Breaking News :

ದಶಕಗಳಿಂದ ಈ ಗ್ರಾಮಕ್ಕಿಲ್ಲ ಸುಸಜ್ಜಿತ ರಸ್ತೆ : ಜನಪ್ರತಿನಿಧಿಗಳು ಬದಲಾದರೂ ಬದಲಾಗದ ಪರಿಸ್ಥಿತಿ..!


ದಶಕಗಳಿಂದ ಬಗೆ ಹರಿಯದ ರಸ್ತೆ ಸಮಸ್ಯೆ : ಕಾಡು ಪ್ರಾಣಿಗಳ ಹಾವಳಿ ನಡುವೆ ದಿನ ಕಳೆಯುತ್ತಿರುವ ಗ್ರಾಮಸ್ಥರು..!


ಸಿದ್ದಾಪುರ : ನೆಲ್ಯಾಹುದಿಕೇರಿ ವ್ಯಾಪ್ತಿಯ ನಲುವತ್ತೆಕ್ರೆ ಗ್ರಾಮದ 2ನೇ ವಾರ್ಡಿಗೆ ಸೇರಿದ ಕೊಂಗೇರಿ ಬೊಪ್ಪಯ್ಯನವರ ತೋಟದ ಹತ್ತಿರವಿರುವ ಪುಟ್ಟ ಗ್ರಾಮದಲ್ಲಿರುವ ಸುಮಾರು 14ಕ್ಕೂ ಅಧಿಕ ಮನೆಗಳಿದ್ದು, ಇಲ್ಲಿಗೆ ತೆರಳುವ ಕಿರುದಾರಿ ಹಲವಾರು ವರ್ಷಗಳಿಂದ ಅಭಿವೃದ್ಧಿ ಕಾಣದೆ ಹಾಗೆಯೇ ಉಳಿದಿದೆ. ಇದರಿಂದಾಗಿ ಮಳೆಗಾಲದಲ್ಲಿ ಈ ರಸ್ತೆ ಸಂಪೂರ್ಣ ಕೆಸರಿನಿಂದ ಕೂಡಿದ್ದು, ಜನ ಅತ್ತಿತ್ತ ನಡೆದಾಡಲು ಕೂಡ ಅಸಾಧ್ಯವಾದ ರೀತಿಯಲ್ಲಿದೆ.

ಸುಮಾರು 150 ಕ್ಕೂ ಅಧಿಕ ಮಂದಿ ವಾಸವಿರುವ ಇಲ್ಲಿಗೆ ತೆರಳುವ ರಸ್ತೆ ಅಭಿವೃದ್ಧಿಗೆ ಹಲವು ಬಾರಿ ಗ್ರಾಮಸ್ಥರು ಮನವಿ ಮಾಡಿಕೊಂಡಿದ್ದರು, ಗ್ರಾಮ ಪಂಚಾಯಿತಿ ಆಗಲಿ ಜನ ಪ್ರತಿನಿಧಿಗಳಾಗಿ ಈ ವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಿರುವ ಸ್ಥಳೀಯರು ಇಲ್ಲಿನ ವಿದ್ಯಾರ್ಥಿಗಳು, ವಿಕಲಚೇತನರು, ಕಾರ್ಮಿಕರು ಸೇರಿದಂತೆ ಸಾರ್ವಜನಿಕರು, ಕಾಡುಪ್ರಾಣಿಗಳ ಆತಂಕದ ನಡುವೆ ನಡೆದಾಡಲು ಕೂಡ ಯೋಗ್ಯವಲ್ಲದ ಇದೇ ರಸ್ತೆಯನ್ನೇ ಅವಲಂಬಿಸಬೇಕಾಗಿದೆ.

ಈ ವ್ಯಾಪ್ತಿಯಲ್ಲಿ ಕಾಡು ಪ್ರಾಣಿಗಳ ಹಾವಳಿ ಹೆಚ್ಚಿದ್ದು, ಇತ್ತೀಚೆಗಷ್ಟೆ ಕಾಡಾನೆ ದಾಳಿಗೆ ಓರ್ವ ಕಾರ್ಮಿಕ ಮಹಿಳೆ (ಕವಿತಾ) ಗಂಭೀರ ಗಾಯಗೊಂಡು ಮೈಸೂರಿನ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದು ಇದೀಗ ಮನೆಗೆ ಹಿಂತಿರುಗಿರುವ ಉದಾಹರಣೆ ಕೂಡ ಇದೆ.

