Breaking News :

ಕೊಡವ ಮಕ್ಕಡ ಕೂಟದ ೧೧೭ನೇ ಪುಸ್ತಕ “ಕೊಡಗ್‌ಲ್ ಆನೆ-ಮಾಲವ ಪಣಂಗಲ್” ಬಿಡುಗಡೆ : ಆನೆ ಮಾನವ ಸಂಘರ್ಷ ತಡೆಗೆ ಯುವ ಜಾಗೃತಿ ಅಗತ್ಯ : ಮೇಜರ್ ಪ್ರೊ.ಬಿ.ರಾಘವ ಅಭಿಮತ

 

 

ಕೊಡವ ಮಕ್ಕಡ ಕೂಟದ ೧೧೭ನೇ ಪುಸ್ತಕ “ಕೊಡಗ್‌ಲ್ ಆನೆ-ಮಾಲವ ಪಣಂಗಲ್” ಬಿಡುಗಡೆ : ಆನೆ ಮಾನವ ಸಂಘರ್ಷ ತಡೆಗೆ ಯುವ ಜಾಗೃತಿ ಅಗತ್ಯ : ಮೇಜರ್ ಪ್ರೊ.ಬಿ.ರಾಘವ ಅಭಿಮತ


ಜನವಾಹಿನಿ NEWS ಮಡಿಕೇರಿ  : ಇತ್ತೀಚಿನ ವರ್ಷಗಳಲ್ಲಿ ಆನೆ ಮಾನವ ಸಂಘರ್ಷ ಗಂಭೀರ ಸ್ವರೂಪವನ್ನು ಪಡೆದುಕೊಳ್ಳುತ್ತಿದ್ದು, ಸಮಸ್ಯೆಗೆ ಪರಿಹಾರವನ್ನು ಕಂಡುಕೊಳ್ಳಲು ಯುವ ಸಮೂಹದಲ್ಲಿ ಜಾಗೃತಿ ಮೂಡಿಸುವ ಅಗತ್ಯವಿದೆ ಎಂದು ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಕಾಲೇಜ್ ನ ಪ್ರಾಂಶುಪಾಲರಾದ ಮೇಜರ್ ಪ್ರೊ.ಬಿ.ರಾಘವ ಅಭಿಪ್ರಾಯಪಟ್ಟಿದ್ದಾರೆ.
ಕೊಡವ ಮಕ್ಕಡ ಕೂಟದ ಸ್ಥಾಪಕಾಧ್ಯಕ್ಷ ಬೊಳ್ಳಜಿರ ಬಿ.ಅಯ್ಯಪ್ಪ ಅವರ ಜನ್ಮದಿನದ ಅಂಗವಾಗಿ ನಗರದ ಪತ್ರಿಕಾ ಭವನದಲ್ಲಿ ಕೂಟದ ೧೧೭ನೇ ಪುಸ್ತಕ, ಬರಹಗಾರ್ತಿ ಚೀಯಕಪೂವಂಡ ಶ್ವೇತನ್ ಚಂಗಪ್ಪ ಅವರು ರಚಿಸಿರುವ “ಕೊಡಗ್‌ಲ್ ಆನೆ-ಮಾಲವ ಪಣಂಗಲ್” ನ್ನು ಬಿಡುಗಡೆಗೊಳಿಸಿ ಅವರು ಮಾತನಾಡಿದರು.
