ಜನವಾಹಿನಿ News ಮಡಿಕೇರಿ : ದಲಿತ ಸಂಘರ್ಷ ಸಮಿತಿ ವತಿಯಿಂದ ಡಾ.ಬಿ.ಆರ್.ಅಂಬೇಡ್ಕರ್ ಅವರ ೧೩೪ನೇ ಜನ್ಮದಿನಾಚರಣೆ ಪ್ರಯುಕ್ತ ಬಾಬಾಸಾಹೇಬ್ ಅನುಯಾಯಿಗಳೊಂದಿಗೆ ಸ್ವಾಭಿಮಾನಿ ಸಮಾವೇಶವನ್ನು ಜನವರಿ ತಿಂಗಳಲ್ಲಿ ಮಡಿಕೇರಿಯಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಸಮಿತಿಯ ಮಡಿಕೇರಿ ತಾಲೂಕು ಅಧ್ಯಕ್ಷ ದೀಪಕ್ ಪೊನ್ನಪ್ಪ ತಿಳಿಸಿದರು.
ನಗರದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂದು ಬೆಳಗ್ಗೆ ೧೦ ಗಂಟೆಗೆ ಅಶೋಕ್‌ಪುರದಿಂದ ಬುದ್ಧ, ಬಸವ, ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಮಾರ್ಲಾಪಣೆ ಮಾಡಲಾಗುವುದು. ನಂತರ ನಡೆಯುವ ಮೆರವಣಿಗೆಯಲ್ಲಿ ೧೦೦ ಬೈಕ್‌ಗಳು, ೫೦ ಮಹಿಳೆಯರ ಕಳಸ, ಪೂರ್ವಿಕರ ಸ್ತಬ್ಧಚಿತ್ರ, ಡೊಳ್ಳು ಕುಣಿತ, ವೀರಗಾಸೆ ಕುಣಿತ, ಕೊನೆಯಲ್ಲಿ ಬುದ್ಧ, ಅಂಬೇಡ್ಕರ್ ಅವರ ರಥವಿರಲಿದೆ. ಮಧ್ಯಾಹ್ನ ೨ ಗಂಟೆಗೆ ಗಾಂಧಿ ಮೈದಾನದಲ್ಲಿ ಸ್ವಾಭಿಮಾನಿ ಸಮಾವೇಶದ ಸಭಾ ಕಾರ್ಯಕ್ರಮ ನಡೆಯಲಿದೆ. ಕಾರ್ಯಕ್ರಮಕ್ಕೆ ೫೦೦೦ ಜನ ಸೇರುವ ನಿರೀಕ್ಷೆಯಿದೆ ಎಂದು ತಿಳಿಸಿದರು.
ದಲಿತ ಸಂಘರ್ಷ ಸಮಿತಿಯಿಂದ ಅಂಬೇಡ್ಕರ್ ಜಯಂತಿ ಪ್ರಯುಕ್ತ ಸಮಾಜ ಕಲ್ಯಾಣ ಇಲಾಖೆ ಸಚಿವ ಡಾ.ಎಚ್.ಸಿ.ಮಹದೇವಪ್ಪ ಅವರಿಗೆ ದಲಿತ ರತ್ನ ಪ್ರಶಸ್ತಿ ನೀಡಲಾಗುತ್ತಿದೆ. ಹಾಗೂ ಜಿಲ್ಲೆಯ ಶಾಸಕಧ್ವಯರಿಗೆ ಅಭಿವೃದ್ಧಿ ಕಾರ್ಯಕ್ರಮದ ಆಧಾರದಲ್ಲಿ ಕೊಡಗು ರತ್ನ ಪ್ರಶಸ್ತಿ ನೀಡಿ ಗೌರವಿಸಲಾಗುತ್ತಿದೆ. ಹೋರಾಟರರಾದ ಜಯಪ್ಪ ಹಾನಗಲ್, ಪರಿಶಿಷ್ಟ ಜಾತಿ ಮತ್ತು ಪಂಗಡಗಳ ನಿವೃತ್ತ ನೌಕರರರ ಸಮಿತಿಯ ಅಧ್ಯಕ್ಷ ಸಿದ್ದಯ್ಯ, ಸಮಾಜ ಸೇವಕ ಡಾ.ಎಚ್.ವಿ.ದೇವದಾಸ್ ಅವರಿಗೆ ಕೊಡಗು ಭೂಷಣ ಪ್ರಶಸ್ತಿ ನೀಡಲಾಗುವುದು ಎಂದು ಮಾಹಿತಿ ನೀಡಿದರು.
ಸಮಿತಿ ಜಿಲ್ಲಾ ಸಂಚಾಲಕರಾದ ಎಚ್.ಎಲ್.ದಿವಾಕರ್ ಮಾತನಾಡಿ, ಜಿಲ್ಲೆಯ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಕ್ಕೆ ವಿದ್ಯಾರ್ಥಿಗಳಿಗೆ ಸನ್ಮಾನ ಮಾಡುವ ಮೂಲಕ ಪ್ರೋತ್ಸಾಹ ನೀಡುವ ಕೆಲಸ ಮಾಡಲಾಗುತ್ತಿದೆ. ಶಾಲೆಗಳಿಗೆ ಪುಸ್ತಕ ವಿತರಣೆ, ಸ್ವಚ್ಛಾತ ಸಿಬ್ಬಂದಿಗಳಿಗೆ ಸ್ವೆಟರ್ ವಿತರಣೆ, ಆಹಾರ ಕಿಟ್ ವಿತರಣೆ ಸೇರಿದಂತೆ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸುತ್ತ ಸಮಿತಿ ಕಾರ್ಯನಿರ್ವಹಿಸುತ್ತಿದೆ ಎಂದು ಮಾಹಿತಿ ನೀಡಿದರು.
ಸುದ್ದಿಗೋಷ್ಠಿಯಲ್ಲಿ ಸಮಿತಿ ನಗರ ಸಂಚಾಲಕ ಸಿ.ಪಿ.ಸಿದ್ದೇಶ್ವರ್, ಸಂಚಾಲಕಿ ಪ್ರೇಮ ಕೃಷ್ಣಪ್ಪ ಇದ್ದರು.







