ಜನವಾಹಿನಿ News ಮರಗೋಡು : ಕಳೆದ 20 ವರ್ಷಗಳಿಂದ ಡಾಂಬರೀಕರಣವಾಗದೆ ಸಂಚಾರ ಯೋಗ್ಯತೆ ಕಳೆದುಕೊಂಡ ಕಟ್ಟೆಮಾಡು–ಮರಗೋಡು ರಸ್ತೆಯ ದುಸ್ಥಿತಿಯನ್ನು ಖಂಡಿಸಿ ಮರಗೋಡಿನಲ್ಲಿ ಗ್ರಾಮಸ್ಥರು ರಸ್ತೆ ತಡೆ ಪ್ರತಿಭಟನೆ ನಡೆಸಿದರು.
ಮರಗೋಡು ಆಟೋ ಚಾಲಕರ ಸಂಘ ಕರೆ ನೀಡಿದ್ದ ಪ್ರತಿಭಟನೆಗೆ ಸಾರ್ವಜನಿಕರಿಂದ ಪಕ್ಷಾತೀತ ಬೆಂಬಲ ದೊರೆಯಿತು. ಪ್ರತಿಭಟನೆಯ ಬೆನ್ನಲ್ಲೇ ಗ್ರಾಮದಲ್ಲಿನ ವರ್ತಕರು ತಮ್ಮ ಅಂಗಡಿ ಮುಂಗಟ್ಟುಗಳನ್ನು ಮುಚ್ಚಿ ರಸ್ತೆಗಿಳಿದು ಹೋರಾಟಕ್ಕೆ ಸಂಪೂರ್ಣ ಬೆಂಬಲ ಸೂಚಿಸಿದರು.
ಸಾರ್ವಜನಿಕರ ಸಂಕಷ್ಟಕ್ಕೆ ಸ್ಪಂದಿಸದೆ ನಿರ್ಲಕ್ಷ್ಯ ಧೋರಣೆ ತೋರಿದ ಅಧಿಕಾರಿಗಳು, ಜನಪ್ರತಿನಿಧಿಗಳ ವಿರುದ್ಧ ಘೋಷಣೆ ಕೂಗಿ ಅಸಮಾಧಾನ ಹೊರಹಾಕಿದರು. ಹದಗೆಟ್ಟ ರಸ್ತೆಯಿಂದ ಸಾರ್ವಜನಿಕರು, ವಾಹನ ಸವಾರರು ಹಾಗೂ ವ್ಯಾಪಾರಿಗಳು ತೀವ್ರ ಸಂಕಷ್ಟ ಅನುಭವಿಸುತ್ತಿದ್ದು, ಸರ್ಕಾರ ಹಾಗೂ ಸಂಬಂಧಪಟ್ಟ ಇಲಾಖೆಗಳ ನಿರ್ಲಕ್ಷ್ಯವೇ ಈ ಸ್ಥಿತಿಗೆ ಕಾರಣ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಭಟನೆ ಹಿನ್ನೆಲೆಯಲ್ಲಿ ಖಾಸಗಿ ಬಸ್‌ಗಳ ಸಂಚಾರ ಸ್ಥಗಿತಗೊಂಡು ಪ್ರಯಾಣಿಕರು ತೊಂದರೆಗೆ ಒಳಗಾದರು. ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿದ ಮಡಿಕೇರಿ ಡಿವೈಎಸ್‌ಪಿ ಸೂರಜ್ ಶಾಂತಿಯುತವಾಗಿ ಪ್ರತಿಭಟನೆ ನಡೆಸುವಂತೆ ಸೂಚನೆ ನೀಡಿದರು.
ಪ್ರತಿಭಟನೆಯ ಸ್ವರೂಪ ಅರಿತು ಸ್ಥಳಕ್ಲೋಕೆ ಆಗಮಿಸಿದ ಲೋಕೋಪಯೋಗಿ ಇಲಾಖೆ (PWD) ಜೂನಿಯರ್ ಎಂಜಿನಿಯರ್ ಗಿರೀಶ್ ಅವರನ್ನು, ರಸ್ತೆ ಕಾಮಗಾರಿ ವಿಳಂಬಕ್ಕೆ ಸಂಬಂಧಿಸಿದಂತೆ ಗ್ರಾಮಸ್ಥರ ತೀವ್ರ ತರಾಟೆಗೆ ತೆಗೆದುಕೊಂಡರು.
ಈ ವೇಳೆ ಅಧಿಕಾರಿ ಗಿರೀಶ್, ಮುಂದಿನ 15 ದಿನಗಳೊಳಗೆ 900 ಮೀಟರ್ ರಸ್ತೆ ಕಾಮಗಾರಿ ಆರಂಭಿಸಿ ಪೂರ್ಣಗೊಳಿಸಲಾಗುವುದು ಹಾಗೂ ಏಪ್ರಿಲ್ ಅಂತ್ಯದೊಳಗೆ ಉಳಿದ ಐದು ಕಿಲೋಮೀಟರ್ ರಸ್ತೆ ಕಾಮಗಾರಿ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.