ಆನೆ ಮಾನವ ಸಂಘರ್ಷದಿAದ ಕೇವಲ ಮಾನವನಿಗೆ ಮಾತ್ರ ಹಾನಿಯಾಗುತ್ತಿಲ್ಲ, ಆನೆಗಳಿಗೂ ಹಾನಿಯಾಗುತ್ತಿದೆ. ಸಮಸ್ಯೆಯ ಗಂಭೀರತೆ ಮತ್ತು ಕಾರಣಗಳ ಕುರಿತು ಯುವ ಸಮೂಹದಲ್ಲಿ ಜಾಗೃತಿ ಮೂಡಿಸಬೇಕು. ಅರಣ್ಯ ನಾಶ, ಟಿಂಬರ್ ಲಾಬಿ, ಆಹಾರದ ಕೊರತೆ, ಮಾನವನ ಅತಿಕ್ರಮಣ, ಮಿತಿ ಮೀರುತ್ತಿರುವ ಪ್ರವಾಸಿಗರ ಸಂಖ್ಯೆ, ಅತಿಯಾದ ತ್ಯಾಜ್ಯ ಎಂಬಿತ್ಯಾದಿ ವಿಚಾರಗಳು ಕಾಡಾನೆಗಳ ದಾಳಿಗೆ ಕಾರಣವಾಗುತ್ತಿದೆಯೇ ಎನ್ನುವ ಕುರಿತು ಚಿಂತನೆ ನಡೆಯಬೇಕು. ಯುವ ಸಮೂಹ ಈ ನಿಟ್ಟಿನಲ್ಲಿ ಹೆಚ್ಚು ಆಸಕ್ತಿ ವಹಿಸಬೇಕು, ಪರಿಸರ ಮತ್ತು ಪ್ರಾಣಿಗಳ ಬಗ್ಗೆ ಕಾಳಜಿ ತೋರಬೇಕು ಎಂದು ಕರೆ ನೀಡಿದರು.
“ಕೊಡಗ್‌ಲ್ ಆನೆ-ಮಾಲವ ಪಣಂಗಲ್” ಪುಸ್ತಕದಲ್ಲಿ ಆನೆ ಮತ್ತು ಮಾನವನ ಸಂಬAಧ, ಮಾವುತನೊಂದಿಗಿನ ಒಡನಾಟ ಮತ್ತಿತರ ಪರಿಸರ ಸ್ನೇಹಿ ವಿಚಾರಗಳನ್ನು ಸುಂದರವಾಗಿ ವಿವರಿಸಿದ್ದಾರೆ. ಅರಸರು ಹಾಗೂ ಬ್ರಿಟಿಷರ ಕಾಲದಿಂದಲೂ ಆನೆಗಳು ಮಾನವನಿಗೆ ಎಷ್ಟು ಉಪಯುಕ್ತ ಎನ್ನುವುದನ್ನು ವಿಶ್ಲೇಷಿಸಿದ್ದಾರೆ. ಇದೊಂದು ಅತ್ಯುತ್ತಮ ಪುಸ್ತಕ ಎಂದು ಶ್ಲಾಘಿಸಿದರು.
ಫೀ.ಮಾ.ಕಾರ್ಯಪ್ಪ ಕಾಲೇಜ್ ನಲ್ಲಿ ಕೊಡವ ಎಂ.ಎ ಪದವಿ ಪಡೆದ ೯ ವಿದ್ಯಾರ್ಥಿಗಳು ಸಾಹಿತಿಗಳಾಗಿ ಮಾರ್ಪಟ್ಟಿದ್ದಾರೆ. ಅಲ್ಲದೆ ಅಧ್ಯಯನ ಕೃತಿಗಳನ್ನು ರಚಿಸಿದ್ದಾರೆ, ಈ ಪದವಿ ಕೊಡವ ಭಾಷೆ, ಸಾಹಿತ್ಯ, ಸಂಸ್ಕೃತಿ, ಆಚಾರ, ವಿಚಾರಗಳ ಬೆಳವಣಿಗೆಗೆ ಪೂರಕವಾಗಿದೆ. ಕಾಲೇಜ್ ನ ಜವಾಬ್ದಾರಿ ಹೆಚ್ಚಾಗಿದ್ದು, ಕೊಡವ ಎಂ.ಎ ಗೆ ಮತ್ತು ಕೊಡಗು ವಿವಿ ಗೆ ನಾಗರೀಕರ ಸಹಕಾರ ಅಗತ್ಯ ಎಂದು ಪ್ರೊ.ಬಿ.ರಾಘವ ಹೇಳಿದರು.
