ಜನವಾಹಿನಿ News ಮಡಿಕೇರಿ : ಚೆಟ್ಟಳ್ಳಿಯ ವಿರಾಟ್ ಹಿಂದೂ ಸಂಗಮ ಆಯೋಜನಾ ಸಮಿತಿ ವತಿಯಿಂದ ಫೆ.೨೨ ರಂದು ಚೆಟ್ಟಳ್ಳಿಯಲ್ಲಿ ಬೃಹತ್ ವಿರಾಟ್ ಹಿಂದೂ ಸಂಗಮವನ್ನು ಆಯೋಜಿಸಲಾಗಿದೆ ಎಂದು ಸಮಿತಿಯ ಸಂಯೋಜಕ ಪೇರಿಯನ ಉದಯ ಕುಮಾರ್ ತಿಳಿಸಿದರು.
ನಗರದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಭಾನುವಾರ ಮಧ್ಯಾಹ್ನ ೨ ಗಂಟೆಗೆ ವ್ಯಾಲಿ ಪ್ಲೇ ಶಾಲೆ ಮುಂಭಾಗದಿಂದ ಚೆಟ್ಟಳ್ಳಿ ಪ್ರೌಢಶಾಲಾ ಆಟದ ಮೈದಾನದವರೆಗೆ ಬೃಹತ್ ಶೋಭಾಯಾತ್ರೆ ಸಾಗಲಿದೆ. ಶೋಭಾಯಾತ್ರೆಯಲ್ಲಿ ಶ್ರೀ ಮೂಕಾಂಬಿಕ ಭಜನೆ ಕುಣಿತ ತಂಡ ನೆಲ್ಯಹುದಿಕೇರಿ, ಪೂರ್ಣ ಕುಂಭ ಸ್ವಾಗತ, ಉಡತ್ಮೊಟ್ಟೆ ತಂಡದವರಿಂದ ಭಜನೆ ಕುಣಿತ, ಬೆಳ್ಳಿ ರಥದ ಮೆರವಣಿಗೆ, ಶ್ರೀ ಶಬರೀಶ ಚೆಂಡೆ ಮೇಳ ತಂಡ ಚೆಟ್ಟಳ್ಳಿ, ಹುಲಿ ವೇಷ ಪುತ್ತೂರು, ಬಾಳೆಗುಂಡಿ ತಂಡದಿಂದ ಹಾಡಿ ಕುಣಿತ ಮತ್ತು ಶ್ರೀ ಶೆಟ್ಟಿ ಆರ್ಟ್ಸ್ ಗೊಂಬೆ ಬಳಗ ಬೆಳ್ತಂಗಡಿ ಹಾಗೂ ಇತರ ಆಕರ್ಷಕ ಕಾರ್ಯಕ್ರಮ ಜರುಗಲಿದೆ ಎಂದು ಮಾಹಿತಿ ನೀಡಿದರು.
ಸಂಜೆ ೫ಗಂಟೆಗೆ ಚೆಟ್ಟಳ್ಳಿಯ ಪ್ರೌಢಶಾಲಾ ಆಟದ ಮೈದಾನದಲ್ಲಿ ಸಭಾ ಕಾರ್ಯಕ್ರಮ ನಡೆಯಲಿದೆ. ಕಾಫಿ ಬೆಳೆಗಾರರಾದ ಕೊಂಗೇಟಿರ ವೀಣಾ ಅಪ್ಪಣ್ಣ ಅವರ ಅಧ್ಯಕ್ಷತೆಯಲ್ಲಿ ನಡೆಯುವ ಸಭೆಯಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಮಂಗಳೂರು ವಿಭಾಗದ ಕಾರ್ಯವಾಹಕ ವಾದಿರಾಜ್ ಉಡುಪಿ ಅವರು ದಿಕ್ಸೂಚಿ ಭಾಷಣ ಮಾಡಲಿದ್ದಾರೆ. ಮುಖ್ಯ ಅತಿಥಿಗಗಳಾಗಿ ಕೊಡಗು ಗೌಡ ಸಮಾಜದ ನಿಕಟಪೂರ್ವ ಅಧ್ಯಕ್ಷ ಪೇರಿಯನ ಜಯಾನಂದ, ನಿವೃತ್ತ ಬ್ಯಾಂಕ್ ಅಧಿಕಾರಿ ಎಂ.ಎಸ್.ತಿರುಮಲೇಶ್ವರ ಭಟ್ ಹಾಗೂ ಚೆಟ್ಟಳ್ಳಿ ಹಿಂದೂ ಮಲಯಾಳಿ ಸಮಾಜದ ಅಧ್ಯಕ್ಷ ಪಿ.ಕೆ.ಲೀಲಾ ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದರು.
ಹಿಂದು ಸಂಗಮವು ಕೇವಲ ಒಂದು ಧಾರ್ಮಿಕ ಉತ್ಸವವಲ್ಲ. ಅದು ಸಮಾಜದ ಏಕತೆ, ಸಂಸ್ಕೃತಿಯ ಉಳಿವು ಮತ್ತು ಧಾರ್ಮಿಕ ಜಾಗೃತಿಯ ಪ್ರತೀಕವಾಗಿದೆ. ಇಂತಹ ಕಾರ್ಯಕ್ರಮಗಳು ಸಮಾಜದಲ್ಲಿ ಧಾರ್ಮಿಕ ಭಾವನೆ, ಶಾಂತಿ ಮತ್ತು ಸಹಕಾರವನ್ನು ಬೆಳೆಸುತ್ತದೆ. ಈ ಹಿನ್ನೆಲೆ ಕಾರ್ಯಕ್ರಮ ಆಯೋಜಿಸಲಾಗುತ್ತಿದೆ ಎಂದರು.
ಸಮಿತಿಯ ಪ್ರಧಾನ ಕಾರ್ಯದರ್ಶಿ ಬಲ್ಲಾರಂಡ ಕಂಠಿ ಕಾರ್ಯಪ್ಪ ಮಾತನಾಡಿ, ರಾಷ್ಟ್ರೀಯ ಸ್ವಯಂ ಸೇವಕ ಸಂಘಕ್ಕೆ ನೂರು ವರ್ಷ ತುಂಬಿದ ಹಿನ್ನೆಲೆಯಲ್ಲಿ ಬೃಹತ್ ವಿರಾಟ್ ಹಿಂದೂ ಸಂಗಮವನ್ನು ಆಯೋಜಿಸಲಾಗುತ್ತಿದೆ. ಜಾತಿ, ಮತ, ರಾಜಕೀಯ ಬೇಧವಿಲ್ಲದೆ ಸರ್ವರೂ ಪಾಲ್ಗೊಳ್ಳುವಂತೆ ಮನವಿ ಮಾಡಿದರು.
ಸುದ್ದಿಗೋಷ್ಠಿಯಲ್ಲಿ ಸಹ ಸಂಯೋಜಕ ಕಡ್ಯದ ಉದಯ, ಸದಸ್ಯರುಗಳಾದ ಬಿ.ಆರ್.ಚೇತನ್ ಪೂಜಾರಿ ಹಾಗೂ ಎನ್.ಎಸ್.ರವಿ ಉಪಸ್ಥಿತರಿದ್ದರು.