ಇಲ್ಲಿನ ಹದಗೆಟ್ಟಿರುವ ಕಿರಿದಾದ ರಸ್ತೆಯಲ್ಲಿ ಬಾಡಿಗೆ ವಾಹನಗಳು ಕೂಡ ಬರಲು ನಿರಾಕರಿಸುತ್ತಿದ್ದು, ಅನಾರೋಗ್ಯ ತುರ್ತು ಸಂದರ್ಭಗಳಲ್ಲಿ ಸಮಯಕ್ಕೆ ಸರಿಯಾಗಿ ರೋಗಿಯನ್ನು ಆಸ್ಪತ್ರೆಗೆ ಕೊಂಡೊಯ್ಯಲು ಕೂಡ ಜನ ಸಂಕಷ್ಟ ಎದುರಿಸುವಂತಾಗಿದೆ. ಹೀಗಾಗಿ ಸ್ಥಳೀಯ ಶಾಸಕರು, ಸಂಬಂಧಪಟ್ಟ ಇಲಾಖೆ ಇತ್ತ ಗಮನ ಹರಿಸಿ ಇಲ್ಲಿನ ಜನರಿಗೆ ಓಡಾಡಲು ಅನುಕೂಲವಾಗುವಂತಹ ಯೋಗ್ಯ ರಸ್ತೆಯನ್ನು ನಿರ್ಮಿಸಿಕೊಡಬೇಕೆಂಬುದೇ ಸ್ಥಳೀಯ ನಿವಾಸಿಗಳ ಆಗ್ರಹವಾಗಿದೆ.

ನಾವು ನಮ್ಮ ತಾತನ ಕಾಲದಿಂದಲೂ ಇಲ್ಲೇ ವಾಸವಿದ್ದೇವೆ, ನಾವು ದೊಡ್ಡವರಾಗಿ ನಮ್ಮ ಮಕ್ಕಳಿಗೂ ಮಕ್ಕಳಿದ್ದಾರೆ. ಆದರೆ ನಮ್ಮ ಊರಿಗೆ ತೆರಳುವ ರಸ್ತೆ ಮಾತ್ರ ಅಂದಿನಿಂದಲೂ ಹಾಗೇ ಉಳಿದಿದೆ. ಹಲವು ಬಾರಿ ಮನವಿ ಸಲ್ಲಿಸಿದ್ದು, ನಾವು ಕೂಡ ಇಂದೋ ನಾಳೆಯೋ ಅಭಿವೃದ್ಧಿ ಆಗುತ್ತೆ ಅಂತ ಕಾದು ಕಾದು ಸಾಕಾಗಿದೆ. ಇನ್ನಾದರು ಜನ ಪ್ರತಿನಿಧಿಗಳು ಇತ್ತ ಗಮನ ಹರಿಸಿ ಯೋಗ್ಯವಾದ ರಸ್ತೆ ನಿರ್ಮಿಸಿಕೊಡಲಿ. 
ಪ್ರಕಾಶ್ ಮಣಿ, ಸ್ಥಳೀಯ ನಿವಾಸಿ,
****************
ಈ ರಸ್ತೆ ಬಗ್ಗೆ ನಮ್ಮ ಗಮನಕ್ಕೂ ಬಂದಿದೆ. ಇದರ ಅಭಿವೃದ್ಧಿಗೆ ಬೇಕಾದ ಆಕ್ಷನ್ ಪ್ಲಾನ್ ಮಾಡಲಾಗಿತ್ತು. ಹಣ ಬಿಡುಗಡೆಗೂ ಮನವಿ ಸಲ್ಲಿಸಲಾಗಿದೆ. ಆದರೆ ಈ ರಸ್ತೆಯ ಒಂದಿಷ್ಟು ಭಾಗ ಖಾಸಗಿ ವ್ಯಕ್ತಿಯೊಬ್ಬರಿಗೆ ಸೇರಿದೆ ಎಂದು ಮೊಕ್ಕದಮ್ಮೆ ಹೂಡಲಾಗಿದ್ದು, ಸದರಿ ಪ್ರಕರಣದಲ್ಲಿ ವ್ಯಕ್ತಿಯ ಪರ ಆಗುವ ಲಕ್ಷಣಗಳಿದ್ದುದ್ದರಿಂದ ಅದನ್ನು ಅಲ್ಲಿಗೆ ತಡೆ ಹಿಡಿಯಲಾಗಿದೆ. ರಸ್ತೆಗೆ ಸಂಬಂಧಪಟ್ಟ ವ್ಯಕ್ತಿ ಜತೆ ಪಂಚಾಯತಿ ಆಡಳಿತ ಮಂಡಳಿ ಮಾತುಕತೆ ನಡೆಸಲಿದ್ದು,  ಅವರು ಒಪ್ಪಿದೆ ಆದಲ್ಲಿ ರಸ್ತೆಯನ್ನು ಅಭಿವೃದ್ಧಿ ಪಡಿಸಲಾಗುತ್ತೆ.
ನಂಜುಂಡಸ್ವಾಮಿ, ಪಿಡಿಓ ಗ್ರಾಮ ಪಂಚಾಯಿತಿ

Share this article

ಟಾಪ್ ನ್ಯೂಸ್

More News