ಜನವಾಹಿನಿ NEWS ಸಿದ್ದಾಪುರ: ಕೊಡಗು ಜಿಲ್ಲೆಯ ಸರ್ಕಾರಿ ಶಾಲಾ ಮಕ್ಕಳ ಮನಸ್ಸಿನಲ್ಲಿ ನಗುವು ಮತ್ತು ಕಲಿಕೆಯ ಬೆಳಕು ತುಂಬುವ ಕಾರ್ಯವನ್ನು ಜಾಗೃತಿ ಟ್ರಸ್ಟ್ ಹಾಗೂ ಸಿಸ್ಕೋ ಸ್ವಯಂಸೇವಕರು ಯಶಸ್ವಿಯಾಗಿ ನೆರವೇರಿಸಿದರು. ಆಗಸ್ಟ್ ತಿಂಗಳಲ್ಲಿ ನಡೆದ ಅಭಿಯಾನದಲ್ಲಿ 85 ಸಿಸ್ಕೋ ಸ್ವಯಂಸೇವಕರು ಪಾಲ್ಗೊಂಡು, ಐದು ಸರ್ಕಾರಿ ಶಾಲೆಗಳ 600ಕ್ಕೂ ಹೆಚ್ಚು ಮಕ್ಕಳಿಗೆ ಸಾಂಸ್ಕೃತಿಕ, ಶೈಕ್ಷಣಿಕ ಹಾಗೂ ಕ್ರೀಡಾ ಚಟುವಟಿಕೆಗಳನ್ನು ನಡೆಸಿದರು.
ಆಗಸ್ಟ್ 14ರಂದು ಅಮ್ಮತ್ತಿ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ ಸ್ವಾತಂತ್ರ್ಯೋತ್ಸವದ ಸಂಭ್ರಮದೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ವಿದ್ಯಾರ್ಥಿಗಳಿಗೆ ಸಾಂಸ್ಕೃತಿಕ ಕಾರ್ಯಕ್ರಮ, ಮನರಂಜನಾ ಕ್ರೀಡೆಗಳನ್ನು ಆಯೋಜಿಸಿ ವಿಜೇತರಿಗೆ ಪ್ರಶಸ್ತಿ ಪತ್ರ ಹಾಗೂ ಬಹುಮಾನ ವಿತರಿಸಲಾಯಿತು. ಜೊತೆಗೆ ಹೈಜೀನ್ ಕಿಟ್ಗಳು, ಗಣಿತ ವಿಜ್ಞಾನ ಕಲಿಕೋಪಕರಣಗಳು, ಬ್ಯಾಂಡ್ ಸೆಟ್ಗಳನ್ನು ನೀಡಲಾಯಿತು. ಪರಿಸರ ಸಂರಕ್ಷಣೆಯ ಅಂಗವಾಗಿ ಕಾಂಪೊಸ್ಟ್ ಗುಂಡಿ ನಿರ್ಮಿಸಲಾಯಿತು. ಸಿದ್ದಾಪುರ ಹೊಸೂರು ಮತ್ತು ಹೆಗ್ಗಳ ಸರ್ಕಾರಿ ಶಾಲೆಗಳಿಗೆ ಭೇಟಿ ನೀಡಿ ಆಹಾರ ಸಾಮಗ್ರಿ ಹಾಗೂ ಕ್ರೀಡಾ ಉಪಕರಣ ವಿತರಿಸಿದರು. ಮಕ್ಕಳಿಗೆ ವಿಜ್ಞಾನ ಕಲಿಕೋಪಕರಣ ತಯಾರಿಸುವ ಕಾರ್ಯಾಗಾರ ನಡೆಸಿ, ಶಾಲಾ ಗೋಡೆಗಳಿಗೆ ಬಣ್ಣ ಹಚ್ಚಿ ವರ್ಲಿ ಕಲಾ ಚಿತ್ರಗಳನ್ನು ಬಿಡಿಸಿ ಶಾಲಾ ವಾತಾವರಣವನ್ನು ಸುಂದರಗೊಳಿಸಿದರು.
ಈ ಸಂದರ್ಭದಲ್ಲಿ ಸಿಸ್ಕೋ ಸಂಸ್ಥೆಯ ಮಚ್ಚಾರಂಡ ಅಯ್ಯಪ್ಪ, ಸಂಪತ್ ಬಾನಂಡ, ವಿಷ್ಣು, ಜಾಗೃತಿ ಟ್ರಸ್ಟ್ನ ಕೋಶಾಧಿಕಾರಿಗಳಾದ ಕೊಂಡಿಂಜಮ್ಮಂಡ ಶರಣು, ಕಣ್ಣನ್, ನೋಯಲ್, ಸಂಸ್ಥಾಪಕಿ ಣು ಅಪ್ಪಚ್ಚು, ಶಾಲೆಗಳ ಮುಖ್ಯ ಶಿಕ್ಷಕರು, ಶಿಕ್ಷಕ ವೃಂದ, ಶಾಲಾ ಅಭಿವೃದ್ಧಿ ಸಮಿತಿಯ ಸದಸ್ಯರುಗಳು ಪೋಷಕರು ಇದ್ದರು.








