Breaking News :

ಪತ್ರಕರ್ತರು ದೃಷ್ಟಿ ಹೀನರಾದರೆ ಕಣ್ಣಿರುವ ಕುರುಡರು ಕಿವಿಯಿರುವ ಕಿವುಡರು ಸೃಷ್ಟಿಯಾಗುತ್ತಾರೆ : ಕೆ.ವಿ.ಪ್ರಭಾಕರ್

ಪತ್ರಕರ್ತರು ದೃಷ್ಟಿ ಹೀನರಾದರೆ ಕಣ್ಣಿರುವ ಕುರುಡರು ಕಿವಿಯಿರುವ ಕಿವುಡರು ಸೃಷ್ಟಿಯಾಗುತ್ತಾರೆ : ಕೆ.ವಿ.ಪ್ರಭಾಕರ

ಮಡಿಕೇರಿ : ನಾವು ಸಮಾಜವನ್ನು ನೋಡುವ ದೃಷ್ಟಿಯನ್ನು ಕಳೆದುಕೊಂಡರೆ ಕಣ್ಣಿರುವ ಕುರುಡರನ್ನು, ಕಿವಿ ಇರುವ ಕಿವುಡರನ್ನು ಸೃಷ್ಟಿಸುತ್ತೇವೆ ಎಂದು ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ಕೆ.ವಿ.ಪ್ರಭಾಕರ್ ಅಭಿಪ್ರಾಯಪಟ್ಟರು.

ಕೊಡಗು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಹಾಗೂ ಕೊಡಗು ಪ್ರೆಸ್ ಕ್ಲಬ್ ವತಿಯಿಂದ ನಗರದ ಪತ್ರಿಕಾ ಭವನದಲ್ಲಿ ಭಾನುವಾರ ನಡೆದ ಪತ್ರಿಕಾ ದಿನಾಚರಣೆ ಹಾಗೂ ಶೈಕ್ಷಣಿಕ ಸಾಧಕ ಪತ್ರಕರ್ತರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಪ್ರದಾನ ಕಾರ್ಯಕ್ರಮದಲ್ಲಿ ಮುಖ್ಯಭಾಷಣಗಾರರಾಗಿ ಪಾಲ್ಗೊಂಡು ಮಾತನಾಡಿದರು.

ಪತ್ರಕರ್ತರಿಗೆ ಸಮಾಜದಲ್ಲಿ ವಿಶೇಷ ಸ್ಥಾನಮಾನವಿದೆ. ಸಮಾಜದ ಮೂರನೇ ಕಣ್ಣು ಆಗಿರುವ ಪತ್ರಕರ್ತರು ಯಾವುದೇ ಕಾರಣಕ್ಕೂ ದೃಷ್ಟಿ ಕಳೆದುಕೊಳ್ಳಬಾರದು. ಪ್ರಸ್ತುತ ಸನ್ನಿವೇಶದಲ್ಲಿ ಪತ್ರಕರ್ತರ ದೃಷ್ಟಿಕೋನ ಬದಲಾಗಿದೆ. ಊಹ ಪತ್ರಿಕೋದ್ಯಮ ಭರಾಟೆಯಿಂದ ಟೀಕೆ-ಟಿಪ್ಪಣಿ ಎದುರಿಸುತ್ತಿರುವುದು ಕಳವಳಕಾರಿ ಸಂಗತಿ ಎಂದು ವಿಷಾದ ವ್ಯಕ್ತಪಡಿಸಿದರು.

