗಲ್ಸ್, ಡಬಲ್ಸ್, ಮಹಿಳೆಯರ ಸಿಂಗಲ್ಸ್ ಮತ್ತು ಡಬಲ್ಸ್ ಹಾಗೂ ಬಾಲಕ ಬಾಲಕಿಯರ ವಿಭಾಗ ಮತ್ತು ೫೦ ವರ್ಷ ಮೇಲ್ಪಟ್ಟವರ ವಿಭಾಗದಲ್ಲಿ ಸ್ಪರ್ಧೆಗಳು ನಡೆಯಲಿದೆ. ಭಾಗವಹಿಸುವ ಕ್ರೀಡಾಪಟುಗಳು ಅದೇ ದಿನ ಹೆಸರು ನೋಂದಾಯಿಸಿಕೊಳ್ಳಬಹುದು ಎಂದು ತಿಳಿಸಿದರು.

ಕಾರ್ಯದರ್ಶಿ ಬಿ.ಕೆ.ಜಗದೀಶ್ ಮಾತನಾಡಿ, ಡಿ.೧೪ರಂದು ವಿರಾಜಪೇಟೆಯ ಜೂನಿಯರ್ ಕಾಲೇಜು ಮೈದಾನದಲ್ಲಿ ಕ್ರಿಕೆಟ್ ಪಂದ್ಯಾಟ ಆಯೋಜಿಸಲಾಗಿದೆ. ಈಗಾಗಲೇ ೯ ತಂಡಗಳು ಹೆಸರು ನೋಂದಾಯಿಸಿಕೊಂಡಿದೆ. ವಿಜೇತರಿಗೆ ಆಕರ್ಷಕ ಟ್ರೋಫಿ ನೀಡಿ ಗೌರವಿಸಲಾಗುವುದು. ಕ್ರಿಕೆಟ್ ಪಂದ್ಯಾಟದ ನಡುವಿನಲ್ಲಿ ಸಭಾಕಾರ್ಯಕ್ರಮ ನಡೆಯಲಿದ್ದು, ವಿಪ್ರ ಸಮಾಜದ ಗಣ್ಯರು ಪಾಲ್ಗೊಳ್ಳಲಿದ್ದಾರೆ. ಸಂಜೆ ೪ ಗಂಟೆಗೆ ಜಿಲ್ಲಾ ಮಟ್ಟದ ಹಗ್ಗಜಗ್ಗಾಟ ಪಂದ್ಯಾಟ ಪುರುಷ ಮತ್ತು ಮಹಿಳೆಯರ ಪ್ರತ್ಯೇಕ ವಿಭಾಗದಲ್ಲಿ ನಡೆಯಲಿದೆ ಎಂದು ತಿಳಿಸಿದರು.

ಜಿಲ್ಲೆಯ ವಿವಿಧ ತಾಲೂಕುಗಳಲ್ಲಿ ವಿಪ್ರ ಕ್ರೀಡೋತ್ಸವದ ಅಂಗವಾಗಿ ತಾಲೂಕು ಮಟ್ಟದ ಟೆಸ್, ಕೇರಂ ಮತ್ತು ಇತರೆ ಮನೋರಂಜನಾ ಕ್ರೀಡೆಗಳು ನಡೆಯಲಿವೆ. ಕ್ರೀಡೋತ್ಸವದ ಸಮಾರೋಪ ಸಮಾರಂಭ ಜನವರಿ ತಿಂಗಳಲ್ಲಿ ನಡೆಯಲಿದ್ದು, ತಾಲೂಕು ಮಟ್ಟದಲ್ಲಿ ಟೆಸ್, ಕೇರಂ ವಿಭಾಗದಲ್ಲಿ ಜಯ ಸಾಧಿಸಿದವರಿಗೆ ಜಿಲ್ಲಾಮಟ್ಟದ ಪಂದ್ಯಾಟ ನಡೆಯಲಿದೆ. ಸಮಾರೋಪ ಸಮಾರಂಭದಲ್ಲಿ ಪ್ರತಿಭಾ ಪುರಸ್ಕಾರ ಮತ್ತು ಸಾಧಕರಿಗೆ ಸನ್ಮಾನ ಕಾರ್ಯಕ್ರಮ ನಡೆಯಲಿದೆ. ಕೊಡಗಿನ ಬ್ರಾಹ್ಮಣ ಸಮಾಜದ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ವಿಪ್ರ ಕ್ರೀಡೋತ್ಸವವನ್ನು ಯಶಸ್ವಿಗೊಳಿಸಬೇಕು ಎಂದು ಮನವಿ ಮಾಡಿದ ಅವರು, ಹೆಚ್ಚಿನ ಮಾಹಿತಿಗಾಗಿ ೯೪೮೩೩೩೩೦೦೭ ಸಂಪರ್ಕಿಸಬಹುದು ಎಂದು ತಿಳಿಸಿದರು.

ಬ್ರಾಹ್ಮಣ ವಿದ್ಯಾಭಿವೃದ್ಧಿ ನಿಧಿ ಉಪಾಧ್ಯಕ್ಷ ಭರತೀಶ್ ಕಂಡಿಗೆ, ನಿದೇರ್ಶಕರಾದ ಶ್ಯಾಮಲ, ಅರುಣ್ ಕುಮಾರ್ ಸುದ್ದಿಗೋಷ್ಠಿಯಲ್ಲಿದ್ದರು.

 

 

Share this article

ಟಾಪ್ ನ್ಯೂಸ್

More News