ಬೆಟ್ಟಗೇರಿಯಲ್ಲಿ ಮನೆ ಮನೆ ಜ್ವರ ಸಮೀಕ್ಷೆ : ಸುತ್ತಮುತ್ತಲಿನ ಪರಿಸರ ಸ್ವಚ್ಛವಾಗಿಟ್ಟುಕೊಳ್ಳಲು ಸಲಹೆ
ಮಡಿಕೇರಿ : ಪ್ರತಿಯೊಬ್ಬರೂ ತಮ್ಮ ತಮ್ಮ ಮನೆಗಳ ಸುತ್ತಮುತ್ತಲಿನ ಪರಿಸರ ಸ್ವಚ್ಚವಾಗಿ ಇಟ್ಟುಕೊಂಡರೆ ಡೆಂಗ್ಯೂ ಸೇರಿದಂತೆ ಯಾವುದೇ ಸಾಂಕ್ರಾಮಿಕ ರೋಗಗಳು ಬರುವುದಿಲ್ಲ ಎಂದು ಜಿಲ್ಲಾ ಎಂಟಮಾಲಜಿಸ್ಟ್ ಮಂಜುನಾಥ್ ಸಾರ್ವಜನಿಕರಿಗೆ ಆರೋಗ್ಯ ಮಾಹಿತಿ ನೀಡಿದರು.
ಬೆಟ್ಟಗೇರಿ ಗ್ರಾಮದಲ್ಲಿ ಆಶಾ ಕಾರ್ಯಕರ್ತರು ಮನೆ ಮನೆ ಜ್ವರ ಸಮೀಕ್ಷೆ ನಡೆಸಿ ಜನರಿಗೆ ತಿಳುವಳಿಕೆ ನೀಡಿದರು. ಈ ಸಂದರ್ಭ ಮಾತನಾಡಿದ ಅವರು, ಯಾವುದೇ ಜ್ವರವಿರಲಿ ಹತ್ತಿರದ ಆಸ್ಪತ್ರೆ ವೈದ್ಯರಿಗೆ ತೋರಿಸಿ ಚಿಕಿತ್ಸೆ ಪಡೆಯುವಂತೆ ಸಲಹೆ ನೀಡಿದರು.
ಮಡಿಕೇರಿ ತಾಲ್ಲೂಕು ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಜಿ.ವಿ.ಶ್ರೀನಾಥ್ ಮಾತನಾಡಿ, ಡೆಂಗ್ಯೂ ವಿರೋಧಿ ಮಾಸಾಚರಣೆ ಕುರಿತು ಮಾಹಿತಿ ನೀಡಿ, ಮನೆಯ ಸುತ್ತಮುತ್ತ ಸ್ವಚ್ಛ ಪರಿಸರ, ಶುದ್ಧ ನೀರು ಇರುವಂತೆ ನೋಡಿಕೊಳ್ಳಬೇಕು ಹಾಗೂ ಚರಂಡಿಗಳಲ್ಲಿ ನೀರು ನಿಲ್ಲದಂತೆ ಮತ್ತು ಲಾರ್ವಾ ಉತ್ಪತ್ತಿ ಆಗದಂತೆ ಎಚ್ಚರ ವಹಿಸಬೇಕು ಎಂದು ಹೇಳಿದರು.
ಸ್ವಚ್ಚತೆ ಅತ್ಯಗತ್ಯವಾಗಿದೆ. ಇದರಿಂದ ಡೆಂಗ್ಯೂ ಸೇರಿದಂತೆ ಸಾಂಕ್ರಾಮಿಕ ರೋಗಗಳ ನಿಯಂತ್ರಣ ಮಾಡಬಹುದು ಎಂದರಲ್ಲದೆ, ಮನೆಯ ಚರಂಡಿಗಳಲ್ಲಿ ನೀರು ನಿಲ್ಲದಂತೆ ಎಚ್ಚರ ವಹಿಸಬೇಕು. ಮನೆಯ ಒಳಗೆ ಮತ್ತು ಹೊರಗೆ ನೀರು ತುಂಬಿಸುವ ತಾಣಗಳು ವಾರಕ್ಕೊಮ್ಮೆ ಸ್ವಚ್ಛಗೊಳಿಸಿ ಮುಚ್ಚಳದಿಂದ ಮುಚ್ಚಬೇಕು. ಸೊಳ್ಳೆಗಳ ನಿಯಂತ್ರಣಕ್ಕಾಗಿ ಸೊಳ್ಳೆ ನಾಶಕ ಮತ್ತು ಸೊಳ್ಳೆ ಪರದೆಗಳನ್ನು ಅಳವಡಿಸಿಕೊಳ್ಳಬೇಕು ಎಂದು ಜನರಿಗೆ ಮಾಹಿತಿ ನೀಡಿದರು.
ರೋಗಗಳು ಹರಡದಂತೆ ತೆಗೆದುಕೊಳ್ಳಬೇಕಾದ ಮುಂಜಾಗ್ರತೆ ಕ್ರಮಗಳ ಕುರಿತು ಆರೋಗ್ಯ ಮಾಹಿತಿ ನೀಡಿದರು.
ಡೆಂಗ್ಯೂ, ಇಲಿ ಜ್ವರ ಸೇರಿದಂತೆ ಸಾಂಕ್ರಾಮಿಕ ರೋಗಗಳ ನಿಯಂತ್ರಣಕ್ಕಾಗಿ ಆರೋಗ್ಯ ಇಲಾಖೆಯಿಂದ ಎಲ್ಲೆಡೆ ಮನೆ ಮನೆ ಭೇಟಿ ಮಾಡಿ ಲಾರ್ವಾ ನಿರ್ಮೂಲನೆ ಕಾರ್ಯ ಚಟುವಟಿಕೆಗಳನ್ನು ನಡೆಸುತ್ತಿದ್ದು, ಎಲ್ಲರೂ ಸಹಕರಿಸಿದರೆ ಇಂತಹ ಪ್ರಕರಣಗಳನ್ನು ತಡೆಗಟ್ಟಲು ಸಾಧ್ಯ ಎಂದರು. ಜಿಲ್ಲಾ ಎಪಿಡಮಾಲಿಜಿಸ್ಟ್ ಕಿಶೋರ್ ಹಾಗೂ ಆಶಾ ಕಾರ್ಯಕರ್ತರು, ಶಾಲಾ ಶಿಕ್ಷಕರು ಹಾಜರಿದ್ದರು.








