ಚೆಂಬೆಬೆಳ್ಳೂರಿನಲ್ಲಿ ಜನ ಸುರಕ್ಷಾ ಅಭಿಯಾನ
ವಿರಾಜಪೇಟೆ : ಸಮೀಪದ ಚೆಂಬೆಬೆಳ್ಳೂರು ಗ್ರಾಮದಲ್ಲಿ ಇತ್ತೀಚಿಗೆ ಕೊಡಗು ಜಿಲ್ಲಾ ಲೀಡ್ ಬ್ಯಾಂಕ್ ಹಾಗೂ ಯೂನಿಯನ್ ಬ್ಯಾಂಕ್ ನ ವಿರಾಜಪೇಟೆ ಶಾಖೆ ಹಾಗೂ ಕರ್ನಾಟಕ ಗ್ರಾಮೀಣ ಬ್ಯಾಂಕ್ ನ ಸಂಯುಕ್ತ ಆಶ್ರಯದಲ್ಲಿ ಜನ ಸುರಕ್ಷಾ ಅಭಿಯಾನ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ಕೇಂದ್ರ ಸರ್ಕಾರದ ಆದೇಶದಂತೆ ಚೆಂಬೆಬೆಳ್ಳೂರು ಗ್ರಾಮ ಪಂಚಾಯತಿಯ ಸಹಕಾರದೊಂದಿಗೆ ಈ ಕಾರ್ಯಕ್ರಮ ನಡೆಯಿತು.
ಕರ್ನಾಟಕ ಗ್ರಾಮೀಣ ಬ್ಯಾಂಕ್‌ನ ವಿರಾಜಪೇಟೆ ಶಾಖೆಯ ವ್ಯಾವಸ್ಥಾಪಕ ಗುರುರಾಜ್ ಅವರು ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ಜನಸಾಮಾನ್ಯರು ಕಡ್ಡಾಯವಾಗಿ ಸಾಮಾಜಿಕ ಭದ್ರತಾ ಯೋಜನೆಗಳನ್ನು ಮಾಡಿಸುವುದರ ಮೂಲಕ ಯೋಜನೆಗಳ ಪ್ರಯೋಜನವನ್ನು ಪಡೆದು ಕೊಳ್ಳಬೇಕು. ಮುಖ್ಯವಾಗಿ ಪ್ರಧಾನಮಂತ್ರಿ ಸುರಕ್ಷ ಭೀಮಾ ಯೋಜನೆಯು ಒಂದು ಅಪಘಾತ ವಿಮೆಯಾಗಿದ್ದು ವಾರ್ಷಿಕ 20 ರೂ ಗಳನ್ನು ಪಾವತಿಸಿ, ಈ ಯೋಜನೆ ಮಾಡಿಸಿಕೊಂಡಲ್ಲಿ ಯಾವುದೇ ರೀತಿಯ ಅಪಘಾತ ಸಂಭವಿಸಿದಲ್ಲಿ 2 ಲಕ್ಷ ರೂ ಗಳ ವರೆಗಿನ ವಿಮಾ ಮೊತ್ತವು ಗ್ರಾಹಕರ ನಾಮಿನಿಗೆ ದೊರೆಯಲಿದೆ ಎಂದರು.
ಯೂನಿಯನ್ ಬ್ಯಾಂಕ್ ನ ವಿರಾಜಪೇಟೆಯ ಶಾಖೆಯ ವ್ಯವಸ್ಥಾಪಕ ಮಹೇಶ್ ಪ್ರಸಾದ್ ಅವರು ಮಾತನಾಡಿ ವಾರ್ಷಿಕವಾಗಿ 436 ರೂಗಳನ್ನು ಪಾವತಿಸಿ ಪ್ರಧಾನಮಂತ್ರಿ ಜೀವನ ಜ್ಯೋತಿ ವಿಮೆಯನ್ನು ಮಾಡಿಸಿಕೊಂಡಲ್ಲಿ ಯಾವುದೇ ರೀತಿಯಲ್ಲಿ ಮರಣ ಹೊಂದಿದರೆ ಅಂತವರ ನಾಮಿನಿಗೂ ಕೂಡ 2 ಲಕ್ಷ ರೂ ಗಳ ವಿಮಾ ಮೊತ್ತ ದೊರೆಯಲಿದೆ. ಎರಡೂ ವಿಮೆಗಳನ್ನು ಮಾಡಿಸಿಕೊಂಡಲ್ಲಿ 4 ಲಕ್ಷ ರೂ ಗಳ ವರೆಗಿನ ವಿಮಾಮೊತ್ತ ದೊರೆಯುತ್ತದೆ. ಅಟಲ್ ಪಿಂಚಣಿ ಯೋಜನೆಯನ್ನು ಮಾಡಿಸಿದಲ್ಲಿ 60 ವರ್ಷ ವಯಸ್ಸಿನ ನಂತರದಲ್ಲಿ ಪಿಂಚಣಿ ರೂಪದಲ್ಲಿ ಸಾವಿರದಿಂದ 5 ಸಾವಿರ ರೂ ಗಳ ವರೆಗಿನ ಪಿಂಚಣಿ ಹಣ ದೊರೆಯಲಿದೆ ಎಂದರು.
ಅವಾರ್ಡ್ ಸಂಸ್ಥೆಯ ಆರ್ಥಿಕ ಸಮಾಲೋಚಕಿ ಮಂಜುಳಾ ಜೆ.ಕೆ ಅವರು ಮಾತನಾಡಿ ಭಾರತೀಯ ರಿಸರ್ವ್ ಬ್ಯಾಂಕ್, ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದ ಸಹಯೋಗದಲ್ಲಿ ನಬಾರ್ಡ್ ನ ಆರ್ಥಿಕ ನೆರವಿನೊಂದಿಗೆ ಜಿಲ್ಲೆಯಲ್ಲಿ ಅವಾರ್ಡ್ ಎನ್ನುವ ಸಂಸ್ಥೆಯು ಆರ್ಥಿಕ ಸಾಕ್ಷರತಾ ಕಾರ್ಯಕ್ರಮವನ್ನು ಪ್ರತೀ ತಾಲ್ಲೂಕುಗಳಲ್ಲಿ ಆಯೋಜಿಸುತ್ತಿದೆ. ಇದರ ಮುಖ್ಯ ಉದ್ದೇಶ ಸಾಮಾಜಿಕ ಭದ್ರತಾ ಯೋಜನೆಗಳನ್ನು ಮಾಡಿಸುವುದು, ಸೈಬರ್ ಅಪರಾಧಗಳ ಬಗ್ಗೆ ಮಾಹಿತಿ ನೀಡುವುದು ಮತ್ತು ಡಿಜಿಟಲ್ ಪೇಮೆಂಟ್ ಗಳ ಬಗ್ಗೆ ಮಾಹಿತಿ ನೀಡುವುದೇ ಆಗಿದೆ ಎಂದರು.
ಕಾರ್ಯಕ್ರಮದಲ್ಲಿ ಬ್ಯಾಂಕ್ ಗಳ ಅಧಿಕಾರಿಗಳು, ಸಿಬ್ಬಂದಿಗಳು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.








