Breaking News :

ಬೆಳೆಗಾರರಿಗೆ ಪರಿಹಾರ ನೀಡದ ಸರ್ಕಾರ : ಖಂಡಿಸಿ ಮಡಿಕೇರಿಯಲ್ಲಿ ಪ್ರತಿಭಟನೆ


ಜನವಾಹಿನಿ News ಮಡಿಕೇರಿ : ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ರೈತ ವಿರೋಧಿ ನೀತಿಯನ್ನು ಖಂಡಿಸಿ ಕೊಡಗು ಜಿಲ್ಲಾ ಬಿಜೆಪಿ ರೈತ ಮೋರ್ಚ ವತಿಯಿಂದ ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಪ್ರತಿಭಟನೆ ನಡೆಸಲಾಯಿತು.

ಈ ಸಂದರ್ಭ ರೈತ ಮೋರ್ಚಾ ಜಿಲ್ಲಾಧ್ಯಕ್ಷ ಅಮ್ಮುಣಿಚಂಡ ರಂಜಿ ಪೂಣಚ್ಚ ಮಾತನಾಡಿ, ಕೇಂದ್ರದ ಪ್ರಧಾನಿ ನರೇಂದ್ರ ಮೋದಿಯವರ ಸರ್ಕಾರ ರೈತರಿಗೆ ನೀಡುತ್ತಿದ್ದ ಕಿಸಾನ್ ಸಮ್ಮಾನ್ ಯೋಜನೆಯ ರೂ.೬,೦೦೦ ಮತ್ತು ರಾಜ್ಯದಲ್ಲಿ ಆಡಳಿತ ನಡೆಸುತ್ತಿದ್ದ ಬಿ.ಜೆ.ಪಿ ಸರ್ಕಾರ ರೂ.೪,೦೦೦ ಒಟ್ಟು ೧೦.೦೦೦ ರೂಪಾಯಿಗಳನ್ನು ನೀಡುತ್ತಿತ್ತು. ಕಾಂಗ್ರೆಸ್ ಆಡಳಿತಕ್ಕೆ ಬಂದೊಡನೆ ರಾಜ್ಯ ಸರ್ಕಾರದ ರೂ.೪,೦೦೦ ಅನ್ನು ಕಡಿತಗೊಳಿಸಿ ರೈತರಿಗೆ ನೇರ ಅನ್ಯಾಯ ಮಾಡಿದ್ದು, ಕಾಂಗ್ರೆಸ್ ಸರ್ಕಾರವು ರೈತರ ಬಗ್ಗೆ ಮಲತಾಯಿ ಧೋರಣೆ ಅನುಸರಿಸುತ್ತಿದೆ ಎಂದರು.

ಕೊಡಗಿನ ರೈತರು ಕಾಡು ಪ್ರಾಣಿಗಳ ಹಾವಳಿಯಿಂದ ಪ್ರಾಣ ಮತ್ತು ಬೆಳೆ ಹಾನಿಗೆ ಒಳಗಾಗಿದ್ದಾರೆ. ಆದರೂ ರಾಜ್ಯ ಸರ್ಕಾರ ಯಾವುದೇ ಶಾಶ್ವತ ಪರಿಹಾರ ಕೈಗೊಳ್ಳದೆ ರೈತರನ್ನು ಮತ್ತು ಅಮಾಯಕ ನಾಗರೀಕರನ್ನು ವಂಚಿಸುತ್ತಿದೆ. ಅಲ್ಲದೇ, ಬಿಜೆಪಿ ಸರ್ಕಾರ ರಾಜ್ಯದಲ್ಲಿ ಆಡಳಿತ ನಡೆಸುತ್ತಿದ್ದ ಸಂದರ್ಭ ರೈತರ ಮಕ್ಕಳಿಗೆ ವಿದ್ಯಾನಿಧಿ ಪ್ರಾರಂಭಿಸಿ ರೈತರ ಮಕ್ಕಳ ನೆರವಿಗೆ ಬಂದಿತ್ತು. ಆದರೆ, ಕಾಂಗ್ರೆಸ್ ಆಡಳಿತಕ್ಕೆ ಬಂದ ತಕ್ಷಣ ಈ ಯೋಜನೆಯನ್ನು ಕೈಬಿಟ್ಟಿದೆ. ಕೊಡಗಿನಲ್ಲಿ ಅತೀವೃಷ್ಟಿಯಿಂದ ಕಾಫಿ ಫಸಲು, ಕಾಳುಮೆಣಸು, ಅಡಿಕೆ ಮತ್ತು ಇತರ ಬೆಳೆಗಳು ನಷ್ಟವಾಗಿದ್ದು, ರಾಜ್ಯ ಸರ್ಕಾರ ಸರ್ವೆಕಾರ್ಯ ನಡೆಸದೆ ಕೊಡಗಿನ ರೈತರಿಗೆ ಅನ್ಯಾಯ ಎಸಗಿದೆ. ಸ್ಥಳೀಯ ಇಬ್ಬರು ಕಾಂಗ್ರೆಸ್ ಶಾಸಕರು ರೈತರ ಪರ ನಿಲ್ಲದೆ ರೈತ ವಿರೋಧಿ ನೀತಿಯನ್ನು ಅನುಸರಿಸುತ್ತಿದ್ದಾರೆ ಎಂದು ಆರೋಪಿಸಿದರು.

