Breaking News :

ಮನೆ ಮಂದಿ ನಿದ್ರೆಗೆ ಜಾರಿದ್ದ ವೇಳೆ ಮನೆಗೆ ನುಗ್ಗಿದ ಖತರ್ನಾಕ್ ಕಳ್ಳ ; ನಗದು, ಚಿನ್ನಾಭರಣ ದೋಚಿ ಪರಾರಿ


ಜನವಾಹಿನಿ News ಸಿದ್ದಾಪುರ : ಮನೆ ಮಂದಿ ಗಾಢ ನಿದ್ರೆಗೆ ಜಾರಿದ್ದ ಸಮಯ ಮನೆಗೆ ಕನ್ನ ಹಾಕಿದ ಕಳ್ಳರು ಚಿನ್ನಾಭರಣ ಸೇರಿದಂತೆ ನಗದು ದೋಚಿ ಪರಾರಿಯಾಗಿರುವ ಘಟನೆ ವಿರಾಜಪೇಟೆ ತಾಲ್ಲೂಕಿನ ಸಿದ್ದಾಪುರದಲ್ಲಿ ನಡೆದಿದೆ.

ಇಲ್ಲಿನ ಮೈಸೂರು ರಸ್ತೆಯಲ್ಲಿರುವ ಮನೆಯೊಂದರಲ್ಲಿ ಘಟನೆ ನಡೆದಿದ್ದು, ಸುಮಾರು 19.5 ಲಕ್ಷ ಮೌಲ್ಯದ ಚಿನ್ನಾಭರಣ ಸೇರಿದಂತೆ ನಗದು ಕಳ್ಳತನವಾಗಿದೆ. ಶುಕ್ರವಾರ ನಸುಕಿನ ಜಾವ ಈ ಘಟನೆ ನಡೆದಿದ್ದು, ಮೈಸೂರು ರಸ್ತೆಯ ನಿವಾಸಿ ಬಿ.ಜಿ.ಚಿನ್ನಪ್ಪ ಎಂಬುವವರಿಗೆ ಸೇರಿದ ಮನೆ ಇದಾಗಿದೆ ಎನ್ನಲಾಗಿದೆ.

ಏನಿದು ಪ್ರಕರಣ : ಗುರುವಾರ ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ತಮ್ಮ ಸಂಬಂಧಿಕಾರನ್ನು ನೋಡಲು ಮೈಸೂರಿಗೆ ತೆರಳಿ ಮರಳಿದ್ದ, ಚಿನ್ನಪ್ಪ ದಂಪತಿ ಆಯಾಸದಿಂದ ಮಲಗಿದ್ದರು. ಈ ಸಂದರ್ಭ ಅಂದರೆ ಶುಕ್ರವಾರ ಬೆಳಗ್ಗಿನ ಜಾವ 3.30ರ ಸುಮಾರಿಗೆ ಮನೆ ಮೇಲೆ ಕನ್ನಹಾಕಿದ ಕಳ್ಳ ದುರಸ್ತಿಗೆ ಬಿಟ್ಟಿದ್ದ ಬಾತುರೂಮಿನ ವೆಂಟಿಲೇಟರ್ ಮೂಲಕ ಮನೆಯ ಒಳಗೆ ನುಗ್ಗಿ 15 ಗ್ರಾಂ ಚಿನ್ನದ ಚೈನ್‌, 20 ಗ್ರಾಂ ತೂಕದ ಆರು ಚಿನ್ನದ ಬಳೆ, 10 ಗ್ರಾಂನ ಮೂರು ಉಂಗುರ, 6 ಗ್ರಾಂ ಚಿನ್ನದ ಮುತ್ತಿನ ಸರ, 4 ಗ್ರಾಂ ಚಿನ್ನದ ಪೆಂಡೆಂಟ್, 20 ಗ್ರಾಂ ಡಬ್ಬಲ್ ಚೈನ್, 40 ಗ್ರಾಂನ ಕಾಸಿನ ಸರ ಹಾಗೂ 15 ಗ್ರಾಂ ತೂಕದ ಕೊಕ್ಕೆ ತಾತಿ ಸೇರಿ ದಂತೆ ಒಟ್ಟು 150 ಗ್ರಾಂ ಚಿನ್ನಾಭರಣ ಮತ್ತು 5 ಸಾವಿರ ರೂ. ನಗದು ದೋಚಿ ಪರಾರಿಯಾಗಿದ್ದಾನೆ.

ಈ ಸಂಬಂಧ ಸಿದ್ದಾಪುರ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸ್ಥಳಕ್ಕೆ ಶ್ವಾನದಳ ಬೆರಳಚುತ್ತಜ್ಞರೊಂದಿಗೆ ಹೆಚ್ಚುವರಿ ಪೊಲೀಸ್ ಅಧಿಕಾರಿ ದಿನೇಶ್ ಕುಮಾರ್, ಡಿಎಸ್ಪಿ ಸೂರಜ್ ಠಾಣಾಧಿಕಾರಿ ಮಂಜುನಾಥ್, ಸಿಬ್ಬಂದಿ ಮಹಜರು ನಡೆಸಿದರು. ಇದೇ ಸಂದರ್ಭದಲ್ಲಿ ಪ್ರಕರಣವನ್ನು ಭೇದಿಸಲು ವಿಶೇಷ ತಂಡವನ್ನು ರಚಿಸಿದ್ದು ಕ್ಷಿಪ್ರ ಕಾರ್ಯಾಚರಣೆಗೆ ಮುಂದಾಗಿದ್ದಾರೆ.

Share this article

ಟಾಪ್ ನ್ಯೂಸ್

More News