Breaking News :

ರುದ್ರಪ್ಪ ಲಮಾಣಿ ಹಾಗೂ ತಂಡದ ಸದಸ್ಯರಿಂದ ಜಿಲ್ಲಾಧಿಕಾರಿ ಕಚೇರಿ ಮುಂಭಾಗದ ತಡೆಗೋಡೆ ಕಾಮಗಾರಿ ವೀಕ್ಷಣೆ  

ವಿಧಾನಸಭೆ ಅರ್ಜಿ ಸಮಿತಿ ಅಧ್ಯಕ್ಷರಾದ ರುದ್ರಪ್ಪ ಲಮಾಣಿ ಹಾಗೂ ತಂಡದ ಸದಸ್ಯರ ಭೇಟಿ

ಮಂಗಳೂರು ರಸ್ತೆಯ ತಡೆಗೋಡೆ ಕಾಮಗಾರಿ ವೀಕ್ಷಣೆ  

ಮಡಿಕೇರಿ : ವಿಧಾನಸಭೆಯ ಉಪ ಸಭಾಧ್ಯಕ್ಷರು ಹಾಗೂ ಕರ್ನಾಟಕ ವಿಧಾನಸಭೆಯ ಅರ್ಜಿಗಳ ಸಮಿತಿ ಅಧ್ಯಕ್ಷರಾದ ರುದ್ರಪ್ಪ ಮಾನಪ್ಪ ಲಮಾಣಿ ಮತ್ತು ವಿಧಾನಸಭೆಯ ಅರ್ಜಿ ಸಮಿತಿ ತಂಡದ ಸದಸ್ಯರು ನಗರದ ಜಿಲ್ಲಾಡಳಿತ ಭವನ ಬಳಿಯ ತಡೆಗೋಡೆಯನ್ನು ಗುರುವಾರ ವೀಕ್ಷಿಸಿದರು. 

ವಿಧಾನಸಭೆಯ ಅರ್ಜಿ ಸಮಿತಿ ತಂಡದ ಸದಸ್ಯರಾದ ಎ.ಮಂಜು, ಡಾ.ಮಂತರ್ ಗೌಡ, ಯು.ಬಿ.ಬಣಕಾರ್, ಸಿ.ಎನ್.ಬಾಲಕೃಷ್ಣ, ಎಚ್.ಡಿ.ತಮ್ಮಯ್ಯ, ಕೆ.ಎಸ್.ಆನಂದ್, ಕೆ.ಸಿ.ಶ್ರೀನಿವಾಸ, ಮಹೇಶ್ ಟೆಂಗಿನಕಾಯಿ, ಎಸ್.ಮುನಿರಾಜು, ಡಾ.ಅವಿನಾಶ್ ಉಮೇಶ್ ಜಾದವ ಇತರರು ಭೇಟಿ ನೀಡಿ ತಡೆಗೋಡೆ ಪರಿಶೀಲಿಸಿದರು.

ಜಿಲ್ಲಾಧಿಕಾರಿ ವೆಂಕಟ್ ರಾಜಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್, ಜಿ.ಪಂ.ಸಿಇಒ ಆನಂದ್ ಪ್ರಕಾಶ್ ಮೀನಾ, ಲೋಕೋಪಯೋಗಿ ಇಲಾಖೆ ಕಾರ್ಯದರ್ಶಿ ಸತ್ಯನಾರಾಯಣ ಇತರರು ಇದ್ದರು.

ಈ ಸಂದರ್ಭದಲ್ಲಿ ಸಮಿತಿ ಸದಸ್ಯರು ಹಾಗೂ ಶಾಸಕರಾದ ಡಾ.ಮಂತರ್ ಗೌಡ ಅವರು ತಡೆಗೋಡೆ ಕಾಮಗಾರಿ ಬಗ್ಗೆ ಮಾಹಿತಿ ನೀಡಿದರು.

ಹೆದ್ದಾರಿ ಹಾಗೂ ತಡೆಗೋಡೆಗೆ ಯಾವುದೇ ರೀತಿ ತೊಂದರೆಯಾಗದಂತೆ ಮಳೆಯ ಮತ್ತು ಚರಂಡಿ ನೀರು ಸರಾಗವಾಗಿ ಹರಿಯುವ ವ್ಯವಸ್ಥೆ ಮಾಡಲಾಗಿದೆ ಎಂದು ಡಾ.ಮಂತರ್ ಗೌಡ ಅವರು ವಿವರಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ವಿಧಾನಸಭೆಯ ಉಪ ಸಭಾಧ್ಯಕ್ಷರು ಹಾಗೂ ಅರ್ಜಿ ಸಮಿತಿ ಅಧ್ಯಕ್ಷರಾದ ರುದ್ರಪ್ಪ ಮಾನಪ್ಪ ಲಮಾಣಿ ಅವರು ಯಾವುದೇ ರೀತಿಯಲ್ಲಿ ತೊಂದರೆಯಾಗದಂತೆ ರಸ್ತೆ ಹಾಗೂ ತಡೆಗೋಡೆ ಭದ್ರವಾಗಿ ನಿಲ್ಲುವ ನಿಟ್ಟಿನಲ್ಲಿ ಹೊಸ ತಂತ್ರಜ್ಞಾನ ಮೂಲಕ ಕಾಮಗಾರಿ ಕೈಗೊಂಡು ಶೀಘ್ರ ಪೂರ್ಣಗೊಳಿಸಬೇಕು ಎಂದು ಸೂಚಿಸಿದರು.