ಮಾಜಿ ಸಚಿವ ಮತ್ತು ಮಾಜಿ ಶಾಸಕ ಅಪ್ಪಚ್ಚು ರಂಜನ್ ಮಾತನಾಡಿ, ಇಂದಿನ ರಾಜ್ಯ ಸರ್ಕಾರವು ರೈತ ವಿರೋಧಿ ಸರ್ಕಾರವಾಗಿದೆ. ಮರಗಳ ಗಣತಿಕರಣ, ಸಿ ಮತ್ತು ಡಿ ಭೂಮಿ ಇತ್ಯಾದಿ ಸುತ್ತೋಲೆಗಳ ಮೂಲಕ ರೈತರಿಗೆ ಎಲ್ಲ ರೀತಿಯ ತೊಂದರೆಗಳನ್ನು ನೀಡುತ್ತಿದೆ. ಈಗಿನ ಸರ್ಕಾರ ಕಂದಾಯ, ರಿಜಿಸ್ಟ್ರೇಷನ್ ಶುಲ್ಕ ಅಧಿಕ ಮಾಡುವುದರ ಜತೆಗೆ, ಪೆಟ್ರೋಲ್ ಸೇರಿದಂತೆ ಇತ್ಯಾದಿ ಬೆಲೆಗಳನ್ನು ಹೆಚ್ಚಳ ಮಾಡುವ ಮೂಲಕ ರೈತರಿಗೆ ಬರೆ ಹಾಕುವ ಕೆಲಸ ಮಾಡುತ್ತಿದೆ ಎಂದರು.

ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ಕೆ.ಜಿಬೋಪಯ್ಯ ಮಾತನಾಡಿ, ಕಳೆದ ೫-೬ ತಿಂಗಳಿಂದ ಸರ್ಕಾರ ಅಸ್ತಿತ್ವದಲ್ಲಿದ್ದೇಯಾ ಎಂದು ಪ್ರಶ್ನೆ ಮಾಡವ ಪರಿಸ್ಥಿತಿ ಇಂದು ರಾಜ್ಯದಲ್ಲಿ ನಿಮಾರ್ಣವಾದರೆ ಜಿಲ್ಲೆಯಲ್ಲಿ ಗುಂಡಿಯಲ್ಲಿ ರಸ್ತೆ ನೋಡುವ ಪರಿಸ್ಥಿತಿ ಇದೆ. ಮಾತ್‌ಮಾತಿಗೆ ಕೋಟಿ ಕೋಟಿ ಲೆಕ್ಕ ಹೇಳುತ್ತಾರೆ. ಆದರೆ, ಅಭಿವೃದ್ಧಿ ಕಾಣುತ್ತಿಲ್ಲ. ರೈತರ ಬಗ್ಗೆ ಕಾಳಜಿಯಿಲ್ಲ ಎಂದ ಅವರು, ಗ್ಯಾರೆಂಟಿ ಗ್ಯಾರೆಂಟಿ ಎಂದು ಹೇಳಿ ೫.೫೦ ಲಕ್ಷ ಕೋಟಿ ನಮ್ಮ ಮೇಲೆ ಸಾಲ ಮಾಡಿದ್ದಾರೆ. ಕರ್ನಾಟಕವನ್ನು ಸಾಲದ ಕೂಪದಲ್ಲಿ ಮುಳುಗಿಸಿದ್ದು ರಾಜ್ಯ ಸರ್ಕಾರದ ಸಾಧನೆಯಾಗಿದೆ ಎಂದು ಟೀಕಿಸಿದರು.

ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರು ಮುಖ್ಯಮಂತ್ರಿಗಳ ಹಿಂದೆ ಸುತ್ತುವುದು ಬಿಟ್ಟರೆ ಜಿಲ್ಲೆಗೆ ಏನು ತಂದಿದ್ದೀರಾ ಎಂದು ಪ್ರಶ್ನಿಸಿದ ಅವರು, ಎನ್.ಡಿ.ಆರ್.ಎಫ್ ಫಂಡ್ ಇರೋದು ಬೆಳೆ ಪರಿಹಾರಕ್ಕೆ ಹೊರತು ಮನೆಮನೆಗೆ ಕಾಂಕ್ರಿಟ್ ರಸ್ತೆ ಮಾಡಲು ಅಲ್ಲ. ಕಾಫಿ ಬೋರ್ಡ್‌ನಿಂದ ಜಿಲ್ಲೆಯಲ್ಲಿ ಶೇ.೬೦ ರಷ್ಟು ಹಾನಿಯಾಗಿದೆ ಎಂದು ಬೆಳೆ ಹಾನಿ ಬಗ್ಗೆ ಸಂಪೂರ್ಣ ಮಾಹಿತಿ ನೀಡಲಾಗಿದೆ. ಆದರೂ ಪರಿಹಾರಕ್ಕೆ ಮುಂದಾಗಿಲ್ಲ ಎಂದರು.

ಬಿಜೆಪಿ ಜಿಲ್ಲಾಧ್ಯಕ್ಷ ನಾಪಂಡ ರವಿಕಾಳಪ್ಪ ಮಾತನಾಡಿ, ರೈತರ ಪರ ಚಿಂತನೆ ಮಾಡದೇ ಅಧಿಕಾರ ಉಳಿಸಿಕೊಳ್ಳಲು ಶಾಸಕರ ಮನವೊಲಿಸುವಲ್ಲಿ ಕಾಲಹರಣ ಮಾಡುತ್ತಿದ್ದಾರೆ. ಜಿಲ್ಲೆಯಲ್ಲಿ ಮಳೆ ಹೆಚ್ಚಾಗಿರುವ ಬಗ್ಗೆ ಸರ್ವೆ ನಡೆಸಿ ವರದಿ ಸಲ್ಲಿಸಿದರೂ ರೈತರಿಗೆ ಬೆಳೆ ಪರಿಹಾರ ಇನ್ನು ಸಿಗಲಿಲ್ಲ. ಜಿಲ್ಲೆಯ ಶಾಸಕರಿಗೆ ಇಲ್ಲಿಯ ಸಮಸ್ಯೆಗಳ ಬಗ್ಗೆ ತಿಳಿದಿಲ್ಲವೇ?. ಯಾಕೆ ಧ್ವನಿ ಎತ್ತುವುದಿಲ್ಲ ಎಂದು ಪ್ರಶ್ನಿಸಿದ ಅವರು, ಸಿ ಮತ್ತು ಡಿ ಸಮಸ್ಯೆ ಬಗ್ಗೆ ಜಿಲ್ಲೆಯ ಶಾಸಕಧ್ವಯರು ವಿಧಾನಸಭೆಯಲ್ಲಿ ಒತ್ತಾಯ ಮಾಡಬೇಕು. ಆನೆ ಮಾನವ ಸಂಘರ್ಷಕ್ಕೆ ಶಾಶ್ವತ ಪರಿಹಾರ ಕಂಡುಹಿಡಿಯಬೇಕು ಎಂದು ಒತ್ತಾಯಿಸಿದರು.

ಜಿಲ್ಲೆಯ ರೈತರ ಸಮಸ್ಯೆಗಳ ಬಗೆಹರಿಸುವಂತೆ ಒತ್ತಾಯಿಸಿ ಪ್ರತಿಭಟನಾ ನಿರತರು ಜಿಲ್ಲಾಡಳಿತ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.

ಪ್ರತಿಭಟನೆಯಲ್ಲಿ ಜಿಲ್ಲಾ ಬಿಜೆಪಿ ರೈತ ಮೋರ್ಚ ಪ್ರ.ಕಾರ್ಯದರ್ಶಿಗಳಾದ ಜಗದೀಶ್, ಶರತ್, ಜಿಲ್ಲಾ ಬಿಜೆಪಿ ಪ್ರದಾನ ಕಾರ್ಯದರ್ಶಿ ಮಹೇಶ್ ಜೈನಿ, ಅರುಣ್ ಕುಮಾರ್, ವಕ್ತಾರ ತಳೂರು ಕಿಶೋರ್, ಮಹಿಳಾ ಮೋರ್ಚಾ ಜಿಲ್ಲಾಧ್ಯಕ್ಷೆ ಅನಿತಾ ಪೂವಯ್ಯ, ಪ್ರಮುಖರಾದ ಅರುಣ್ ಶೆಟ್ಟಿ, ರವಿಕುಶಾಲಪ್ಪ, ಹರಪಳ್ಳಿ ರವೀಂದ್ರ, ಮನುಮಂಜುನಾಥ್ ಹಾಗೂ ಬಿಜೆಪಿ ಕಾರ್ಯಕರ್ತರು, ರೈತ ಮೋರ್ಚ ಪದಾಧಿಕಾರಿಗಳಿದ್ದರು.

Share this article

ಟಾಪ್ ನ್ಯೂಸ್

More News