ಜನವಾಹಿನಿ NEWS ಮಡಿಕೇರಿ : ಕೊಡಗು ಜಿಲ್ಲೆಯ ಮಡಿಕೇರಿ ನಗರದ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣದ ವಿಡಿಯೋ ಬಳಸಿಕೊಂಡು ಡೇಟಿಂಗ್ ಮಾಡಲು ಯುವತಿಯರು ಹಾಗೂ ಆಂಟಿಯರು ಸಿಗುತ್ತಾರೆ, ಸರ್ವಿಸ್ ಬೇಕಾದರೆ ಕರೆ ಮಾಡಿ ಎಂದು ಮೊಬೈಲ್ ಸಂಖ್ಯೆಯೊಂದನ್ನು ನೀಡಿ ಸಾಮಾಜಿಕ ಜಾಲತಾಣದಲ್ಲಿ ಅಪ್ರಚಾರ ಮಾಡಿದ ಆರೋಪದಡಿ ವ್ಯಕ್ತಿಯೊಬ್ಬನನ್ನು ಕೊಡಗು ಪೊಲೀಸರು ಬಂಧಿಸಿದ್ದಾರೆ.
ಬಾಗಲಕೋಟೆ ಜಿಲ್ಲೆಯ ಮುಧೋಳ ತಾಲ್ಲೂಕಿನ ಬೆಳಗಲಿ ಗ್ರಾಮದ ನಿವಾಸಿ ನಾಗಪ್ಪ ಹನುಮಂತ ಲಮಾಣಿ (26) ಬಂಧಿತ ಆರೋಪಿಯಾಗಿದ್ದಾನೆ. ಸಮಾಜಿಕ
ಜಾಲತಾಣದಲ್ಲಿ ಕೊಡಗು ಜಿಲ್ಲೆಯ ಗೌರವಕ್ಕೆ ದಕ್ಕೆ ತರುವ ರೀತಿಯಲ್ಲಿ ವಿಡಿಯೋ ಹರಿಬಿಟ್ಟ ಕುರಿತು ವಿವಿಧ ಸಂಘ ಸಂಸ್ಥೆಗಳು ತೀವ್ರ ಆಕ್ಷೇಪ ವ್ಯಕ್ತಪಡಿಸಿ ಕ್ರಮಕ್ಕಾಗಿ ಒತ್ತಾಯಿಸಿದ್ದವು. ಈ ಹಿನ್ನೆಲೆಯಲ್ಲಿ ತನಿಖೆ ಕೈಗೊಂಡ ಕೊಡಗು ಜಿಲ್ಲಾ ಪೊಲೀಸ್ ಘಟಕದ ಸಾಮಾಜಿಕ ಜಾಲತಾಣ ನಿರ್ವಹಣೆ ಮತ್ತು ಕಣ್ಣಾವಲು ತಂಡವು ಆರೋಪಿಯನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದೆ.
ಮಡಿಕೇರಿ ಉಪವಿಭಾಗದ ಡಿವೈಎಸ್‌ಪಿ ಸೂರಜ್ ಪಿ.ಎ, ಮಡಿಕೇರಿ ನಗರ ಸಿಪಿಐ ರಾಜು ಪಿ.ಕೆ., ಪಿಎಸ್‌ಐ ಅನ್ನಪೂರ್ಣ ಎಸ್.ಎಸ್. ಹಾಗೂ ಸಿಬ್ಬಂದಿಗಳ ತಂಡ ಕಾರ್ಯಾಚರಣೆ ನಡೆಸಿತು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್ ಹಾಗೂ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಬಿ.ಪಿ.ದಿನೇಶ್ ಕುಮಾರ್ ಅವರು ಪೊಲೀಸ್ ಅಧಿಕಾರಿಗಳ ಕಾರ್ಯದಕ್ಷತೆಯನ್ನು ಶ್ಲಾಘಿಸಿದ್ದಾರೆ.
ಸಾಮಾಜಿಕ ಜಾಲತಾಣದ ಸಂದೇಶ, ಭಾವಚಿತ್ರ, ವಿಡಿಯೋಗಳನ್ನು ಹಂಚಿಕೊಳ್ಳುವ ಮೊದಲು ಅದರ ಸತ್ಯ-ಅಸತ್ಯತೆಯನ್ನು ಪರಿಶೀಲಿಸಿಕೊಳ್ಳುವಂತೆ ಸಾರ್ವಜನಿಕರಲ್ಲಿ ಮನವಿ ಮಾಡಿರುವ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಮರಾಜನ್, ಕೊಡಗು ಪೊಲೀಸ್ ಸಾಮಾಜಿಕ ಜಾಲತಾಣಗಳ ಮೇಲೆ ಸಂಪೂರ್ಣ ನಿಗಾವಹಿಸಿದೆ ಎಂದು ತಿಳಿಸಿದ್ದಾರೆ.
ಕೋಮು ಸೌಹಾರ್ದತೆಯನ್ನು ಕದಡುವ ದುರುದ್ದೇಶದಿಂದ ಸುಳ್ಳು ಸುದ್ದಿಯ ಪೋಸ್ಟ್ ಗಳನ್ನು ಹರಿಬಿಟ್ಟು ಅಪಪ್ರಚಾರ ಮಾಡುವ ಅಥವಾ ಆತಂಕ ಸೃಷ್ಟಿಸುವ ವ್ಯಕ್ತಿಗಳ ವಿರುದ್ಧ ಪ್ರಕರಣ ದಾಖಲಿಸಿ ಸೂಕ್ತ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.







