Breaking News :

ತರಾತುರಿಯಲ್ಲಿ ಕಾಮಗಾರಿ ಸ್ಥಗಿತ : ರಾತ್ರೋ ರಾತ್ರಿ ಸಾಮಗ್ರಿಗಳನ್ನು ಕೊಂಡೊಯ್ದ ಗ್ರಾಮ ಪಂಚಾಯತಿ : ಗ್ರಾಮಸ್ಥರ ಆಕ್ರೋಶಕ್ಕೆ ಕಾರಣವಾದ ಪಂಚಾಯತಿ ನಡೆ..!


ಜನವಾಹಿನಿ News ಸಿದ್ದಾಪುರ : ಇಲ್ಲಿನ ಗುಹ್ಯ ಗ್ರಾಮದ ನೇತಾಜಿ ಬಡಾವಣೆಯಲ್ಲಿ ನೀರಿನ ಸಮಸ್ಯೆ ತಾಂಡವಾಡುತ್ತಿದ್ದು, ಬೇಸಿಗೆ ಸಮೀಪಿಸುತ್ತಿರುವ ಹಿನ್ನೆಲೆ ಇಲ್ಲಿಗೆ ಅದಷ್ಟು ಬೇಗ ಕುಡಿಯುವ ನೀರಿನ ಪೂರೈಕೆಗೆ ಕ್ರಮ ಕೈಗೊಂಡು ಸಮಸ್ಯೆಯನ್ನು ಬಗೆಹರಿಸುವಂತೆ ಒತ್ತಾಯಿಸಿ ಇಲ್ಲಿನ ನಿವಾಸಿಗಳು ಸೋಮವಾರ ಗ್ರಾಮ ಪಂಚಾಯತಿಗೆ ತೆರಳಿ ಮನವಿ ಸಲ್ಲಿಸಿದ್ದು, 15 ದಿನಗಳ ಗಡುವು ನೀಡಿದ್ದಾರೆ.

ಇದರ ಬೆನ್ನಲ್ಲೇ ಸಮಸ್ಯೆ ಪರಿಹರಿಸುವ ನಿಟ್ಟಿನಲ್ಲಿ ಬಡಾವಣೆಯಲ್ಲಿ ತಂದಿಟ್ಟಿದ್ದ ಮೋಟಾರ್ ಸೇರಿದಂತೆ ಸಾಮಗ್ರಿಗಳನ್ನು ರಾತ್ರೋ ರಾತ್ರಿ ಸ್ಥಳಕ್ಕೆ ಆಗಮಿಸಿದ ಸಿದ್ದಾಪುರ ಗ್ರಾಮ ಪಂಚಾಯಿತಿಯ ವಾಟರ್ ಮ್ಯಾನ್ ಸುಬ್ರಮಣಿ ಎಂಬಾತ ಅಧ್ಯಕ್ಷರ ಆದೇಶ ಮೇರೆಗೆ ಕಾಮಗಾರಿ ಸ್ಥಗಿತಗೊಳಿಸಲಾಗಿದೆ ಎಂದು ಹೇಳಿ ಎಲ್ಲವನ್ನು ಕೊಂಡೊಯ್ದಿದ್ದಾರೆ ಎನ್ನಾಗಿದ್ದು , ಸಾರ್ವಜನಿಕರು ಗ್ರಾಮ ಪಂಚಾಯತಿ ವಿರುದ್ಧ ಸಿಡಿಮಿಡಿಗೊಂಡಿದ್ದಾರೆ.

ಏನಿದು ಸಮಸ್ಯೆ : ಕಳೆದ ಹಲವಾರು ವರ್ಷಗಳಿಂದ ನೇತಾಜಿ ಬಡಾವಣೆ ನಿವಾಸಿಗಳು ಕುಡಿಯುವ ನೀರಿನ ಸಮಸ್ಯೆ ಎದುರಿಸುತ್ತಿದ್ದು, ಈ ಸಂಬಂಧ ಗ್ರಾಮ ಪಂಚಾಯತಿಗೆ ಮನವಿ ಸಲ್ಲಿಸಿದ್ದಾರೆ. ಆದರೆ ಹಲವು ದಿನಗಳು ಕಳೆದರು ಪಂಚಾಯತಿ ಕಡೆಯಿಂದ ಯಾವುದೇ ಕ್ರಮ ಕೈಗೊಂಡಿರಲಿಲ್ಲ. ಅದಾದ ಬಳಿಕ ಸ್ಥಳೀಯರ ಸಮಸ್ಯೆಯನ್ನು ಅರಿತು ಇಲ್ಲಿನ ನಿವಾಸಿ ಮಂಜುನಾಥ್ ಅವರು ತಮ್ಮ ಮನೆಯ ಅಂಗಳದಲ್ಲಿ ಬೋರ್ವೆಲ್ ತೆಗೆಯಲು ಪಂಚಾಯತಿಗೆ ಸ್ಥಳ ಒದಗಿಸಿದರು.

