ಜನವಾಹಿನಿ News ಮಡಿಕೇರಿ : ಜಿಲ್ಲೆಯಲ್ಲಿ ೪,೫೦೦ ಬಿ.ಪಿ.ಎಲ್ ಕಾರ್ಡ್ಗಳನ್ನು ರದ್ದುಗೊಳಿಸಿದ್ದು, ಈ ಪ್ರಕ್ರಿಯೆ ಮುಂದುವರಿಸುತ್ತಿರುವುದು ಸರಿಯಲ್ಲ ಎಂದಿರುವ ಎಸ್ಡಿಪಿಐ ಜಿಲ್ಲಾಧ್ಯಕ್ಷ ಅಮಿನ್ ಮೊಹಿಸಿನ್, ಕೂಡಲೇ ರದ್ದುಗೊಳಿಸಿದ ಎಲ್ಲಾ ಬಿ.ಪಿ.ಎಲ್ ಕಾರ್ಡ್ಗಳನ್ನು ಮರಳಿ ನೀಡಬೇಕೆಂದು ಒತ್ತಾಯಿಸಿದರು.
ನಗರದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಾಗರಿಕ ಸೇವೆ, ಬಡತನ ನಿರ್ಮೂಲನೆ, ಆಹಾರ, ಆರೋಗ್ಯ ಭದ್ರತೆ, ಶಿಕ್ಷಣ, ಉದ್ಯೋಗಕ್ಕೆ ಉತ್ತೇಜನೆ ಪ್ರತಿ ಸರ್ಕಾರದ ಜವಾಬ್ದಾರಿಯಾಗಿದೆ. ವಿಶೇಷ ಆರ್ಥಿಕ ದುರ್ಬಲ ವರ್ಗದ ಆರ್ಥಿಕ ಮಿತಿ ೮ ಲಕ್ಷಕ್ಕೆ ಸರ್ಕಾರ ನಿಗದಿಪಡಿಸಿದೆ. ಆದರೆ, ಬಿ.ಪಿ.ಎಲ್ ಪಡಿತರ ಕಾರ್ಡ್ ಪಡೆಯಲು ೧.೨೫ ಲಕ್ಷದ ಒಳಗೆ ಆದಾಯ ಹೊಂದಿರುವವರು ಮಾತ್ರ ಬಡವರು ಎಂದು ನಿಯಮ ಜಾರಿ ಮಾಡಿರುವುದು ನಾಗರಿಕ ಸೇವೆಯ ಪರಿಕಲ್ಪನೆಗೆ ವಿರುದ್ಧವಾಗಿದೆ. ಉಚಿತ ಗ್ಯಾರಂಟಿ ಯೋಜನೆಯನ್ನು ನೆಪವಾಗಿಟ್ಟುಕೊಂಡು ಅರ್ಹ ಬಿ.ಪಿ.ಎಲ್ ಕಾರ್ಡ್ಗಳನ್ನು ಆದಾಯ ತೆರಿಗೆ ಸಲ್ಲಿಕೆಯ ನೆಪವನ್ನು ಮುಂದಿಟ್ಟುಕೊಂಡು ಬಡವರ ಬಿ.ಪಿ.ಎಲ್ ಕಾರ್ಡ್ಗಳನ್ನು ರದ್ದುಗೊಳಿಸಲಾಗುತ್ತಿದೆ. ರದ್ದುಗೊಳಿಸಿದ ಬಿ.ಪಿ.ಎಲ್ ಕಾರ್ಡ್ಗಳನ್ನು ಮರಳಿ ನೀಡಬೇಕು ಎಂದು ಆಗ್ರಹಿಸಿದರು.
