ಕೊಡಗು : ಸರಕು ಸಾಗಾಣಿ ಮಾಡುವ(೧೮.೫೦೦ ಕೆ.ಜಿ. ಗಿಂತ ಹೆಚ್ಚಿನ ತೂಕ) ವಾಹನಗಳಿಗೆ ಜಿಲ್ಲಾಡಳಿತ ಏರಿರುವ ನಿರ್ಬಂಧವನ್ನು ಸಡಿಲಗೊಳಿಸುವಂತೆ ಒತ್ತಾಯಿಸಿ ಜು.೧೮ರಂದು ಜಿಲ್ಲಾಡಾಳಿತ ಭವನದ ಎದುರು ಪ್ರತಿಭಟನೆ ನಡೆಸಲಾಗುವುದು ಎಂದು ಕೊಡಗು ಜಿಲ್ಲಾ ಲಾರಿ ಮಾಲೀಕರ ಮತ್ತು ಚಾಲಕರ ಸಂಘ ತಿಳಿಸಿದೆ.
ನಗರದ ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾತನಾಡಿದ ಸಂಘದ ಅಧ್ಯಕ್ಷ ಮಹಮ್ಮದ್ ಇಕ್ಬಾಲ್, ಜಿಲ್ಲಾಧಿಕಾರಿಗಳ ಆದೇಶ ಕೊಡಗು ಜಿಲ್ಲೆಯ ಲಾರಿ ಮಾಲೀಕರು, ಚಾಲಕರು ಮಾತ್ರ ಪಾಲಿಸುತ್ತಿದ್ದಾರೆ. ಆದರೆ, ಜಿಲ್ಲೆಯಲ್ಲಿ ಹೊರ ಜಿಲ್ಲೆಯಿಂದ ೧೮.೫೦೦ ಕೆ.ಜಿ. ಗಿಂತ ಹೆಚ್ಚಿನ ತೂಕವಿರುವ ಸರಕು ಸಾಗಾಣಿ ಮಾಡುವ ವಾಹನಗಳು ಎಗ್ಗಿಲ್ಲದೇ ಸಂಚಾರ ಮಾಡುತ್ತಿದೆ. ಇದಕ್ಕೆ ಕಾನೂನಿನಡಿ ಯಾವುದೇ ಕ್ರಮ ಆಗುತ್ತಿಲ್ಲ. ಈ ಹಿನ್ನೆಲೆ ಪ್ರತಿಭಟನೆ ನಡೆಸಲು ಮುಂದಾಗಿದ್ದು, ಜಿಲ್ಲೆಯ ಲಾರಿ ಚಾಲಕರು, ಮಾಲೀಕರು, ಲೋಡರ್ಸ್‌ಗಳು, ಕ್ರೈನ್ ಆಪರೇಟರ್‌ಗಳು ಅಂದಿನ ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಮಾಹಿತಿ ನೀಡಿದರು.
ಇಂದು ಜಿಲ್ಲೆಯ ವಾಹನಗಳು ಮಾತ್ರ ಜಿಲ್ಲಾಧಿಕಾರಿಗಳ ಆದೇಶಕ್ಕೆ ಬದ್ಧವಾಗಿ ನಿಲುಗಡೆಗೊಳಿಸಲಾಗಿದೆ. ಆದರೆ, ನಮಗೆ ಒಂದು ಕಾನೂನು ಅವರಿಗೆ ಕಾನೂನು ಸರಿಯಲ್ಲ. ಸರ್ಕಾರಕ್ಕೆ ನಾವು ಕೂಡ ತೆರಿಗೆ ಕಟ್ಟುತ್ತಿದ್ದೇವೆ. ನಮಗೂ ಅನುಮತಿ ನೀಡಬೇಕು ಎಂದು ಆಗ್ರಹಿಸಿದರು.
ಸಂಘದ ಉಪಾಧ್ಯಕ್ಷ ಅಶ್ರಫ್ ಮಾತನಾಡಿ, ಮರಸಾಗಟವನ್ನೇ ನಂಬಿಕೊಂಡು ಜಿಲ್ಲೆಯಲ್ಲಿ ಸಾಕಷ್ಟು ಕುಟುಂಬಗಳಿವೆ. ಜಿಲ್ಲಾಧಿಕಾರಿಗಳ ಆದೇಶದಿಂದ ಚಾಲಕರು ತಮ್ಮ ಕುಟುಂಬ ನಿರ್ವಾಹಣೆಗೆ ಪರದಾಡುವಂತಾಗಿದೆ. ಇಂದು ಸರ್ಕಾರ ಜಿಲ್ಲೆಯ ರಸ್ತೆಗಳನ್ನು ಉತ್ತಮ ಗುಣಮಟ್ಟದಲ್ಲಿ ನಿರ್ಮಾಣ ಮಾಡಿದ್ದರೆ ಇಂತಹ ಸಮಸ್ಯೆಗಳು ಉದ್ಭವವಾಗುತ್ತಿರಲಿಲ್ಲ. ಸರ್ಕಾರ ವೈಫಲ್ಯವನ್ನು ಮರೆಮಾಚಲು ಇಂತಹ ಆದೇಶಗಳನ್ನು ಹೊರಡಿಸುತ್ತಿದ್ದಾರೆ ಎಂದು ಹೇಳಿದರು.
ಸಂಘದ ಕಾರ್ಯದರ್ಶಿ ಅಝೀಜ್, ಖಜಾಂಚಿ ಹುರೇಶ್, ಕೋಶಾಧಿಕಾರಿ ಶ್ಯಾಮ್ ಸುದ್ದಿಗೋಷ್ಠಿಯಲ್ಲಿದ್ದರು.