ಹಿರಿಯ ಸಾಹಿತಿ ಬಾಚರಣಿಯಂಡ ಪಿ.ಅಪ್ಪಣ್ಣ ಅವರು ಮಾತನಾಡಿ ಓದುಗರು ಪುಸ್ತಕಗಳನ್ನು ಓದಿದರೆ ಸಾಲದು, ಅದರಲ್ಲಿರುವ ಸರಿ ತಪ್ಪುಗಳನ್ನು ವಿಶ್ಲೇಷಣೆ ಮಾಡಬೇಕು ಮತ್ತು ಬರಹಗಾರರ ಗಮನಕ್ಕೆ ತರಬೇಕು. ಈ ರೀತಿ ಮಾಡುವುದರಿಂದ ಬರಹಗಾರರು ತಮ್ಮ ತಪ್ಪುಗಳನ್ನು ತಿದ್ದಿಕೊಳ್ಳಲು ಸಾಧ್ಯವಾಗುತ್ತದೆ ಮತ್ತು ಬರಹಗಾರರಿಗೆ ಪ್ರೋತ್ಸಾಹ ನೀಡಿದಂತ್ತಾಗುತ್ತದೆ ಎಂದರು.
ಪುಸ್ತಕಗಳನ್ನು ಮುದ್ರಣಕ್ಕೆ ನೀಡುವ ಮೊದಲು ಅಕ್ಷರದಲ್ಲಿನ ತಪ್ಪುಗಳನ್ನು ಪರಿಗಣಿಸಬೇಕು, ಯಾವುದೇ ವಿಷಯಕ್ಕೆ ದಕ್ಕೆಯಾಗದಂತೆ ಎಚ್ಚರ ವಹಿಸಬೇಕು ಎಂದು ಕಿವಿಮಾತು ಹೇಳಿದರು.
“ಕೊಡಗ್‌ಲ್ ಆನೆ-ಮಾಲವ ಪಣಂಗಲ್” ಪುಸ್ತಕವನ್ನು ಪರಿಸರ ಪ್ರೇಮಿಗಳು, ಪ್ರಾಣಿ ಪ್ರಿಯರು ಓದಲೇ ಬೇಕು. ಇದೊಂದು ಸಂಶೋಧನಾತ್ಮಕ ಪುಸ್ತಕವಾಗಿದ್ದು, ಆನೆಯ ವಿಚಾರವನ್ನು ಬರಹಗಾರರು ಅಚ್ಚುಕಟ್ಟಾಗಿ ವಿವರಿಸಿದ್ದಾರೆ. ಪರಿಸರ ಸಂರಕ್ಷಣೆಗೆ ಹೆಚ್ಚು ಒತ್ತು ನೀಡಲಾಗಿದೆ, ಕೊಡವ ಮಕ್ಕಡ ಕೂಟ ಸಂಘಟನೆ ಅತ್ಯಂತ ಕಡಿಮೆ ಅವಧಿಯಲ್ಲಿ ೧೧೭ ಪುಸ್ತಕಗಳನ್ನು ಬಿಡುಗಡೆ ಮಾಡುವ ಮೂಲಕ ದಾಖಲೆ ನಿರ್ಮಿಸಿದೆ. ಅಧ್ಯಕ್ಷ ಬೊಳ್ಳಜಿರ ಬಿ.ಅಯ್ಯಪ್ಪ ಅವರ ಪರಿಶ್ರಮ ಶ್ಲಾಘನೀಯವಾದದ್ದು ಎಂದು ಬಾಚರಣಿಯಂಡ ಪಿ.ಅಪ್ಪಣ್ಣ ಮೆಚ್ಚುಗೆ ವ್ಯಕ್ತಪಡಿಸಿದರು.
“ಕೊಡಗ್‌ಲ್ ಆನೆ-ಮಾಲವ ಪಣಂಗಲ್” ಕೊಡವ ಪುಸ್ತಕದ ಬರಹಗಾರ್ತಿ ಚೀಯಕಪೂವಂಡ ಶ್ವೇತನ್ ಚಂಗಪ್ಪ ಅವರು ಮಾತನಾಡಿ ಕಾಡಾನೆಗಳು ನಾಡಿಗೆ ಬರುತ್ತಿವೆ ಎನ್ನುವ ಮಾತು ತಪ್ಪು, ಆನೆಗಳ ಜಾಗ ಮತ್ತು ಮಾರ್ಗವನ್ನು ಮಾನವನೇ ಅತಿಕ್ರಮಣ ಮಾಡಿಕೊಂಡಿದ್ದಾನೆ. ಆನೆ ಮಾನವನ ನಡುವಿನ ಸಂಘರ್ಷದಲ್ಲಿ ಮಾನವನಿಗೇ ಮಾತ್ರ ಹಾನಿಯಾಗುತ್ತಿಲ್ಲ, ಆನೆಗಳಿಗೂ ಹಾನಿಯಾಗುತ್ತಿದೆ. ಮಾನವನ ತಪ್ಪಿನಿಂದ ಆನೆಗಳು ಜೀವವನ್ನು ಕಳೆದುಕೊಳ್ಳುತ್ತಿವೆ ಎಂದರು.