ಅಧಿಕಾರಿಗಳಿಂದ ಭರವಸೆ ದೊರೆತ ಹಿನ್ನೆಲೆ ಪ್ರತಿಭಟನೆಯನ್ನು ಹಿಂಪಡೆದ ಪ್ರತಿಭಟನಾಕಾರರು. ಶೀಘ್ರದಲ್ಲೇ ಭರವಸೆ ಈಡೇರಿಸದಿದ್ದಲ್ಲಿ ಮುಂದಿನ ದಿನಗಳಲ್ಲಿ ಮತ್ತೆ ಸಂಘಟಿತರಾಗಿ ತೀವ್ರ ಸ್ವರೂಪದ ಆಹೋರಾತ್ರಿ ಧರಣಿ ನಡೆಸುವುದಾಗಿ ಎಚ್ಚರಿಕೆ ನೀಡಿದ್ದಾರೆ.
✍🏻ಅಶೋಕ್ ಮಡಿಕೇರಿ

“ಕಟ್ಟೆಮಾಡು–ಮರಗೋಡು ರಸ್ತೆ ಕಳೆದ ಎರಡು ದಶಕಗಳಿಂದ ದುರಸ್ತಿಯಿಲ್ಲದೆ ಜನರ ಜೀವಕ್ಕೆ ಅಪಾಯವಾಗುತ್ತಿದೆ. ಶಾಲಾ ಮಕ್ಕಳು, ವೃದ್ಧರು, ರೋಗಿಗಳು ದಿನನಿತ್ಯ ಇದೇ ರಸ್ತೆಯಲ್ಲಿ ಸಂಚರಿಸಬೇಕಾದ ಅನಿವಾರ್ಯತೆ ಎದುರಿಸುತ್ತಿದ್ದಾರೆ. ಗುಂಡಿ ಬಿದ್ದ ರಸ್ತೆಯಿಂದ ಬೈಕ್ ಸವಾರರು ಉರುಳಿ ಬೀಳುವುದು ಸಾಮಾನ್ಯವಾಗಿದೆ. ಹಲವು ಬಾರಿ ಮನವಿ ಸಲ್ಲಿಸಿದರೂ ಸಂಬಂಧಪಟ್ಟ ಇಲಾಖೆ ಕಿವಿಗೊಡಲಿಲ್ಲ. ಕೊನೆಗೂ ರಸ್ತೆ ತಡೆ ಪ್ರತಿಭಟನೆಗೆ ಇಳಿಯಬೇಕಾದ ಪರಿಸ್ಥಿತಿ ನಿರ್ಮಾಣವಾಯಿತು. ಅಧಿಕಾರಿಗಳು ನೀಡಿದ ಭರವಸೆ ಈ ಬಾರಿ ಕೇವಲ ಮಾತಾಗದೆ, ತಕ್ಷಣ ಕಾರ್ಯರೂಪಕ್ಕೆ ಬರಬೇಕು. ಇಲ್ಲದಿದ್ದರೆ ಮತ್ತಷ್ಟು ತೀವ್ರ ಹೋರಾಟ ಅನಿವಾರ್ಯ.”
ಶರತ್ ಪರಿಚನ, ಗ್ರಾಮ ಪಂಚಾಯಿತಿ ಸದಸ್ಯರು ಮರಗೋಡು

ಮರಗೋಡು ರಸ್ತೆಯ ದುಸ್ಥಿತಿ ಇಂದು ನಿನ್ನೆ ಅಲ್ಲ. ಮಳೆ ಬಂದರೆ ಗುಂಡಿಗಳು ತುಂಬಿ ರಸ್ತೆ ಕಾಣದೇ ವಾಹನ ಸವಾರರು ಅಪಘಾತಕ್ಕೀಡಾಗುತ್ತಿದ್ದಾರೆ. ಬಸ್ ಸಂಚಾರ ಸ್ಥಗಿತಗೊಂಡಾಗ ವಿದ್ಯಾರ್ಥಿಗಳು ಮತ್ತು ಕೂಲಿ ಕಾರ್ಮಿಕರು ಕೆಲಸಕ್ಕೆ ಹೋಗಲು ಪರದಾಡುವ ಸ್ಥಿತಿ ಎದುರಾಗಿದೆ. ತೆರಿಗೆ ಕಟ್ಟುವ ಸಾರ್ವಜನಿಕರಿಗೆ ಮೂಲ ಸೌಕರ್ಯ ಒದಗಿಸುವುದು ಸರ್ಕಾರದ ಜವಾಬ್ದಾರಿ. ಅಧಿಕಾರಿಗಳು ನೀಡಿರುವ ಭರವಸೆಯನ್ನು ನಿಗದಿತ ಅವಧಿಯೊಳಗೆ ಜಾರಿಗೊಳಿಸಬೇಕು. ಇಲ್ಲವಾದರೆ ಗ್ರಾಮಸ್ಥರು ಮತ್ತೆ ಸಂಘಟಿತ ಹೋರಾಟಕ್ಕೆ ಮುಂದಾಗಲಿದ್ದು ಉಪವಾಸ ಸತ್ಯಾಗ್ರಹ ಮಾಡಲಿದ್ದೇವೆ ”
ನಂದಕುಮರ್, ಆಟೋ ಚಾಲಕರ ಮಾಲೀಕರ ಸಂಘದ ಅಧ್ಯಕ್ಷರು. ಮರಗೋಡು