ಬಳಿಕ ಸಭಾ ಕಾರ್ಯಕ್ರಮದಲ್ಲಿ ಮಾಹಿತಿ ನೀಡಿದ ಲೋಕೋಪಯೋಗಿ ಇಲಾಖೆಯ ಮುಖ್ಯ ಎಂಜಿನಿಯರ್ ಮಂಜಪ್ಪ ಅವರು ಭಾರತೀಯ ವಿಜ್ಞಾನ ಸಂಸ್ಥೆಯ ತಾಂತ್ರಿಕ ತಜ್ಞರ ಸಲಹೆಯಂತೆ ಆರ್‍ಇ ವಾಲ್ ಮಾದರಿಯಲ್ಲಿ ಕಾಮಗಾರಿ ಕೈಗೊಳ್ಳಲಾಗಿದೆ ಎಂದು ಹೇಳಿದರು.

ರಾಷ್ಟ್ರೀಯ ಹೆದ್ದಾರಿ ಹಾದುಹೋಗುವ ಮಾರ್ಗ ಆಗಿರುವುದರಿಂದ ಮೇಲಿನ ಸರ್ಪೇಜ್ ವಾಟರ್ ಸರಾಗವಾಗಿ ಹರಿಯುವಂತೆ ಮಾಡಲಾಗಿದೆ. ರಸ್ತೆ ಮತ್ತು ತಡೆಗೋಡೆಗೆ ಯಾವುದೇ ರೀತಿ ಧಕ್ಕೆಯಾಗದಂತೆ ಆರ್‍ಇ ವಾಲ್ ನಿರ್ಮಿಸಲಾಗಿದೆ. ಎರಡನೇ ಹಂತದ ಕಾಮಗಾರಿ ಆದಷ್ಟು ಶೀಘ್ರ ಪೂರ್ಣಗೊಳ್ಳಲಿದೆ ಎಂದು ಹೇಳಿದರು.

ಶಾಸಕರಾದ ಡಾ.ಮಂತರ್ ಗೌಡ ಅವರು ಮಾತನಾಡಿ ಮಳೆಯ ನೀರು ಸರಾಗವಾಗಿ ಹರಿಯುವಂತೆ ಮಾಡಲಾಗಿದೆ. ಚರಂಡಿ ನೀರು ಸಹ ನಿಲ್ಲದೆ ತಡೆಗೋಡೆ ಹಾಗೂ ರಸ್ತೆಗೆ ಯಾವುದೇ ರೀತಿ ಅಡಚಣೆ ಉಂಟಾಗದಂತೆ ನೀರು ಹರಿಯಲು ವ್ಯವಸ್ಥೆ ಮಾಡಲಾಗಿದೆ ಎಂದರು.

ಜಿಲ್ಲಾಡಳಿತ ಭವನ ನಿರ್ಮಾಣ ಸಂದರ್ಭದಲ್ಲಿ ರಾಷ್ಟ್ರೀಯ ಹೆದ್ದಾರಿ ವಿಭಾಗದವರ ಗಮನಕ್ಕೆ ತರಬೇಕಿತ್ತು, ಆ ನಿಟ್ಟಿನಲ್ಲಿ ತಡೆಗೋಡೆ ಸುರಕ್ಷತೆಗೆ ಒತ್ತು ನೀಡಿ ಅರ್ಜಿ ಸಮಿತಿಗೆ ಮನವಿ ಮಾಡಲಾಗಿತ್ತು. ಕಳೆದ 2024 ರ ಮಾರ್ಚ್ ತಿಂಗಳಲ್ಲಿ ಅರ್ಜಿ ಸಮಿತಿ ಸದಸ್ಯರ ತಂಡವು ಆಗಮಿಸಿತ್ತು. ಈಗ ಸಮಿತಿಯ ಅಧ್ಯಕ್ಷರ ನೇತೃತ್ವದ ತಂಡ ಆಗಮಿಸಿ ವೀಕ್ಷಿಸಿದೆ. ದಸರಾ ವೇಳೆಗೆ ಕಾಮಗಾರಿ ಪೂರ್ಣಗೊಳಿಸುವಂತೆ ತಿಳಿಸಲಾಗಿದೆ ಎಂದರು.