ಇದೇ ಪಂಚಾಯತಿ ವತಿಯಿಂದ ಸಮಸ್ಯೆ ನೀಗಿಸುವ ನಿಟ್ಟಿನಲ್ಲಿ ಕಳೆದ ಎರಡು ವರ್ಷಗಳ ಹಿಂದೆಯೇ ಕೊಳವೆ ಬಾವಿ ಕೂಡ ಕೊರೆಸಲಾಗಿದೆ. ಎನ್ನಲಾಗಿದ್ದು, ಕೊಳವೆ ಬಾವಿ ತೆಗೆಸಿದ ಬಳಿಕವೂ ವರ್ಷಗಳೇ ಕಳೆದರೂ ಪೈಪ್ ಲೈನ್ ಜೋಡಣೆ, ವಿದ್ಯುತ್ ಸಂಪರ್ಕ, ಮೋಟಾರ್ ಅಳವಡಿಕೆ ಪೂರ್ಣಗೊಂಡಿರಲಿಲ್ಲ. ಇದರಿಂದ ನೀರಿನ ಸಮಸ್ಯೆ ಹೆಚ್ಚಾಗಿ ಅಸಮಾಧಾನಗೊಂಡ ಇಲ್ಲಿನ ನಾಗರಿಕರು ನೀರಿನ ಪೂರೈಕೆಗೆ ಆಗ್ರಹಿಸಿದ್ದರು. ಅದಾದ ಬಳಿಕ ಇತ್ತೀಚೆಗೆ ಜನರ ಕಣ್ಣುಮುಚ್ಚಿಸೋ ಉದ್ದೇಶದಿಂದ್ದೇನೋ ಗೊತ್ತಿಲ್ಲ ಬೋರ್ ವೆಲ್ ಗೆ ಮೋಟಾರ್ ಅಳವಡಿಸಿ ನೀರು ಪೂರೈಸಲು ಮುಂದಾಗಿದ್ದ ಗ್ರಾಮ ಪಂಚಾಯತಿ ಸಮರ್ಪಕ ವಿದ್ಯುತ್ ಸಂಪರ್ಕ ಇಲ್ಲವೆಂದು ಹೇಳಿ ಕಾಲಹರಣ ಮಾಡುತ್ತಿತ್ತು ಎನ್ನಲಾಗಿದ್ದು, ಇದರಿಂದ ಬೇಸತ್ತಿದ್ದ ಇಲ್ಲಿನ ನಿವಾಸಿಗಳು ಡಿ.30ರಂದು ಪಂಚಾಯತಿ ಮುಖಾಂತರ ಜಿಲ್ಲಾಧಿಕಾರಿ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ, ತಾಲೂಕು ಪಂಚಾಯತಿ, ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳಿಗೆ ಸಮಸ್ಯೆ ಪರಿಹರಿಸಲು ಕೋರಿ ಮನವಿ ಸಲ್ಲಿಸಿ 15 ದಿನಗಳೊಳಗೆ ಕಾಮಗಾರಿ ಪೂರ್ಣಗೊಳಿಳಿಸುವಂತೆ ಗಡುವು ನೀಡಿದ್ದಾರೆ. ಇದಾದ ಬಳಿಕ ಗ್ರಾಮ ಪಂಚಾಯಿತಿಯಿಂದ ಮಂಜುನಾಥ್ ಮನೆಯಲ್ಲಿ ಕಳೆದೆರಡು ದಿನಗಳ ಹಿಂದೆ ಬೋರ್ ವೆಲ್ ಗೆ ಅಳವಡಿಸಲು ತಂದು ಇಟ್ಟಿದ್ದ ಮೋಟಾರ್ ಸೇರಿದಂತೆ ಸಾಮಗ್ರಿಗಳನ್ನು ರಾತ್ರೋ ರಾತ್ರಿ ಕೊಂಡೊಯ್ದಿರುವುದು ಇದೀಗ ಸಾರ್ವಜನಿಕರ ತೀವ್ರ ಆಕ್ರೋಶಕ್ಕೆ ಕಾರಣವಾಗಿದ್ದು, ಸ್ಥಳೀಯ ಶಾಸಕರು, ಜನ ಪ್ರತಿನಿಧಿಗಳು, ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಮಧ್ಯಸ್ಥಿಕೆ ವಹಿಸಿ ಸಮಸ್ಯೆ ಪರಿಹರಿಸಲು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿರುವ ಗ್ರಾಮಸ್ಥರು ತಪ್ಪಿದ್ದಲ್ಲಿ ಪಂಚಾಯ್ತಿ ಎದುರು ಆಹೋರಾತ್ರಿ ಧರಣಿ ನಡೆಸಲು ನಿರ್ಧರಿಸುವುದಾಗಿ ಹೇಳಿದ್ದಾರೆ. ಅಲ್ಲದೆ ಮುಂಬರುವ ಚುನಾವಣೆಗಳನ್ನು ಕೂಡ ಬಹಿಷ್ಕರಿಸಲು ಒಮ್ಮತದ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.