ಪತ್ರಕರ್ತರು ತಮ್ಮ ಚೌಕಟ್ಟಿನಲ್ಲಿ ಕೆಲಸ ಮಾಡಬೇಕು. ಸಮಾಜ ಹಾಗೂ ಸರಕಾರದ ನಡುವೆ ಸೇತುವೆಯಾಗಿ ಕೆಲಸ ಮಾಡುವುದರೊಂದಿಗೆ ವೃತ್ತಿಧರ್ಮ ಪಾಲಿಸಬೇಕು. ಅಭಿವ್ಯಕ್ತಿ ಸ್ವಾತಂತ್ರ್ಯ ಹೆಸರಿನಲ್ಲಿ ಬೇರೆಯವರ ಸ್ವಾತಂತ್ರ್ಯ ಕಸಿಯಬಾರದು. ಎಂದಿಂಗೂ ಅರ್ಧ ಸತ್ಯ ಜನರಿಗೆ ಮುಟ್ಟಿಸಬಾರದು. ಮುದ್ರಣ ಹಾಗೂ ಟಿವಿ ಮಾಧ್ಯಮದ ನಡುವೆ ಸಾಮಾಜಿಕ ಜಾಲತಾಣಗಳು ಮಾಧ್ಯಮಗಳಾಗಿ ಬದಲಾಗಿ ಜನರಲ್ಲಿ ಗೊಂದಲ ಮೂಡಿ ವಾಸ್ತವತೆ ಮರೆಯಾಗುತ್ತಿರುವ ಹಂತಕ್ಕೆ ತಲುಪಿದೆ. ಇದನ್ನು ಸರಿಪಡಿಸುವ ಕೆಲಸ ಪತ್ರಕರ್ತರಿಂದಷ್ಟೆ ಸಾಧ್ಯವಾಗುತ್ತದೆ. ಆತ್ಮಾವಲೋಕನ ಮಾಡಿಕೊಳ್ಳುವ ಸನ್ನಿವೇಶವೂ ನಿರ್ಮಾಣವಾಗಿದೆ ಎಂದು ಹೇಳಿದರು.

ಯುವಪೀಳಿಗೆ ಕೌಟುಂಬಿಕ ಹಾಗೂ ಸಾಮಾಜಿಕ ಬಾಂಧವ್ಯವನ್ನು ಕಳೆದುಕೊಂಡು ತಂತ್ರಜ್ಞಾನದೊಂದಿಗೆ ಸಂಬಂಧ ಬೆಳೆಸಿಕೊಳ್ಳುತ್ತಿರುವುದು ಆತಂಕಕಾರಿ ವಿಷಯ ಎಂದು ಪ್ರಭಾಕರ್ ಹೇಳಿದರು.

ಮಕ್ಕಳಲ್ಲಿ ಮಾತು ಕಡಿಮೆಯಾಗಲು ಮೊಬೈಲ್ ಬಳಕೆ ಹೆಚ್ಚಾಗಿರುವುದು ಕಾರಣವಾಗುತ್ತಿದೆ. ಅಮ್ಮನ ಮಡಿಲು, ಕೈ ತುತ್ತು ಮರೆಯಾಗಿ ಒಂದು ಕೋಣೆಯಲ್ಲಿ ಮೊಬೈಲ್‌ನೊಂದಿಗೆ ಹೆಚ್ಚು ಸಮಯ ಕಳೆಯುತ್ತಿರುವುದರಿಂದ ಸಾಮಾಜಿಕವಾಗಿ ವಿಮುಖರಾಗುವ ಸಾಧ್ಯತೆ ಇದೆ. ಈ ನಿಟ್ಟಿನಲ್ಲಿ ಪೋಷಕರು ಅಂಕದೊಂದಿಗೆ ಜೀವನದ ಅಂಕವೂ ಮುಖ್ಯ ಎಂಬುದನ್ನು ಕಲಿಸಬೇಕು. ಶಿಕ್ಷಣ ಮೌಲ್ಯದೊಂದಿಗೆ ಜೀವನ ಮೌಲ್ಯವೂ ಮುಖ್ಯವಾಗಿರುತ್ತದೆ. ಪ್ರಕೃತಿ ಜೊತೆ ಬೆಳಸಬೇಕು. ಸಮಾಜದ ಬಗ್ಗೆ ಚಿಂತನೆ ಮಾಡುವ ಮನಸ್ಥಿತಿಯನ್ನು ರೂಢಿಸಿಕೊಳ್ಳಲು ಪ್ರೇರೆಪಿಸಬೇಕು. ತಾಂತ್ರಿಕತೆ ಮುಂದುವರೆಯುತ್ತಿದಂತೆ ವ್ಯಕ್ತಿತ್ವ ಪಾತಾಳ ತಲುಪುತ್ತಿರುವುದಕ್ಕೆ ಕಡಿವಾಣ ಹಾಕಬೇಕೆಂದ ಅವರು, ಪತ್ರಕರ್ತರಿಗೆ ಮಾಧ್ಯಮ ಸಂಜೀವಿನಿ ಯೋಜನೆಯಡಿ ರೂ. ೫ ಲಕ್ಷದ ತನಕ ಉಚಿತ ಚಿಕಿತ್ಸೆ ನೀಡಲು ಸರಕಾರ ಕ್ರಮಕೈಗೊಂಡಿದೆ. ಪತ್ರಕರ್ತರಿಗೆ ವಸತಿ ಸೌಲಭ್ಯ ಕಲ್ಪಿಸುವ ಬಗ್ಗೆ ಚಿಂತನೆ ಇದೆ. ಕೊಡಗು ಜಿಲ್ಲೆಯ ವಾರ್ತಾ ಇಲಾಖೆಗೆ ಪತ್ರಕರ್ತರ ಓಡಾಟಕ್ಕೆ ಅವಶ್ಯಕವಿರುವ ವಾಹನ ಮಂಜೂರಿಗೆ ಮುಖ್ಯಮಂತ್ರಿ ಗಮನ ಸೆಳೆಯಲಾಗುವುದು ಎಂದರು.

