ಜನವಾಹಿನಿ NEWS ಕುಶಾಲನಗರ : ಪತ್ನಿ ಜತೆ ಅಕ್ರಮ ಸಂಬಂಧ ಹೊಂದಿರುವ ಅನುಮಾನದಲ್ಲಿ ಹೊಲದಲ್ಲಿ ಕಾವಲಿಗಿದ್ದ ಕೇರಳ ಮೂಲದ ವ್ಯಕ್ತಿಯನ್ನು ಹತ್ಯೆಮಾಡಿರುವ ಘಟನೆ ಕುಶಾಲನಗರದ ಗುಡ್ಡೆಹೊಸೂರು ಬಳಿಯ ಬಸವನಹಳ್ಳಿಯಲ್ಲಿ ನಡೆದಿದೆ.
ಶುಂಠಿ ಹೊಲದಲ್ಲಿ ಕಾವಲುಗಾರ ಕೆಲಸ ಮಾಡುತ್ತಿದ್ದ ಕೇರಳ ಮೂಲದ ಮುರಳಿ (45) ಎಂಬಾತನೇ ಕೊಲೆಯಾದ ವ್ಯಕ್ತಿ. ಬಸವನಹಳ್ಳಿ ಗ್ರಾಮದ ತೀರ್ಥ ಎಂಬಾತನಿಂದ ಕೃತ್ಯ ನಡೆದಿದೆ.
ತೀರ್ಥನ ಮನೆಯ ಹಿಂದೆ ಕಳೆದ ಒಂದು ವರ್ಷದ ಹಿಂದೆ ಮಣಿಕಂಠ ಎಂಬುವರು ಬೆಳೆದಿದ್ದ ಶುಂಠಿ ಬೆಳೆ ನೋಡಿಕೊಳ್ಳಲು ಕೇರಳ ಮೂಲದ ಮುರಳಿ ಎಂಬಾತ ಬಂದಿದ್ದ. ವರ್ಷದಿಂದಲೂ ಇದೇ ಶುಂಠಿ ಹೊಲದಲ್ಲಿ ಗುಡಿಸಲೊಂದನ್ನು ಹಾಕಿಕೊಂಡು ಜೀವನ ಮಾಡುತ್ತಿದ್ದ. ಆದರೆ ಇದೇ ಮುರಳಿಗೂ ತನ್ನ ಪತ್ನಿಗೂ ಇತ್ತೀಚೆಗೆ ಅಕ್ರಮ ಸಂಬಂಧ ಶುರುವಾಗಿದೆ ಎಂಬ ಅನುಮಾನ ತೀರ್ಥನ ತಲೆಗೆ ಹೊಕ್ಕಿತ್ತು.
ಇದೇ ವಿಷಯಕ್ಕೆ ಜಗಳ ಶುರುವಾಗಿ ಗುರುವಾರ ರಾತ್ರಿ ತನ್ನ ಮನೆಯ ಹಿಂದೆಯೇ ಇರುವ ಶುಂಠಿ ಹೊಲದ ಬಳಿಗೆ ಹೋದ ತೀರ್ಥ ದೊಣ್ಣೆಯೊಂದನ್ನು ತೆಗೆದುಕೊಂಡು ಮುರಳಿಗೆ ಥಳಿಸಿದ್ದಾನೆ ಈ ಸಂದರ್ಭ ಮುರಳಿ ಸಾವನ್ನಪ್ಪಿದ್ದಾನೆ. ಅಷ್ಟಕ್ಕೆ ಸುಮ್ಮನಾಗದ ತೀರ್ಥ ತನ್ನ ಮನೆಗೆ ವಾಪಸ್ ಬಂದು ಪತ್ನಿಗೂ ಮನಸ್ಸೋ ಇಚ್ಛೆ ಥಳಿಸಿ ಮಾರಣಾಂತಿಕ ಹಲ್ಲೆ ನಡೆಸಿದ್ದಾನೆ. ಇದರಿಂದ ಆಕೆಯ ಒಂದು ಕೈ ಹಾಗೂ ಒಂದು ಕಾಲು ಮುರಿದಿದೆ.
ಕೊಲೆ ಆರೋಪಿ ತೀರ್ಥನನ್ನು ಬಂಧಿಸಿರುವ ಕುಶಾಲನಗರ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದು, ಘಟನಾ ಸ್ಥಳಕ್ಕೆ ಕೊಡಗು ಎಸ್ಪಿ ರಾಮರಾಜನ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.







