Breaking News :

ಗಸ್ತು ತಿರುಗುತ್ತಿದ್ದ ಅರಣ್ಯ ವೀಕ್ಷಕನ ಮೇಲೆ ಕರಡಿ ದಾಳಿ : ಸಿಬ್ಬಂದಿ ಗಂಭೀರ 

 

ಗಸ್ತು ತಿರುಗುತ್ತಿದ್ದ ಅರಣ್ಯ ವೀಕ್ಷಕನ ಮೇಲೆ ಕರಡಿ ದಾಳಿ : ಸಿಬ್ಬಂದಿ ಗಂಭೀರ 

ಮೈಸೂರು: ನಾಗರಹೊಳೆ ರಾಷ್ಟ್ರೀಯ ಉದ್ಯಾನವನದ ಅಂತರಸಂತೆ ಅರಣ್ಯ ವಲಯದಲ್ಲಿ ಗಸ್ತು ತಿರುಗುತ್ತಿದ್ದ ವೇಳೆ ಕರಡಿಯೊಂದು ದಾಳಿ ನಡೆಸಿ, ಅರಣ್ಯ ಇಲಾಖೆಯ ಪಿಸಿಪಿ ಸಿಬ್ಬಂದಿಯನ್ನು ಗಂಭೀರವಾಗಿ ಗಾಯಗೊಳಿಸಿದೆ.

ಅರಣ್ಯ ವೀಕ್ಷಕ ಮಾದ (35) ಎಂಬುವರು ಕರಡಿ ದಾಳಿಗೆ ತುತ್ತಾಗಿದ್ದು, ತಲೆ ಮತ್ತು ಮುಖದ ಭಾಗಕ್ಕೆ ಗಂಭೀರ ಗಾಯಗಳಾಗಿದೆ. ಎಚ್.ಡಿ.ಕೋಟೆ ತಾಲೂಕಿನ ಸೋಗಹಳ್ಳಿ ಸಮೀಪದ ಎಂ.ಜಿ.ಹಳ್ಳಿ ಹಾಡಿಯ ನಿವಾಸಿ ಮಾದ ಅವರು ಎಂದಿನಂತೆ ಕರ್ತವ್ಯಕ್ಕೆ ಹಾಜರಾಗಿ, ಮಾದನಕಡ ಕ್ಯಾಂಪ್‌ನಿಂದ 5 ಮಂದಿಯ ತಂಡದೊಂದಿಗೆ ಗಸ್ತು ತಿರುಗಲು ಕಾಡಿಗೆ ಹೋಗಿದ್ದರು. ಈ ವೇಳೆ ಗುಂಪಿನಲ್ಲಿ ಮುಂದೆ ಹೋಗುತ್ತಿದ್ದ ಮಾದ ಅವರ ಮೇಲೆ ಕರಡಿ ದಾಳಿ ನಡೆಸಿದೆ. ಇದರಿಂದ ಅವರ ಮುಖಕ್ಕೆ ಗಂಭೀರ ಗಾಯಗಳಾಗಿದ್ದು, ಒಂದು ಭಾಗದ ಕಣ್ಣು ಕಿತ್ತು ಬಂದಿದೆ. ಕೂಡಲೇ ಉಳಿದ ನಾಲ್ವರು ಕಿರುಚಾಡಿದ್ದರಿಂದ ಕರಡಿ ಮಾದ ಅವರನ್ನು ಬಿಟ್ಟು ಓಡಿ ಹೋಗಿದೆ.

ಸಹೋದ್ಯೋಗಿಗಳು ಕೂಡಲೇ ಅರಣ್ಯ ಇಲಾಖೆಯ ವಾಹನದಲ್ಲಿ ಮಾದ ಅವರನ್ನು ಕಾಡಿನಿಂದ ಹೊರಗೆ ತಂದರು. ನಂತರ ಖಾಸಗಿ ಆಂಬುಲೆನ್ಸ್ ನಲ್ಲಿ ಮೈಸೂರಿಗೆ ಸಾಗಿಸಿ, ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ತೀವ್ರ ನಿಗಾ ಘಟಕದಲ್ಲಿ ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಬಿ.ಆ‌ರ್.ಟಿ. ವ್ಯಾಪ್ತಿಯಲ್ಲಿ ಸೋಮವಾರ ಕಿರು ಅರಣ್ಯ ಉತ್ಪನ್ನ ಸಂಗ್ರಹಿಸಲು ತೆರಳಿದ್ದ ವೇಳೆ ಕರಡಿ ದಾಳಿ ನಡೆಸಿದ ಪರಿಣಾಮ ಸಿದ್ದೇಗೌಡ ಎಂಬುವರು ಕೂಡ ಮೃತಪಟ್ಟಿದ್ದರು.

 

 

Share this article

ಟಾಪ್ ನ್ಯೂಸ್

More News