ಮಡಿಕೇರಿ ಕ್ಷೇತ್ರದ ಶಾಸಕ ಡಾ.ಮಂತರ್ ಗೌಡ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಕೊಡಗಿನ ಪತ್ರಕರ್ತರು ಜನಪರವಾಗಿ ಕೆಲಸ ಮಾಡುತ್ತಿದ್ದಾರೆ. ಸಮಾಜದ ಶ್ರೇಯೋಭಿವೃದ್ಧಿಯಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಅಗತ್ಯ ಸಲಹೆಗಳನ್ನು ನೀಡುವ ಮೂಲಕ ಅಭಿವೃದ್ಧಿಗೆ ಸಹಕರಿಸುತ್ತಿದ್ದಾರೆ. ಸಮಾಜದ ದೃಷ್ಟಿಕೋನದಲ್ಲಿ ಚಿಂತಿಸುವ ಪತ್ರಕರ್ತರ ಅಭಿಪ್ರಾಯವನ್ನು ಜನಪ್ರತಿನಿಧಿಗಳೂ ಸಕರಾತ್ಮಕವಾಗಿ ಸ್ವೀಕಾರ ಮಾಡಬೇಕು. ಸಾಮಾಜಿಕ ಜಾಲತಾಣದ ಸುದ್ದಿಯನ್ನು ಕೊಡಗಿನ ಜನ ನಂಬುವುದು ಕಷ್ಟ. ಇಂದಿಗೂ ಪತ್ರಿಕೆಗಳನ್ನು ಅವಲಂಬಿಸಿದ್ದಾರೆ ಎಂದ ಅವರು, ಜಿಲ್ಲೆಯ ಪತ್ರಕರ್ತರು ಇಂದಿಗೂ ಸ್ವಂತ ವಸತಿ ಇಲ್ಲದೆ ಸಂಕಷ್ಟದಲ್ಲಿದ್ದು, ಅವರಿಗಾಗಿ ವಿಶೇಷ ಯೋಜನೆ ರೂಪಿಸಿ ನಿವೇಶನ ಒದಗಿಸಲು ಪ್ರಯತ್ನಿಸಲಾಗುವುದು. ಚಟುವಟಿಕೆಗೆ ಮತ್ತೊಂದು ಭವನದ ಅಗತ್ಯತೆಯೂ ಇದೆ. ಈ ಕುರಿತು ಸರ್ಕಾರದ ಗಮನ ಸೆಳೆಯಲಾಗುವುದು ಎಂದು ಭರವಸೆ ನೀಡಿದರು.