ಈ ಸಂದರ್ಭದಲ್ಲಿ ಮಾತನಾಡಿದ ಸಮಿತಿ ಸದಸ್ಯರಾದ ರಮೇಶ್ ಕುಮಾರ್ ಅರ್ಜಿ ಸಮಿತಿಗೆ ಈ ಬಗ್ಗೆ ಮಾಹಿತಿ ಬರದಿದ್ದರೆ ಹೇಗೆ ಎಂದು ಲೋಕೋಪಯೋಗಿ ಇಲಾಖೆ ಎಂಜಿನಿಯರ್‍ನ್ನು ಪ್ರಶ್ನಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ರುದ್ರಪ್ಪ ಲಮಾಣಿ ಅವರು ಲೋಪವನ್ನು ಸರಿಪಡಿಸಲಾಗಿದೆ. ಕೊಡಗು ಜಿಲ್ಲೆಯಲ್ಲಿ ನಿರಂತರವಾಗಿ ಮಳೆ ಆಗುವುದರಿಂದ ರಸ್ತೆ ಹಾಗೂ ತಡೆಗೋಡೆ ಸುರಕ್ಷತೆಗೆ ಆದಷ್ಟು ಒತ್ತು ನೀಡಬೇಕಿದೆ. ಕಾಮಗಾರಿಯನ್ನು ತ್ವರಿತವಾಗಿ ಪೂರ್ಣಗೊಳಿಸುವಂತೆ ನಿರ್ದೇಶನ ನೀಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಸಮಿತಿ ಸದಸ್ಯರಾದ ಎ.ಮಂಜು ಅವರು ಕಾಮಗಾರಿ ಆರಂಭದಲ್ಲಿ ಮಲೆನಾಡು ಭಾಗಕ್ಕೆ ಯಾವ ರೀತಿಯ ತಡೆಗೋಡೆ ನಿರ್ಮಾಣ ಮಾಡಬೇಕು ಎಂಬುದು ಎಂಜಿನಿಯರ್‍ಗಳು ಯೋಚಿಸಬೇಕು. ಅದನ್ನು ಬಿಟ್ಟು ಸಣ್ಣ ಎಂಜಿನಿಯರ್‍ಗಳನ್ನು ಬಲಿಪಶುಮಾಡಲಾಗಿದೆ ಎಂದು ಅತೃಪ್ತಿ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಸದಸ್ಯರಾದ ಸುರೇಶ್ ಕುಮಾರ್ ಅವರು ಈ ಕಾಮಗಾರಿ ಒಂದು ರೀತಿ ಲೋಕೋಪಯೋಗಿ ಇಲಾಖೆಯವರಿಗೆ ಪಾಠವಾಗಿದೆ. ಆ ನಿಟ್ಟಿನಲ್ಲಿ ಮುಂದಿನ ದಿನಗಳಲ್ಲಿ ಇನ್ನಷ್ಟು ಪ್ರಬುದ್ಧರಾಗಬೇಕು ಎಂದು ಸಲಹೆ ಮಾಡಿದರು.

ಮತ್ತೊಬ್ಬ ಸದಸ್ಯರಾದ ಸಿ.ಎನ್.ಬಾಲಕೃಷ್ಣ ಅವರು ಮಾತನಾಡಿ ಇಂತಹ ಕೆಲಸಗಳು ಮತ್ತೆ ಮತ್ತೆ ಮರುಕಳಿಸಬಾರದು. ಉತ್ತಮ ಗುಣಮಟ್ಟದ ಕಾಮಗಾರಿ ಕೈಗೊಳ್ಳಬೇಕು. ಸಾರ್ವಜನಿಕ ಹಣವನ್ನು ಪೋಲು ಮಾಡಬಾರದು ಎಂದು ಸೂಚಿಸಿದರು.

ಲೋಕೋಪಯೋಗಿ ಇಲಾಖೆಯ ಕಾರ್ಯದರ್ಶಿ ಸತ್ಯನಾರಾಯಣ ಕಾಮಗಾರಿ ಸಂಬಂಧ ಸುದೀರ್ಘವಾಗಿ ಮಾಹಿತಿ ನೀಡಿದರು. ತಾಂತ್ರಿಕ ಸಲಹಾ ಸಮಿತಿ ಅಧ್ಯಕ್ಷರಾದ ಜಯ್‍ಪ್ರಸಾದ್, ಲೋಕೋಪಯೋಗಿ ಇಲಾಖೆಯ ಕಾರ್ಯಪಾಲಕ ಎಂಜಿನಿಯರ್ ಇಬ್ರಾಹಿಂ, ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಗಿರೀಶ್, ಇತರರು ಇದ್ದರು.

Share this article

ಟಾಪ್ ನ್ಯೂಸ್

More News