Breaking News :

ಗೌರಿ ಗಣೇಶ ಹಬ್ಬಕ್ಕೆ ಕಂಗೊಳಿಸುತ್ತಿರುವ ಪಶ್ಚಿಮಘಟ್ಟದ ಗೌರಿ ಹೂ

 


✒️ ಲಕ್ಷ್ಮೀಕಾಂತ್ ಕೊಮಾರಪ್ಪ

ಜನವಾಹಿನಿ NEWS ಸೋಮವಾರಪೇಟೆ : ತಾಲೂಕಿನೆಲ್ಲೆಡೆ ಗೌರಿ ಗಣೇಶ್ ಹಬ್ಬವು ಸಂಪ್ರದಾಯಿಕವಾಗಿ ಆಚರಿಸಲ್ಪಡುತ್ತಿದೆ. ಗೌರಿ ಹಬ್ಬದಂದು ಗೌರಿ ಹೂ ವೆಂದೆ ಕರೆಯಲ್ಪಡುವ ಗ್ಲೋರಿಯೊಸಾ ಸುಪರ್ಬಾ(ಅಗ್ನಿಶಿಖೆ) ಎಂಬ ಜಾತಿಯ ಹೂವನ್ನು ಪೂಜೆಯಲ್ಲಿ ಇಟ್ಟು ಪ್ರಾರ್ಥಿಸುವುದು ಗ್ರಾಮೀಣ ಭಾಗದ ವಿಶೇಷ.ಗೌರಿ ಗಣೇಶ ಹಬ್ಬ ಸಮೀಪಿಸುತ್ತಿದ್ದಂತೆ ಮಲೆನಾಡ ಭಾಗದಲ್ಲಿ ಅರಳಿನಿಂತ ಗೌರಿ ಹೂವು ಹಬ್ಬದ ಸಂಭ್ರಮ ಹೆಚ್ಚಿಸುತ್ತಿವೆ. ಗೌರಿ ಹೂವು ಎಂದು ಕರೆಯಲ್ಪಡುವ ಕೆಂಪು ಅರಿಶಿಣ ಬಣ್ಣದ ಹೂವು ಪಶ್ಚಿಮಘಟ್ಟದ ಸಹಜ ಕಾಡಿನಲ್ಲಿ ತನ್ನಿಷ್ಟಕ್ಕೆ ಅರಳುವ ಒಂದು ಜಾತಿಯ ಹೂವು. ಗೌರಿ ಗಣೇಶ ಹಬ್ಬದಲ್ಲಿ ಈ ಹೂವು ಪೂಜೆಗೆ ಶ್ರೇಷ್ಠ ಎನ್ನುವುದು ಮಲೆನಾಡ ಜನರ ನಂಬಿಕೆ. ಗೌರಿ ಹೂವಿನ ವೈಜ್ಞಾನಿಕ ಹೆಸರು ಗ್ಲೋರಿಯೊಸಾ ಸುಪರ್ಬಾ. ಇಂಗ್ಲಿಷ್‌ನಲ್ಲಿ ಗ್ಲೋರಿ ಲಿಲ್ಲಿ, ಪ್ಲೇಮ್ ಲಿಲ್ಲಿ ಎಂದೂ ಕರೆಯುತ್ತಾರೆ. ದೇಶದ ವಿವಿಧ ಪ್ರದೇಶಗಳಲ್ಲಿ ಭಿನ್ನ ಹೆಸರುಗಳಿಂದ ಗುರುತಿಸಲ್ಪಟ್ಟಿದೆ. ಅರಳಿನಿಂತ ಹೂಗಳು ಬೆಂಕಿಯ ಜ್ವಾಲೆಯಂತೆ ಕಾಣುವುದರಿಂದ ಅಗ್ನಿಶಿಖೆ ಎಂದೂ, ಕೋಳಿ ಜುಟ್ಟಿನಂತೆ ಕಾಣುವುದರಿಂದ ಕೋಳಿಜುಟ್ಟಿನ ಹೂ, ಕೋಳಿಕುಟುಮ ಎಂದೂ ಕರೆಯುತ್ತಾರೆ. ಹೂವಿನ ಎಸಳುಗಳ ಕೆಳಭಾಗ ಹಳದಿ ಬಣ್ಣದಿಂದ ಕೂಡಿದ್ದು ಮೇಲ್ಬಾಗ ಕೆಂಪು ಕಿತ್ತಲೆ ಮಿಶ್ರಿತ ಬಣ್ಣದಿಂದ ಕೂಡಿರುತ್ತದೆ. ಕನ್ನಡ ಬಾವುಟವನ್ನು ನೆನಪಿಸುತ್ತವೆ. ಕೆಲವೆಡೆ ಗ್ರಾಮೀಣ ಭಾಗದಲ್ಲಿ ಬೆಂಕಿ ಹೂವು ಎಂದೂ ಹೇಳುವುದುಂಟು.ಗೌರಿ ಗಣೇಶ ಹಬ್ಬದ ವೇಳೆಗೆ ಸರಿಯಾಗಿ ಈ ಹೂವು ಅರಳುತ್ತೆ. ಹಾಗಾಗಿ ಇದಕ್ಕೆ ‘ಗೌರಿ ಹೂವು’ ಎನ್ನಲಾಗುತ್ತೆ. ಭಾದ್ರಪದ ಮಾಸದ ನಂತರ ಇದರ ಗಿಡಗಳು ಮಾಯವಾಗಿ ಗೆಡ್ಡೆಯಷ್ಟೆ ನೆಲದಲ್ಲಿ ಉಳಿದಿರುತ್ತದೆ. ಮತ್ತೆ ಮುಂದಿನ ವರ್ಷ ಗಿಡ ಚಿಗುರಿ ಹೂವು ಬಿಡುತ್ತೆ. ಹೂವು ಹಳದಿ-ಕೆಂಪು ಮಿಶ್ರಿತ ಬಣ್ಣದ್ದಾದರೆ ಕಾಯಿ ಪೂರ ಕೆಂಪು ಬಣ್ಣದ್ದಾಗಿರುತ್ತೆ. ರಕ್ತವರ್ಣದ ಹಣ್ಣುಗಳು ನೋಡಲು ಆಕರ್ಷಕ. ಇದರ ಬೀಜ (ಗೆಡ್ಡೆ) ಅಪಾಯಕಾರಿ ಎನ್ನುವುದು ಉಂಟು.