೨೦೨೬-೨೭ರ ಕರ್ನಾಟಕದ ಬಜೆಟ್ನಲ್ಲಿ ಕೊಡಗಿನ ಅಭಿವೃದ್ಧಿಗೆ ರೂ.೫೦೦ ಕೋಟಿಗಳ ವಿಶೇಷ ಪ್ಯಾಕೆಜ್ ಘೋಷಣೆ ಮಾಡಬೇಕು. ಪ್ರವಾಸೋದ್ಯಮದ ಅಭಿವೃದ್ಧಿಗೆಂದು ರೂ.೨.೫೦೦ ಕೋಟಿ ಬಿಡುಗಡೆಗೊಳಿಸಬೇಕು. ಕೊಡಗಿಗೆ ರೈಲು ಸಂಪರ್ಕಕ್ಕಾಗಿ ಬೇಕಿರುವ ಅನುದಾನವನ್ನು ಕರ್ನಾಟಕ ಸರ್ಕಾರ ಮೀಸಲಿಡಬೇಕು. ತುರ್ತು ಆರೋಗ್ಯ ಸೇವೆಗಾಗಿ ಏರ್ ಆಂಬ್ಯುಲೆನ್ಸ್ ನೀಡಬೇಕು. ಜಿಲ್ಲೆಯಲ್ಲಿ ಮಲ್ಟಿ ಸ್ಪೆಶಾಲಿಟಿ ಆಸ್ಪತ್ರೆಗಾಗಿ ಅನುದಾನ ಮೀಸಲಿಡಬೇಕು. ವನ್ಯಜೀವಿ ಹಾಗೂ ಮಾನವ ಸಂಘರ್ಷಣೆಯಿಂದಾಗಿ ಪ್ರಾಣಹಾನಿ ಹಾಗೂ ಕೃಷಿನಷ್ಟ ಸಂರಕ್ಷಿಸಲು ವಿಶೇಷ ಅನುದಾನ ಹಾಗೂ ಶಾಶ್ವತ ಪರಿಹಾರ ಸೂತ್ರ ಕಂಡುಕೊಳ್ಳಬೇಕು ಎಂದು ಆಗ್ರಹಿಸಿದರು.
ಮಡಿಕೇರಿ ನಗರ ನಿವೇಶನ ರಹಿತ ನಿವಾಸಿಗಳಿಗೆ ನಿವೇಶನ ಗುರುತಿಸಿ ವಸತಿ ಸೌಲ್ಯಭ್ಯ ಒದಗಿಸಬೇಕು. ಅಲ್ಪಸಂಖ್ಯಾತರ ಅಭಿವೃದ್ಧಿಗಾಗಿ ರೂ.೧೫೦೦೦ ಕೋಟಿ ಮೀಸಲಿಡಬೇಕು ಎಂದು ಆಗ್ರಹಿಸಿದ ಅವರು, ಮಡಿಕೇರಿ ನಗರದಲ್ಲಿ ತಲೆದೋರಿರುವ ಹಲವು ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವಲ್ಲಿ ನಗರಸಭೆಯ ಆಡಳಿತ ವಿಫಲವಾಗಿದೆ. ಕಳೆದ ೫ ತಿಂಗಳ ಆಡಳಿತ ನಡೆಸಿದ ಬಿ.ಜೆ.ಪಿ ನಗರ ಅಭಿವೃದ್ಧಿ ಪಡಿಸುವ ಸುವರ್ಣ ಅವಕಾಶವನ್ನು ಕಳೆದುಕೊಂಡಿದೆ ಎಂದರು.
ಸೋಶಿಯಲ್ ಡೆಮಾಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾದ ಉಪಾಧ್ಯಕ್ಷ ಮನ್ಸೂರ್ ಅಲಿ ಮಾತನಾಡಿ, ಜಿಲ್ಲೆಯಲ್ಲಿ ಪಾಸ್ಪೋರ್ಟ್ ಕಚೇರಿ ಆರಂಭಿಸಬೇಕು. ನಿವೇಶನ ರಹಿತರಿಗೆ ನಿವೇಶನ ನೀಡಬೇಕು. ಇಲ್ಲದಿದ್ದಲ್ಲಿ ಮಳೆಹಾನಿ ಸಂತ್ರಸ್ತರಿಗೆ ವಿವಿಧಡೆ ಮನೆ ನಿರ್ಮಿಸಿ ಇನ್ನೂ ಹಸ್ತಾಂತರ ಮಾಡದ ಮನೆಗಳನ್ನು ವಶಪಡಿಸಿಕೊಂಡು ನಿವೇಶನ ರಹಿತರಿಗೆ ನೀಡಲು ಮುಂದಾಗಲಾಗುವುದು ಎಂದು ಎಚ್ಚರಿಸಿದರು.
ಸೋಶಿಯಲ್ ಡೆಮಾಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾದ ನಗರಾಧ್ಯಕ್ಷ ಮೊಹಮ್ಮದ್ ಅಲಿ, ಮಾಜಿ ಅಧ್ಯಕ್ಷ ಅಬ್ದುಲ್ ಅಡ್ಕಾರ್, ಸದಸ್ಯರಾದ ಮೇರಿ ವೇಗಸ್, ಜಲೀಲ್ ಸುದ್ದಿಗೋಷ್ಠಿಯಲ್ಲಿದ್ದರು.