ವಸತಿ ಸಚಿವರ ಮಾಧ್ಯಮ ಸಂಯೋಜಕ ಲಕ್ಷ್ಮಿ ನಾರಾಯಣ್ ಮಾತನಾಡಿ, ಗ್ರಾಮೀಣ ಪತ್ರಕರ್ತರಿಗೆ ಬಸ್ ಪಾಸ್, ಸಂಜೀವಿನಿ ಯೋಜನೆ ಅನುಷ್ಠಾನಗೊಂಡು ಬಹುಕಾಲದ ಕನಸು ಈಡೇರಿದೆ. ಮಾಧ್ಯಮಗಳ ರೂಪಾಂತರ ನಡುವೆ ವಾಸ್ತವ ಸ್ಥಿತಿ ತಲುಪಿಸುವುದು ಕಷ್ಟದಾಯಕ ಎಂಬಂತಾಗಿದೆ. ಪ್ರಸ್ತುತ ಸನ್ನಿವೇಶದಲ್ಲಿ ಪತ್ರಕರ್ತರು ಆತ್ಮಾವಲೋಕನ ಮಾಡಿಕೊಳ್ಳುವ ಅಗತ್ಯತೆ ಇದೆ. ಕೊಡಗು ಭಾಗದ ಪತ್ರಕರ್ತರು ಸೂಕ್ಷ್ಮ ಸಂವೇಧನಾಶೀಲರಾಗಿದ್ದಾರೆ. ಬೇರೆ ಜಿಲ್ಲೆಗೆ ಹೋಲಿಸಿದರೆ ಕೊಡಗು, ಮಲೆನಾಡು ಭಾಗದಲ್ಲಿ ಸಮಸ್ಯೆಗಳ ಸ್ವರೂಪ ಬೇರೆ ರೀತಿ ಇದೆ. ಇದನ್ನು ಪರಿಹರಿಸುವ ನಿಟ್ಟಿನಲ್ಲಿ ಸರಕಾರದ ಗಮನ ಸೆಳೆಯುವ ಪ್ರಯತ್ನ ಪತ್ರಕರ್ತರು ಮಾಡಬೇಕು. ಅಭಿವೃದ್ಧಿ, ಪರಿಸರ ಸಂರಕ್ಷಣೆ ಸುದ್ದಿ ಕಡೆ ಗಮನ ಹರಿಸಿಸಬೇಕು. ಪತ್ರಕರ್ತರಿಗೆ ನಿವೇಶನ ಕೊಡಿಸುವ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದ ಅವರು, ಕೊಡಗು ಜಿಲ್ಲೆ ಎಂದರೆ ಶಕ್ತಿ ದಿನಪತ್ರಿಕೆ ಎಂಬಂತಿದೆ. ಇದು ಮಾಧ್ಯಮಕ್ಕಿರುವ ಶಕ್ತಿ ಎಂದು ಬಣ್ಣಿಸಿದರು.

ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶಿವಾನಂದ ತಗಡೂರು ಮಾತನಾಡಿ, ಹಿಂದೆಲ್ಲ ಮಕ್ಕಳಿಗೆ ಶಿಕ್ಷಣ ಒದಗಿಸುವ ಕುರಿತು ಪೋಷಕರಲ್ಲಿ ಗಂಭೀರ ಚಿಂತನೆಗಳಿರಲಿಲ್ಲ. ಆದರೆ, ಇಂದು ಮಕ್ಕಳ ಶಿಕ್ಷಣಕ್ಕೆ ಆದ್ಯತೆ ನೀಡಿ ಬೆಳೆಸುತ್ತಿರುವುದು ಶ್ಲಾಘನೀಯ ವಿಷಯವಾಗಿದೆ ಎಂದು ಹೇಳಿದ ಅವರು, ೯೩ ವರ್ಷ ತುಂಬಿದ ಸಂಘಟನೆ ಹಲವು ಏಳು-ಬೀಳು ಕಂಡು ಇಂದು ಬೆಳೆದಿದೆ. ಆದರೆ, ನಮ್ಮ ಬೇಡಿಕೆಗಳು ಈಡೇರಲು ಇಷ್ಟು ಕಾಲ ಬೇಕಾಯಿತು ಎಂಬುದು ವಿಪರ್ಯಾಸ. ಮೂರು ದಶಕಗಳ ಹೋರಾಟದಿಂದ ಬಸ್ ಪಾಸ್ ಸೌಲಭ್ಯ ದೊರೆತಿದೆ. ಮಾಧ್ಯಮ ಸಂಜೀವಿನಿ ಯೋಜನೆಯೂ ಜಾರಿಯಾಗಿದೆ. ಪತ್ರಕರ್ತರ ಪಿಂಚಣಿ ಹೆಚ್ಚಾಗಿದೆ. ಪತ್ರಕರ್ತರ ನೆರವಿಗೆ ಸಕಾಲದಲ್ಲಿ ಸಂಘಟನೆ ಸ್ಪಂದಿಸುತ್ತಿದೆ ಎಂದರು.