************************

ಗೌರಿ–ಗಣೇಶ ಹಬ್ಬದಲ್ಲಿ ಗೌರಿ ಹೂವಿನ ಬಳಕೆಯ ಸಂಪ್ರದಾಯ ಮಲೆನಾಡಿನ ಜನಜೀವನಕ್ಕೆ ವಿಶೇಷವಾಗಿದೆ, ಗೌರಿ ಹೂವು ಕೇವಲ ಅಲಂಕಾರದ ಸಂಕೇತವಲ್ಲ, ಅದು ಸಂಪ್ರದಾಯ, ಸಂಸ್ಕೃತಿ ಮತ್ತು ಪ್ರಕೃತಿಯ ಗೌರವದ ಪ್ರತೀಕವೂ ಹೌದು. ನಮ್ಮಲ್ಲಿ ಗೌರಿ ಗಣೇಶ ಹಬ್ಬದಂದು ಈ ಹೂವನ್ನು ಇಟ್ಟು ಪೂಜೆ ಸಲ್ಲಿಸುವುದು ನಮ್ಮಲ್ಲಿ ಅನಾದಿಕಾಲದಿಂದಲೂ ಹಿರಿಯರು ನಡೆಸಿಕೊಂಡು ಬರುತ್ತಿದ್ದಾರೆ.

ರೂಪಶ್ರೀ ಆದಿತ್ಯ, ಗೃಹಿಣಿ ಹರಗ ಗ್ರಾಮ

 

 

Share this article

ಟಾಪ್ ನ್ಯೂಸ್

More News