Breaking News :

ಯುವನಿಧಿ ಯೋಜನೆ ನೋಂದಣಿ ಪ್ರಕ್ರಿಯೆ ಆರಂಭ : ಸೌಲಭ್ಯ ಪಡೆಯಲು ಜಿಲ್ಲಾಧಿಕಾರಿ ಮನವಿ

ಯುವನಿಧಿ ಯೋಜನೆಯಡಿ ಜಿಲ್ಲೆಯಲ್ಲಿ 1711 ಮಂದಿ ಹೆಸರು ನೋಂದಣಿ

ಯುವನಿಧಿ ಯೋಜನೆ ನೋಂದಣಿ ಪ್ರಕ್ರಿಯೆ ಆರಂಭ; ಸೌಲಭ್ಯ ಪಡೆಯಲು ಮನವಿ

ಮಡಿಕೇರಿ : 2025 ರ ಯುವನಿಧಿ ಯೋಜನೆಯ ನೋಂದಣಿ ಪ್ರಕ್ರಿಯೆ ಈಗಾಗಲೇ ಆರಂಭವಾಗಿದ್ದು, ಈ ಸಂಬಂಧ ಭಿತ್ತಿಪತ್ರ ವನ್ನು ಜಿಲ್ಲಾಧಿಕಾರಿ ವೆಂಕಟ್ ರಾಜಾ ಬುಧವಾರ ಬಿಡುಗಡೆ ಮಾಡಿದರು. 

ನಗರದ ಜಿಲ್ಲಾಧಿಕಾರಿಯವರ ಕಚೇರಿ ಸಭಾಂಗಣದಲ್ಲಿ ಭಿತ್ತಿಪತ್ರ ಬಿಡುಗಡೆ ಮಾತನಾಡಿದ ಜಿಲ್ಲಾಧಿಕಾರಿ ಅವರು ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ ವತಿಯಿಂದ 2024 ರ ಜನವರಿ 01 ರಂದು ಯುವನಿಧಿ ಯೋಜನೆಯನ್ನು ಸರ್ಕಾರ ಜಾರಿಗೊಳಿಸಿದೆ. ಆ ದಿಸೆಯಲ್ಲಿ 2025 ರ ಯುವನಿಧಿ ಯೋಜನೆಯ ನೋಂದಣಿ ಪ್ರಕ್ರಿಯೆ ಆರಂಭಗೊಂಡಿದ್ದು, ಈ ಯೋಜನೆಯ ಸದುಪಯೋಗಕಕ್ಕೆ ಮನವಿ ಮಾಡಿದರು.

ಪದವಿ ಹಾಗೂ ಸ್ನಾತಕೋತ್ತರ ಪದವಿ ನಿರುದ್ಯೋಗಿಗಳಿಗೆ ಮೂರು ಸಾವಿರ ರೂ. ಹಾಗೂ ಡಿಪ್ಲೋಮಾ ತೇರ್ಗಡೆಯಾದವರಿಗೆ 1500 ರೂ.ವನ್ನು ಪ್ರತೀ ತಿಂಗಳು ನಿರುದ್ಯೋಗಿ ಭತ್ಯೆಯನ್ನು ನೀಡಲಾಗುತ್ತಿದ್ದು, ಈ ಯೋಜನೆಗೆ ಅರ್ಹರು ಹೆಸರು ನೋಂದಣಿ ಮಾಡುವಂತೆ ಕೋರಿದರು.

ಜಿಲ್ಲಾ ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆಯ ಅಧಿಕಾರಿ ಮಂಜುನಾಥ್ ಅವರು ಮಾಹಿತಿ ನೀಡಿ 2023, 2024 ಹಾಗೂ 2025 ರಲ್ಲಿ ಪದವಿ, ಸ್ನಾತಕೋತ್ತರ ಪದವಿ, ಡಿಪ್ಲೊಮೋ ಉತ್ತೀರ್ಣರಾದ ಅಭ್ಯರ್ಥಿಗಳು ಅರ್ಹರಾಗಿದ್ದು, ಫಲಿತಾಂಶ ಪ್ರಕಟವಾದ 180 ದಿನಗಳ ನಂತರವು ಸಾರ್ವಜನಿಕ/ ಖಾಸಗಿ ಕ್ಷೇತ್ರದಲ್ಲಿ ಉದ್ಯೋಗದಲ್ಲಿ ಇರದವರು, ಸ್ವಯಂ ಉದ್ಯೋಗದಲ್ಲಿ ಇರದವರು ಅರ್ಹರಾಗಿದ್ದಾರೆ. ಉನ್ನತ ವ್ಯಾಸಂಗ ಮುಂದುವರಿಸದೆ ಇರುವವರು ಹಾಗೂ ಕನಿಷ್ಠ 6 ವರ್ಷ ಕರ್ನಾಟಕ ನಿವಾಸಿಯಾಗಿರುವವರು ಅರ್ಹರಾಗಿದ್ದಾರೆ ಎಂದು ತಿಳಿಸಿದರು.