ಉಪಾಧ್ಯಕ್ಷ ಅಜ್ಜಮಾಡ ರಮೇಶ್ ಕುಟ್ಟಪ್ಪ ಮಾತನಾಡಿ, ಯುವಪೀಳಿಗೆ ಉತ್ತಮ ಪ್ರಜೆಯಾಗಿ ಸಮಾಜದ ಏಳಿಗೆಗೆ ಕೈ ಜೋಡಿಸಬೇಕೆಂದರು.

ಲಿಟಲ್ ಸ್ಕಾಲರ್ ಅಕಾಡೆಮಿ ಮುಖ್ಯಸ್ಥೆ ಪೂಜಾ ಸಜೇಶ್ ಮಾತನಾಡಿ, ಮಕ್ಕಳೊಂದಿಗೆ ಪೋಷಕರು ಸ್ನೇಹಿತರಂತೆ ಇರಬೇಕು. ಅವರ ಕಲಿಕೆಗೆ ಪ್ರೋತ್ಸಾಹ ನೀಡಬೇಕು ಹೊರತು ಹೆಜ್ಜೆಹೆಜ್ಜೆಗೂ ಅಡಚಣೆಯಾಗಬಾರದು. ಸಕರಾತ್ಮಕ ಚಿಂತನೆಗಳನ್ನು ತುಂಬಬೇಕು ಎಂದು ಕರೆ ನೀಡಿದರು.

ಸಮಾಜ ಸೇವಕ, ಎಸ್.ಎನ್.ಡಿ.ಪಿ. ತಾಲೂಕು ಅಧ್ಯಕ್ಷ ಟಿ.ಆರ್.ವಾಸುದೇವ್ ಮಾತನಾಡಿದರು. ೨೮ ವಿದ್ಯಾರ್ಥಿಗಳಿಗೆ ಇದೇ ಸಂದರ್ಭ ಪ್ರತಿಭಾ ಪುರಸ್ಕಾರ ಪ್ರದಾನ ಮಾಡಲಾಯಿತು. ಕಳೆದ ೪೦ ವರ್ಷಗಳಿಂದ ಕುಶಾಲನಗರ, ಹಾರಂಗಿ ಭಾಗದಲ್ಲಿ ಪತ್ರಿಕಾ ವಿತರಕರಾಗಿ ಕಾರ್ಯನಿರ್ವಹಿಸುತ್ತಿರುವ ಆರ್.ಚಂದ್ರಯ್ಯ, ಗ್ರಾಮೀಣ ಪತ್ರಕರ್ತರಿಗೆ ಬಸ್ ಬಸ್ ಒದಗಿಸುವಲ್ಲಿ ಶ್ರಮಿಸಿದ ಮುಖ್ಯಮಂತ್ರಿ ಮಾಧ್ಯಮ ಸಲಹೆಗಾರ ಕೆ.ವಿ.ಪ್ರಭಾಕರ್ ಹಾಗೂ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.

ಕೊಡಗು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷೆ ಬಿ.ಆರ್.ಸವಿತಾ ರೈ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಕೊಡಗು ಪ್ರೆಸ್ ಕ್ಲಬ್ ಅಧ್ಯಕ್ಷ ಬೊಳ್ಳಜಿರ ಅಯ್ಯಪ್ಪ, ಕಾರ್ಯಕ್ರಮ ಸಂಚಾಲಕ ಪಳೆಯಂಡ ಪಾರ್ಥ ಚಿಣ್ಣಪ್ಪ ಹಾಜರಿದ್ದರು. ಕುಡೆಕಲ್ಲು ಗಣೇಶ್ ಪ್ರಾರ್ಥಿಸಿ, ಪ್ರಧಾನ ಕಾರ್ಯದರ್ಶಿ ಬಾಚರಣಿಯಂಡ ಅನು ಕಾರ್ಯಪ್ಪ ಸ್ವಾಗತಿಸಿ, ಪ್ರಭುದೇವ್ ನಿರೂಪಿಸಿ, ಶಿವರಾಜು ವಂದಿಸಿದರು.

Share this article

ಟಾಪ್ ನ್ಯೂಸ್

More News