ಆನೆಯನ್ನು ಗಜಾನನ ಸ್ವರೂಪ, ದೇವರ ಸಮ ಎಂದೆಲ್ಲ ಪರಿಗಣಿಸುತ್ತಾರೆ, ಆನೆ ಪರೋಪಕಾರಿಯಾಗಿದೆ. ತಾನು ಸೇವಿಸುವ ಆಹಾರದಲ್ಲಿ ಸಣ್ಣಪುಟ್ಟ ಪ್ರಾಣಿ, ಪಕ್ಷಿಗಳಿಗೆ ಉಳಿಸಿ ಹೋಗುವ ಗುಣವಿದೆ. ಇಂದು ಮಾನವನ ಅತಿಕ್ರಮಣದಿಂದ ದಾರಿ ತಪ್ಪುತ್ತಿರುವ ಆನೆಗಳು ನಾಡಿಗೆ ಬರುತ್ತಿವೆಯೇ ಹೊರತು ಆನೆಗಳಿಂದ ತಪ್ಪು ನಡೆಯುತ್ತಿಲ್ಲವೆಂದು ಪ್ರತಿಪಾದಿಸಿದರು.
ಮುಖ್ಯವಾಗಿ ಆನೆ ಮಾನವ ಸಂಘರ್ಷ ತಡೆಗೆ ಮಾರ್ಗೋಪಾಯಗಳನ್ನು ಕಂಡುಕೊಳ್ಳಬೇಕಾಗಿದೆ. ತೋಟಗಳಲ್ಲಿ ಜೇನು ಕೃಷಿ ಮಾಡಿದರೆ ಆನೆಗಳು ಬರುವುದಿಲ್ಲವೆಂದು ಅಧ್ಯಯನ ಹೇಳುತ್ತದೆ. ಬೆಳೆಗಾರರು ಈ ಬಗ್ಗೆ ಚಿಂತನೆ ನಡೆಸಬೇಕಾಗಿದೆ ಎಂದು ಶ್ವೇತನ್ ಚಂಗಪ್ಪ ತಿಳಿಸಿದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಕೊಡವ ಮಕ್ಕಡ ಕೂಟದ ಅಧ್ಯಕ್ಷ ಬೊಳ್ಳಜಿರ ಬಿ.ಅಯ್ಯಪ್ಪ ಅವರು ಇಂದು ಪರಿಸರ ದುರ್ಬಳಕೆಯಾಗುತ್ತಿದ್ದು, ಮಾನವನ ದುರಾಸೆಯೇ ಕಾಡಾನೆ ದಾಳಿಗೆ ಕಾರಣ ಎಂದು ಅಭಿಪ್ರಾಯಪಟ್ಟರು.