ವಿಪರ್ಯಾಸ ಎಂದರೆ ಅನುದಾನ ಕೊರತೆ, ಅಕ್ಸಾನ್ ಪ್ಲಾನ್ ನಲ್ಲಿ ಇದಕ್ಕೆ ಹಣ ಬಿಡುಗಡೆ ಆಗಿಲ್ಲ ಅನ್ನೋ ನೆಪ ಹೇಳೋ ಪಂಚಾಯತಿ ಆಡಳಿತ ಯಾವ ಉದ್ದೇಶಕ್ಕೆ ಇಲ್ಲಿಗೆ ಮೋಟಾರ್ ಹಾಗೂ ಪೈಪ್ ಮತ್ತಿತ್ತರ ಸಾಮಗ್ರಿಗಳನ್ನು ತಂದಿಟ್ಟು, ಏಕಾಏಕಿ ರಾತ್ರಿ ಹೊತ್ತಿನಲ್ಲಿ ಸಾಮಾಗ್ರಿಗಳನ್ನು ಮತ್ತೆ ತೆಗೆದುಕೊಂಡು ಹೋಗಿದ್ದಾರೆ ಎಂಬುದು ಯಕ್ಷ ಪ್ರಶ್ನೆಯಾಗಿ ಉಳಿದಿದ್ದು, ಪಂಚಾಯತಿ ನಡೆ ಸ್ಥಳೀಯರ ವಿರುದ್ಧ ದ್ವೇಷ ಸಾಧಿಸಲು ಮುಂದಾಗಿದೆಯೇ ಎಂಬ ಸಂಶಯಕ್ಕೂ ಕೂಡ ಇದೀಗ ಎಡೆಮಾಡಿಕೊಟ್ಟಿದೆ ಎಂಬ ಆರೋಪ ಕೇಳಿ ಬರುತ್ತಿದೆ.


ನಮ್ಮಲ್ಲಿ ಅನುದಾನ ಕೊರತೆ ಇದೆ. ಆದುದರಿಂದ ತರಾತುರಿಯಲ್ಲಿ ಕಾಮಗಾರಿ ಪೂರ್ಣಗೊಳಿಸಲು ಸಾಧ್ಯವಾಗಿಲ್ಲ. ಆಗಂತ ಬೇರೆ ಅನುದಾನವನ್ನು ಇಲ್ಲಿಗೆ ಬಳಸಲು ಸಾಧ್ಯವಿಲ್ಲ. ಇದರಿಂದಾಗಿ ಕೆಲಸ ಪೂರ್ಣಗೊಳ್ಳಲು ವಿಳಂಬವಾಗುತ್ತಿದೆ.

ಪ್ರೇಮ ಗೋಪಾಲ್, ಅಧ್ಯಕ್ಷರು ಸಿದ್ದಾಪುರ ಗ್ರಾಮ ಪಂಚಾಯಿತಿ .


ಕುಡಿಯುವ ನೀರಿನ ಸಮಸ್ಯೆ ನೆನ್ನೆ ಇವತ್ತಿನದಲ್ಲ ಕಳೆದ ಹಲವಾರು ವರ್ಷಗಳಿಂದ ಈ ಕುರಿತು ಪಂಚಾಯತಿಗೆ ಮನವಿ ನೀಡುತ್ತಾ ಬಂದಿದ್ದರು ಯಾವುದೇ ಪ್ರಯೋಜನವಾಗಿಲ್ಲ. ಇದೀಗ ಸ್ಥಳೀಯರೊಬ್ಬರು ನೀಡಿದ್ದ ಸ್ಥಳದಲ್ಲಿ ಬೋರ್ ವೆಲ್ ಕೊರೆಸಿದ್ದ ಪಂಚಾಯತಿ ಏಕಾಏಕಿ ಕಾಮಗಾರಿಗೆ ಸ್ಥಗಿತ ಗೊಳಿಸಿ ತರಿಸಿಟಿದ್ದ ಮೋಟಾರ್ ಸೇರಿದಂತೆ ಸಾಮಗ್ರಿಗಳನ್ನು ಹಿಂದಕ್ಕೆ ಕೊಂಡೊಯ್ದಿರುವುದು ಖಂಡನೀಯ ಕೂಡಲೇ ಸಮಸ್ಯೆಯ ಸ್ವರೂಪ ಅರಿತು ಬಗೆಹರಿಸದಿದ್ದಲ್ಲಿ ಜನ ಒಗ್ಗೂಡಿ ಗ್ರಾಮ ಪಂಚಾಯತಿ ಎದುರು ಆಹೋರಾತ್ರಿ ಧರಣಿ ನಡೆಸಬೇಕಾದ ಅನಿವಾರ್ಯತೆ ಎದುರಾಗುತ್ತೆ. ಮೂಲಭೂತ ಸೌಕರ್ಯಗಳಿಂದ ವಂಚಿತವಾಗಿರುವ ನಾವು ಮುಂಬರುವ ಚುನಾವಣೆ ಸಂದರ್ಭ ಮತದಾನ ಬಹಿಷ್ಕಾರ ಮಾಡಲು ಕೂಡ ಚಿಂತನೆ ನಡೆಸಿದ್ದೇವೆ.

ಉದಯ, ಸ್ಥಳೀಯ ನಿವಾಸಿ 


 

Share this article

ಟಾಪ್ ನ್ಯೂಸ್

More News