ಯುವನಿಧಿ ಪ್ಲಸ್ ಕೌಶಲ್ಯ ತರಬೇತಿ ಕಾರ್ಯಕ್ರಮದಡಿ ಯುವನಿಧಿ ಫಲಾನುಭವಿಗಳು ಉಚಿತ ಕೌಶಲ್ಯ ತರಬೇತಿ ಪಡೆಯಲು ಕರ್ನಾಟಕ ಕೌಶಲ್ಯ ಅಭಿವೃದ್ಧಿ ನಿಗಮದ ವೆಬ್‍ಸೈಟ್ https://www.kaushalkar.com/app/registration ಕ್ಲಿಕ್ ಮಾಡಿ ಹೆಸರು ನೋಂದಾಯಿಸಿ ಕೊಳ್ಳಬಹುದಾಗಿದೆ ಎಂದು ಮಂಜುನಾಥ್ ಅವರು ವಿವರಿಸಿದರು.

ಜಿಟಿಟಿಸಿ, ಕೆಜಿಟಿಟಿಐ, ಸಿಡಾಕ್, ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಗಳ ಮುಖಾಂತರ ಸಿಎಂಕೆಕೆವೈ ಯೋಜನೆಯಡಿ ಕೌಶಲ್ಯ ಉಚಿತ ತರಬೇತಿ ನೀಡಲಾಗುತ್ತದೆ ಎಂದು ತಿಳಿಸಿದರು.

ನೋಂದಣಿಗೆ ಎಸ್‍ಎಸ್‍ಎಲ್‍ಸಿ, ಪಿಯುಸಿ, ಪದವಿ, ಸ್ನಾತಕೋತ್ತರ, ಡಿಪ್ಲೋಮಾ ಪ್ರಮಾಣ ಪತ್ರ ನೋಂದಣಿಗೆ ಅಗತ್ಯ ದಾಖಲಾತಿ ಒದಗಿಸಬೇಕು. ಪ್ರತೀ ತ್ರೈಮಾಸಿಕ 1 ರಿಂದ 25 ರೊಳಗೆ ಸ್ವಯಂ ಘೋಷಣೆ ನೀಡುವುದು ನೋಂದಾಯಿಸಿಕೊಳ್ಳಲು ಸೇವಾಸಿಂಧು ಪೋರ್ಟಲ್ https://sevasindhugs.karnataka.gov.in ಸಹಾಯವಾಣಿ ಸಂಖ್ಯೆ 1800-599-7154 ನ್ನು ಸಂಪರ್ಕಿಸಬಹುದು ಎಂದರು.

ಪದವಿ, ಸ್ನಾತಕೋತ್ತರ ಪದವಿ, ಡಿಪ್ಲೋಮಾ ಪ್ರಮಾಣ ಪತ್ರಗಳನ್ನು ನ್ಯಾಡ್ ಪೋರ್ಟಲ್‍ನಲ್ಲಿ ಇಂದೀಕರಿಸಿರುವುದನ್ನು ಖಚಿತಪಡಿಸಿಕೊಳ್ಳುವುದು. https://nad.karnataka.gov.in ಕರ್ನಾಟಕ ಒನ್, ಬೆಂಗಳೂರು ಒನ್, ಗ್ರಾಮ ಒನ್, ಬಾಪೂಜಿ ಸೇವಾ ಕೇಂದ್ರಗಳ ಮೂಲಕ ಉಚಿತವಾಗಿ ನೋಂದಾಯಿಸಿಕೊಳ್ಳಬಹುದು. ನೋಂದಣಿಯಲ್ಲಿ ಆಧಾರ್ ಸೀಡೆಡ್ ಬ್ಯಾಂಕ್ ಖಾತೆ, ಆಧಾರ್ ಕಾರ್ಡ್ ಹಾಗೂ ಆಧಾರ್ ಲಿಂಕ್ಡ್ ಮೊಬೈಲ್ ಸಂಖ್ಯೆಯ ವಿವರ ನೀಡಬೇಕು ಎಂದು ತಿಳಿಸಿದರು.

2024 ರ ಜನವರಿಯಿಂದ ಜುಲೈ, 2025 ರವರೆಗೆ ಯುವನಿಧಿ ಯೋಜನೆಯಡಿ ಜಿಲ್ಲೆಯಲ್ಲಿ 1711 ಮಂದಿ ನೋಂದಣಿ ಮಾಡಿದ್ದಾರೆ ಎಂದು ಮಂಜುನಾಥ್ ಅವರು ಮಾಹಿತಿ ನೀಡಿದರು.

ಮಡಿಕೇರಿ ತಾಲ್ಲೂಕಿನಲ್ಲಿ 466, ಪೊನ್ನಂಪೇಟೆ ತಾಲ್ಲೂಕಿನಲ್ಲಿ 193, ಕುಶಾಲನಗರ ತಾಲ್ಲೂಕಿನಲ್ಲಿ 269, ಸೋಮವಾರಪೇಟೆ ತಾಲ್ಲೂಕಿನಲ್ಲಿ 483, ವಿರಾಜಪೇಟೆ ತಾಲ್ಲೂಕಿನಲ್ಲಿ 300 ಮಂದಿ ಹೆಸರು ನೋಂದಾಯಿಸಿದ್ದು, ಯುವನಿಧಿ ಸೌಲಭ್ಯ ಪಡೆಯುತ್ತಿದ್ದಾರೆ ಎಂದು ಮಾಹಿತಿ ನೀಡಿದರು. ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆಯ ಮದನ್ ಇತರರು ಇದ್ದರು.

Share this article

ಟಾಪ್ ನ್ಯೂಸ್

More News