ಜನವಾಹಿನಿ News ಮಡಿಕೇರಿ : ಮೇಕೇರಿಯ ಶ್ರೀ ಗೌರಿಶಂಕರ ದೇವಾಲಯದಲ್ಲಿ ಫೆ.೭ ರಿಂದ ಫೆ.೧೫ರ ವರೆಗೆ ಮಹಾಶಿವರಾತ್ರಿ ಉತ್ಸವ ಪ್ರಯುಕ್ತ ವಿವಿಧ ಧಾರ್ಮಿಕ ಪೂಜಾ ಕೈಂಕರ್ಯಗಳು ನಡೆಯಲಿದೆ ಎಂದು ದೇವಾಲಯದ ಅಧ್ಯಕ್ಷ ಕೆ.ಕೆ.ಪೂವಯ್ಯ ತಿಳಿಸಿದರು.
ನಗರದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಫೆ.೭ ರಂದು ಬೆಳಿಗ್ಗೆ ೯.೩೦ ಗಂಟೆಗೆ ಧ್ವಜಾರೋಹಣ ನೆರವೇರಲಿದ್ದು, ಸಂಜೆ ೬.೩೦ ಗಂಟೆಗೆ ಮಡಿಕೇರಿಯ ಶ್ರೀ ವಿಜಯ ವಿನಾಯಕ ದೇವಾಲಯ ಮಹಿಳಾ ಭಜನಾ ತಂಡದಿಂದ ಭಜನಾ ಕಾರ್ಯಕ್ರಮ ನಡೆಯಲಿದೆ. ಫೆ.೮ರಂದು ದೇವರಕೊಲ್ಲಿ ಚಾಮುಂಡೇಶ್ವರಿ ಭಜನಾ ಸಮಿತಿಯಿಂದ ಭಜನಾ ಕಾರ್ಯಕ್ರಮ, ಫೆ.೯ರಂದು ರಂದು ಸಂಜೆ ೬.೩೦ ಗಂಟೆಗೆ ಹಾಕತ್ತೂರು-ತೊಂಬತ್ತುಮನೆ ಶ್ರೀ ವಿನಾಯಕ ದೇವಾಲಯ ಭಜನಾ ಸಂಘದಿಂದ ಭಜನಾ ಕಾರ್ಯಕ್ರಮ ನಡೆಯಲಿದ್ದು, ಫೆ.೧೦ರಂದು ಶ್ರೀ ಕನ್ನಿಕಾ ಪರಮೇಶ್ವರಿ ದೇವಾಲಯದ ಮಹಿಳಾ ಭಜನಾ ಸಮಿತಿಯಿಂದ ಭಜನಾ ಕಾರ್ಯಕ್ರಮ ನಡೆಯಲಿದೆ. ಅದೇ ರೀತಿ ಫೆ.೧೧, ೧೨, ೧೩, ೧೪ರಂದು ವಿವಿಧ ಸಂಘಸಂಸ್ಥೆಗಳಿಂದ ಭಜನಾ ಕಾರ್ಯಕ್ರಮ ನಡೆಯಲಿದೆ. ಪ್ರತಿದಿನ ರಾತ್ರಿ ಮಹಾಪೂಜೆಯ ನಂತರ ಅನ್ನಸಂತರ್ಪಣೆ ನೆರವೇರಲಿದೆ ಎಂದು ತಿಳಿಸಿದರು.
ಫೆ.೧೫ ರಂದು ಮಹಾಶಿವರಾತ್ರಿಯ ಪ್ರಯುಕ್ತ ಬೆಳಿಗ್ಗೆ ೮ ಗಂಟೆಗೆ ಶ್ರೀ ಗಣಪತಿ ಹೋಮ, ಬೆಳಿಗ್ಗೆ ೯.೩೦ ಗಂಟೆಗೆ ಶ್ರೀ ಮೃತ್ಯುಂಜಯ ಹೋಮ, ರುದ್ರಾಭಿಷೇಕ, ದೇವಾಲಯದ ಈಶ್ವರಾರಾಧನೆಯ ವಿಶಿಷ್ಟ ಸೇವೆಯಾದ ಹೊರೆಕಾಣಿಕೆ ಸಮರ್ಪಣೆ ನಂತರ ಮಧ್ಯಾಹ್ನದ ಮಹಾಪೂಜೆಯ ನಂತರ ಭಕ್ತಾದಿಗಳಿಗೆ ಅನ್ನಸಂತರ್ಪಣೆ ನೆರವೇರಲಿದೆ. ಸಂಜೆ ೬.೩೦ ಗಂಟೆಗೆ ಪ್ರತಿಭಾನ್ವಿತ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ, ರಾತ್ರಿ ೮ ಗಂಟೆಗೆ ರುದ್ರಾಭಿಷೇಕ, ೯ ಗಂಟೆಗೆ ರಂಗಪೂಜೆ ನೆರವೇರಲಿದ್ದು, ನಂತರ ಮಂಗಳೂರಿನ ಶ್ರೀ ಮಹಾದೇವನನ್ನು ಅಹೋರಾತ್ರಿ ಜಾಗರಣೆಯ ಮೂಲಕ ಆರಾಧಿಸಲು ಮಲ್ಲ ದುರ್ಗಾ ಪರಮೇಶ್ವರಿ ಯಕ್ಷಗಾನ ಮಂಡಳಿ ಕಾಸರಗೋಡು ಇವರಿಂದ ಕೊಲ್ಲೂರು ಮೂಕಾಂಬಿಕಾ ಕಥಾ ಪ್ರಸಂಗ ನಡೆಯಲಿದೆ. ಫೆ.೧೬ರಂದು ಬೆಳಗ್ಗೆ ೧೧ ಗಂಟೆಗೆ ಧಾರ್ಮಿಕ ಉಪನ್ಯಾಸ ನಡೆಯಲಿದೆ ಎಂದು ತಿಳಿಸಿದರು.
ದೇವಾಲಯ ಆಡಳಿತ ಮಂಡಳಿಯ ಉಪಾಧ್ಯಕ್ಷ ಕೆ.ಆರ್.ಬೆಳ್ಯಪ್ಪ, ಖಜಾಂಚಿ ಈಶ್ವರ್, ಕಾರ್ಯದರ್ಶಿ ಟಿ.ಬಿ.ಲೋಕೇಶ್, ಪ್ರಮುಖರಾದ ಧಾಮೋದರ್, ರತ್ನಾಕರ್ ರೈ ಸುದ್ದಿಗೋಷ್ಠಿಯಲ್ಲಿದ್ದರು