ಹಿಂದೆ ಕೊಡಗಿನಲ್ಲಿ ದೇವರಕಾಡು, ಗೋಮಾಳಗಳ ಮೂಲಕ ಕಾಡುಗಳನ್ನು ರಕ್ಷಿಸಲಾಗುತ್ತಿತ್ತು. ಕಕ್ಕಡ, ಕೈಲ್ ಪೊಳ್ದ್, ಪುತ್ತರಿ, ಕಾವೇರಿ ತೀರ್ಥೋದ್ಭವ ಸೇರಿದಂತೆ ಕೊಡಗಿನ ಹಬ್ಬಗಳೆಲ್ಲವೂ ಪರಿಸರಕ್ಕೆ ಪೂರಕವಾಗಿದೆ ಮತ್ತು ಪರಿಸರ ಭಕ್ತಿಯಿಂದ ಕೂಡಿದೆ. ಇದರ ಹಿಂದೆ ಪರಿಸರವನ್ನು ಪೂಜಿಸಿ, ಉಳಿಸುವ ಪರಿಕಲ್ಪನೆ ಇದೆ. ಹಿರಿಯರು ಪರಿಸರವನ್ನು ಪೂಜಿಸುತ್ತಿದ್ದರು, ಆದರೆ ಇಂದು ಮಾನವನ ದುರಾಸೆ ಹೆಚ್ಚಾಗಿದೆ, ಪರಿಸರದ ಮೇಲೆ ಆಕ್ರಮಣವಾಗುತ್ತಿದೆ. ರೆಸಾರ್ಟ್, ಹೋಂಸ್ಟೇ, ಲೇಔಟ್ ಗಳ ಸಂಖ್ಯೆ ಹೆಚ್ಚಾಗುತ್ತಿದೆ. ಮನುಷ್ಯ ಮಾಡುತ್ತಿರುವ ತಪ್ಪಿನಿಂದಲೇ ಕಾಡಾನೆಗಳ ದಾಳಿಯಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.
“ಕೊಡಗ್‌ಲ್ ಆನೆ-ಮಾಲವ ಪಣಂಗಲ್” ಸಮಗ್ರ ಮಾಹಿತಿಯನ್ನೊಳಗೊಂಡ ಅತ್ಯುತ್ತಮ ಕೃತಿಯಾಗಿದ್ದು, ಇದನ್ನು ರಚಿಸಲು ಬರಹಗಾರರು ೬ ತಿಂಗಳು ಶ್ರಮಪಟ್ಟಿದ್ದಾರೆ. ಈ ಪುಸ್ತಕವನ್ನು ಜಿಲ್ಲೆಯ ಎಲ್ಲಾ ರೈತರಿಗೆ ನೀಡಲಾಗುವುದು ಎಂದರು.
ಕೊಡವ ಮಕ್ಕಡ ಕೂಟ ಎಲ್ಲಾ ಭಾಷೆಗಳ ಪುಸ್ತಕಗಳಿಗೆ ಪ್ರೋತ್ಸಾಹ ನೀಡುತ್ತಿದೆ. ಕೊಡವ ಭಾಷೆಯಲ್ಲಿರುವ ಉತ್ತಮ ಕೃತಿಗಳನ್ನು ಕನ್ನಡಕ್ಕೆ ಭಾಷಾಂತರ ಮಾಡಲು ಮುಂದೆ ಬರುವವರಿಗೆ ಅವಕಾಶ ನೀಡುವುದಾಗಿ ಬೊಳ್ಳಜಿರ ಅಯ್ಯಪ್ಪ ತಿಳಿಸಿದರು.
ಜ್ಞಾನೋದಯ ಶಾಲೆಯ ಸಂಯೋಜಕರು ಹಾಗೂ ಬೆಳೆಗಾರರಾದ ಚೀಯಕಪೂವಂಡ ಮಿಥುನ್ ಚಂಗಪ್ಪ ಅವರು ಮಾತನಾಡಿ ರೈತರು ಹಾಗೂ ವನ್ಯಜೀವಿಗಳ ನಡುವಿನ ಸಂಘರ್ಷದಿAದ ಅಪಾರ ಬೆಳೆನಷ್ಟ ಮತ್ತು ಜೀವಹಾನಿಯಾಗುತ್ತಿದೆ. ಈ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿದ ಚೀಯಕಪೂವಂಡ ಶ್ವೇತನ್ ಚಂಗಪ್ಪ ಅವರು ಅರಣ್ಯ ಇಲಾಖೆಯೊಂದಿಗೆ ಸಮಾಲೋಚಿಸಿ ಪುಸ್ತಕವನ್ನು ರಚಿಸಿದ್ದಾರೆ ಎಂದರು.
