Breaking News :

ಬೇಟೋಳಿ ಪುದುಪಾಡಿ ಶ್ರೀ ಅಯ್ಯಪ್ಪ ಸ್ವಾಮಿ ದೇವಸ್ಥಾನದ ಗೌರಿ ಗಣೇಶ ಮೂರ್ತಿಗಳ ವಿಸರ್ಜನೋತ್ಸವ – ಶೋಭಾಯಾತ್ರೆಗೆ ಮೆರುಗು ನೀಡಿದ ಗೊಂಬೆ ಕುಣಿತ ಭಜನೆ

 


ಜನವಾಹಿನಿ NEWS ವಿರಾಜಪೇಟೆ : ಸಮೀಪದ ಬೇಟೋಳಿ ಗ್ರಾಮದ ರಾಮನಗರದಲ್ಲಿರುವ ಪುದುಪಾಡಿ ಶ್ರೀ ಅಯ್ಯಪ್ಪ ಸ್ವಾಮಿ ದೇವಸ್ಥಾನದ ಒಳ ಆವರಣದಲ್ಲಿರುವ ಶ್ರೀ ಗಣಪತಿ ಗುಡಿಯಲ್ಲಿ ಪ್ರತಿಷ್ಠಾಪಿಸಲಾಗಿದ್ದ ಶ್ರೀ ಗೌರಿ ಗಣೇಶ ಮೂರ್ತಿಗಳ ವಿಸರ್ಜನೋತ್ಸವ ಶ್ರದ್ದಾ ಭಕ್ತಿಯಿಂದ ನೆರವೇರಿತು.

ದೇವಸ್ಥಾನವು 43 ನೇ ವರ್ಷದ ಗಣೇಶೋತ್ಸವವನ್ನು ಆಚರಿಸುತ್ತಿದ್ದು ಧಾರ್ಮಿಕ ಕಾರ್ಯಕ್ರಮಗಳು ಶಾಸ್ತ್ರೋಕ್ತವಾಗಿ ನಡೆಯಿತು. ಶ್ರೀ ಗಣೇಶ ಚತುರ್ಥಿ ಯಂದು ಪ್ರತಿಷ್ಠಾಪಿಸಲಾಗಿದ್ದ ಗಣೇಶ ಮೂರ್ತಿಯನ್ನು ಒಟ್ಟು ಏಳು ದಿವಸಗಳ ಕಾಲ ದೇವಸ್ಥಾನದಲ್ಲಿ ವಿಶೇಷ ಪೂಜೆಗಳೊಂದಿಗೆ ಆರಾಧಿಸಲಾಯಿತು.

ವಿಸರ್ಜನೋತ್ಸವದಂದು ಮದ್ಯಾಹ್ನ ಮಹಾಪೂಜೆಯನ್ನು ಸಲ್ಲಿಸಿದ ಬಳಿಕ ಭಕ್ತಾದಿಗಳಿಗೆ ಪ್ರಸಾದ ವಿತರಣೆ ಹಾಗೂ ಅನ್ನ ಸಂತರ್ಪಣಾ ಸೇವೆಯು ಜರುಗಿತು. ತದನಂತರ ವಿಶೇಷ ಪ್ರಾರ್ಥನೆ, ಪೂಜೆಯನ್ನು ಸಲ್ಲಿಸುವುದರ ಮೂಲಕ ಹೂವಿನ ಅಲಂಕೃತ ಮಂಟಪದಲ್ಲಿ ಮೂರ್ತಿಗಳನ್ನು ಪ್ರತಿಷ್ಠಾಪನೆ ಮಾಡಲಾಯಿತು.

ಈ ಸಂದರ್ಭದಲ್ಲಿ ಭಕ್ತಾದಿಗಳು ಹಾಗೂ ಗ್ರಾಮಸ್ಥರು ವಿಶೇಷ ಪೂಜೆಯನ್ನು ಮಹಾಗಣಪತಿಗೆ ಸಲ್ಲಿಸಿದರು. ಈಡುಗಾಯಿ ಯನ್ನು ಮಾಡಿದರು. ದಕ್ಷಿಣ ಕನ್ನಡ ಜಿಲ್ಲೆಯ ಕುಣಿತ ಭಜನೆಯ ತಂಡ ಹಾಗೂ ಸ್ಥಳೀಯ ಮಕ್ಕಳಿಂದ ಕುಣಿತ ಭಜನೆಯು ಮೆರವಣಿಗೆ ಉದ್ದಕ್ಕೂ ಸಾಗಿ ಆಕರ್ಷಣೆಯನ್ನು ಹೆಚ್ಚಿಸಿತು. ಕಲಾ ತಂಡದವರು ಗೊಂಬೆ ವೇಷವನ್ನು ಧರಿಸಿ ನೃತ್ಯವನ್ನು ಮಾಡಿದರು. ರುದ್ರಮ್ ಚಂಡೆ ಬಳಗದವರಿಂದ ಚಂಡೆ ಸೇವೆಯು ಜರುಗಿತು. ಮಹಿಳಾ ಭಜನಾ ಮಂಡಳಿಯವರಿಂದ ಭಜನಾ ಕಾರ್ಯಕ್ರಮ ಜರುಗಿತು.

ತದನಂತರ ಬೇಟೋಳಿ ಮೂಲೆ ಅಂಗಡಿ ಸಮೀಪದ ಹೊಳೆಯಲ್ಲಿ ಶಾಸ್ತ್ರೋಕ್ತವಾಗಿ ಶ್ರೀ ಗೌರಿ ಗಣೇಶ ಮೂರ್ತಿಗಳ ವಿಸರ್ಜನೋತ್ಸವವು ಜರುಗಿತು. ಪೂಜಾ ಕಾರ್ಯಕ್ರಮಗಳನ್ನು ದೇವಸ್ಥಾನದ ಪ್ರಧಾನ ಅರ್ಚಕರಾದ ವಿಶ್ವನಾಥ್ ಭಟ್ ಹಾಗೂ ವಾಮನಮೂರ್ತಿ ಭಟ್ ರವರು ನೆರವೇರಿಸಿದರು.ತದನಂತರ ಭಕ್ತಾದಿಗಳು ದೇವಸ್ಥಾನಕ್ಕೆ ತೆರಳಿ ಮಹಾಗಣಪತಿ ದೇವರಿಗೆ ಪೂಜೆಯನ್ನು ಸಲ್ಲಿಸಿದರು. ಈ ಸಂದರ್ಭದಲ್ಲಿ ದೇವಸ್ಥಾನದ ಆಡಳಿತ ಮಂಡಳಿಯವರು, ಗ್ರಾಮಸ್ಥರು, ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.

Share this article

ಟಾಪ್ ನ್ಯೂಸ್

More News