ಕಳೆದ ೧೨ ವರ್ಷಗಳಿಂದ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಿ ಸಾಹಿತ್ಯ ಕ್ಷೇತ್ರಕ್ಕೆ ಪ್ರೋತ್ಸಾಹ ನೀಡುತ್ತಿರುವ ಕೊಡವ ಮಕ್ಕಡ ಕೂಟ ಇಲ್ಲಿಯವರೆಗೆ ೧೧೭ ಪುಸ್ತಕಗಳನ್ನು ಬಿಡುಗಡೆ ಮಾಡಿದ್ದು, ಇದು ನಿರಂತರ ಶ್ರಮಕ್ಕೆ ದೊರೆತ ಫಲವಾಗಿದೆ ಎಂದು ಅಭಿಪ್ರಾಯಪಟ್ಟರು.
ಪಟ್ಟಣ ಸಹಕಾರ ಬ್ಯಾಂಕ್ ನ ನಿವೃತ್ತ ವ್ಯವಸ್ಥಾಪಕರಾದ ಇಟ್ಟಿರ ಸರೋಜಿನಿ ಪೂವಯ್ಯ ಉಪಸ್ಥಿತರಿದ್ದರು.
*ಚೀಯಕಪೂವಂಡ ಶ್ವೇತನ್ ಚಂಗಪ್ಪ ಪರಿಚಯ*
ಚೀಯಕಪೂವಂಡ ರವಿ ಮತ್ತು ತಿಲಕಮ್ಮ ದಂಪತಿಯ ಹಿರಿಯ ಪುತ್ರ ಚೀಯಕಪೂವಂಡ ಮಿಥುನ್ ಚಂಗಪ್ಪ ಅವರನ್ನು ವಿವಾಹವಾಗಿರುವ ಚೀಯಕಪೂವಂಡ ಶ್ವೇತನ್ ಚಂಗಪ್ಪ (ತಾಮನೆ ಇಟ್ಟೀರ). ಟೌನ್ ಬ್ಯಾಂಕ್ ನಿವೃತ್ತ ಉದ್ಯೋಗಿ ದಿ.ಪೂವಯ್ಯ ಮತ್ತು ಸರೋಜಿನಿ ದಂಪತಿಯ ಪುತ್ರಿ.
ಬಲ್ಲಮಾವಟಿ ಗ್ರಾಮದಲ್ಲಿ ವಾಸ ಇರುವ ಶ್ವೇತನ್ ಚಂಗಪ್ಪ ಭಾಗಮಂಡಲದ ಜ್ಞಾನೋದಯ ಆಂಗ್ಲ ಮಾಧ್ಯಮ ಪ್ರೌಢ ಶಾಲೆಯ ಸಂಚಾಲಕಿಯಾಗಿ, ಮುಖ್ಯೋಪದ್ಯಾಯಿನಿಯಗಿ ಕಾರ್ಯನಿರ್ವಹಿಸಿಕೊಂಡು ಗ್ರಾಮೀಣ ಭಾಗದ ಮಕ್ಕಳಿಗೆ ವಿದ್ಯಾರ್ಜನೆ ಮಾಡುತ್ತಿದ್ದಾರೆ.
ಇವರ ವಿದ್ಯಾಸಂಸ್ಥೆಯ ವಿದ್ಯಾರ್ಥಿಗಳು ಹಲವು ಸ್ಪರ್ಧೆಗಳಲ್ಲಿ ರಾಜ್ಯಮಟ್ಟ ಮತ್ತು ರಾಷ್ಟç ಮಟ್ಟದಲ್ಲಿ ಭಾಗವಹಿಸಿದ್ದಾರೆ. ಮೊದಲ ಬ್ಯಾಚ್‌ನಿಂದಲೂ ಶೇ.೧೦೦ ರಷ್ಟು ಫಲಿತಾಂಶವನ್ನು ಶಿಕ್ಷಣ ಸಂಸ್ಥೆ ಪಡೆದುಕೊಂಡು ಬಂದಿದೆ.
ಕೊಡಗು ವಿದ್ಯಾಲಯದಲ್ಲಿ ಪಿಯುಸಿ ಮುಗಿಸಿದ ಇವರು ಉತ್ತಮ ಬಾಸ್ಕೆಟ್ ಬಾಲ್ ಪ್ಲೇಯರ್, ಹಾಡುಗಾರ್ತಿ ಹಾಗೂ ಶಾರ್ಪ್ ಶೂಟರ್ ಕೂಡ ಆಗಿದ್ದಾರೆ.
೧೯೯೫ರಲ್ಲಿ ಎನ್‌ಸಿಸಿಯಲ್ಲಿ ೧೯ನೇ ಕರ್ನಾಟಕ ಬೆಟಾಲಿಯನ್ ಎಲ್‌ಸಿಪಿಎಲ್, ೨೦೦೧ ರಲ್ಲಿ ಬಿ.ಕಾಂ, ೨೦೦೩ ರಲ್ಲಿ ಎಂ.ಕಾA ನಲ್ಲಿ ರಾಜ್ಯಕ್ಕೆ ನಾಲ್ಕನೇ ರ‍್ಯಾಂಕ್ ಪಡೆದುಕೊಂಡಿದ್ದಾರೆ. ೨೦೦೫ರಲ್ಲಿ ಆಂಧ್ರ ಯೂನಿವರ್ಸಿಟಿಯಲ್ಲಿ ಎಂ.ಫಿಲ್ ಪದವಿ, ೨೦೦೭ರಲ್ಲಿ ಬಿ.ಎಡ್, ೨೦೧೧ರಲ್ಲಿ ಎಂಎಸ್ ನಲ್ಲಿ ಶೇ.೯೬ ರಷ್ಟು ಅಂಕ ಪಡೆದು ಚಿನ್ನದ ಪದಕ ಪಡೆದುಕೊಂಡಿದ್ದಾರೆ. ೨೦೨೪ರಲ್ಲಿ ಎಂ.ಎ (ಕೊಡವ) ಇದು ಇವರ ನಾಲ್ಕನೇ ಮಾಸ್ಟರ್ಸ್ ಡಿಗ್ರಿ ಆಗಿದೆ.
೨೦೧೩ರಲ್ಲಿ ಕರ್ನಾಟಕ ಕಾವಲು ಪಡೆಯ “ಆದರ್ಶ ಶಿಕ್ಷಕ ಪ್ರಶಸ್ತಿ, ೨೦೧೫ರಲ್ಲಿ ಕರ್ನಾಟಕ ಸಾಂಸ್ಕೃತಿಕ ಅಕಾಡೆಮಿಯ ರಾಜ್ಯ ಮಟ್ಟದ ಶಿಕ್ಷಣ ರತ್ನ ಪ್ರಶಸ್ತಿ, ೨೦೧೭ ರಲ್ಲಿ ರಾಜ್ಯಮಟ್ಟದ ವಿಶ್ವಮಾನ್ಯ ಕನ್ನಡಿಗ ಪ್ರಶಸ್ತಿ, ೨೦೧೮ರಲ್ಲಿ ಜಿಲ್ಲಾ ಮಟ್ಟದ ಮಹಿಳಾ ಸಮ್ಮಿಲನ ಮತ್ತು ಜನಜಾಗೃತಿ ವೇದಿಕೆ ಕೊಡಗು ಇವರ ಸಾಧಕ ಮಹಿಳಾ ಪ್ರಶಸ್ತಿ, ೨೦೨೪ರಲ್ಲಿ ಡಾ.ಸರ್ವಪಲ್ಲಿ ರಾಧಕೃಷ್ಣನ್ ಶಿಕ್ಷಣ ಪರಿಷತ್ (ರಿ)ನಿಂದ ರಾಜ್ಯ ಮಟ್ಟದ ಗುರುಶ್ರೇಷ್ಠ ಪ್ರಶಸ್ತಿ, ೨೦೨೪ರಲ್ಲಿ ಕೊಡಗು ಜಿ.ಪಂ ಶಾಲಾ ಶಿಕ್ಷಣ ಇಲಾಖೆಯ ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕಿ ಪ್ರಶಸ್ತಿ ಪಡೆದುಕೊಂಡಿದ್ದಾರೆ.
ಕೊಡಗ್‌ಲ್ ಆನೆ-ಮಾಲವ ಪಣಂಗಲ್ ಶ್ವೇತನ್ ಚಂಗಪ್ಪ ಅವರ ಮೊದಲ ಪುಸ್ತಕವಾಗಿದೆ.

Share this article

ಟಾಪ್ ನ್ಯೂಸ್

More News