Breaking News :

ರೈತರ ಸರ್ವತೋಮುಖ ಅಭಿವೃದ್ಧಿಗೆ ಜಿಲ್ಲಾ ಸಹಕಾರ ಯುನಿಯನ್ ಪ್ರಾಧಾನ್ಯತೆ ನೀಡಿದೆ : ಮನು ಮುತ್ತಪ್ಪ


ಜನವಾಹಿನಿ NEWS ಮಡಿಕೇರಿ : ರೈತರ ಸರ್ವತೋಮುಖ ಅಭಿವೃದ್ಧಿಗಾಗಿ ಕೊಡಗು ಜಿಲ್ಲಾ ಸಹಕಾರ ಯೂನಿಯನ್ ಒತ್ತು ನೀಡಿದೆ ಎಂದು ಕೊಡಗು ಜಿಲ್ಲಾ ಸಹಕಾರ ಯೂನಿಯನ್ ಅಧ್ಯಕ್ಷ ಎ.ಕೆ.ಮನು ಮುತ್ತಪ್ಪ ತಿಳಿಸಿದರು.

ನಗರದ ಯೂನಿಯನ್ ಸಭಾಂಗಣದಲ್ಲಿ ಇತ್ತೀಚೆಗೆ ನಡೆದ ಕೊಡಗು ಜಿಲ್ಲಾ ಸಹಕಾರ ಯೂನಿಯನ್‌ನ ೨೦೨೪-೨೫ನೇ ಸಾಲಿನ ಹಾಗೂ ೫೮ನೇ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಯೂನಿಯನ್‌ನ ಮುಖ್ಯ ಉದ್ದೇಶ, ಸಹಕಾರ ಶಿಕ್ಷಣ, ತರಬೇತಿ, ಪ್ರಚಾರವಾಗಿದೆ. ಈ ಕಾರ್ಯಕ್ರಮಗಳನ್ನು ಮಹಾಮಂಡಳದ ಮಾರ್ಗದರ್ಶನದ ಮೂಲಕ ಜಿಲ್ಲೆಯ ವಿವಿಧ ವಲಯಗಳಿಗೆ ಆಯೋಜಿಸುವುದಾಗಿದೆ. ವಿಶೇಷವಾಗಿ ಅಬಲವರ್ಗದ ಸಹಕಾರ ಸಂಘ ಅಂದರೆ ಪರಿಶಿಷ್ಟ ಜಾತಿ/ವರ್ಗ, ಮಹಿಳೆಯರಿಗೆ ತಪ್ಪದೆ ಶಿಕ್ಷಣ ಕಾರ್ಯಕ್ರಮವನ್ನು ಆಯೋಜಿಸುತ್ತಿದೆ. ಸಹಕಾರ ಕ್ಷೇತ್ರಕ್ಕೆ ಆಯ್ಕೆಯಾದ ನಿರ್ದೇಶಕರು ಶಿಕ್ಷಣ, ತರಬೇತಿ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಸಂಬಂಧಿಸಿದ ಜ್ಞಾನವನ್ನು ಪಡೆಯುವುದಷ್ಟೇ ಅಲ್ಲದೆ ಅರಿತ ವಿಚಾರವನ್ನು ಕಾರ್ಯಗತಗೊಳಿಸಬೇಕು. ಹಾಗಿದ್ದಲ್ಲಿ ಸಂಸ್ಥೆಯು ಉತ್ತಮ ಹಿಡಿತದೊಂದಿಗೆ ಅಭಿವೃದ್ಧಿ ಪಥದಲ್ಲಿ ಸಾಗುತ್ತದೆ ಎಂದು ಸಲಹೆ ನೀಡಿದರು.
ಸಹಕಾರ ಕ್ಷೇತ್ರವನ್ನು ಗ್ರಾಮೀಣ ಮಟ್ಟದಲ್ಲಿ ಕೊಂಡೊಯ್ಯಲು ಪ್ರತಿವರ್ಷ ಜಲ್ಲೆಯ ವಿವಿಧ ಭಾಗಗಳಲ್ಲಿ ಸಹಕಾರ ಸಪ್ತಾಹವನ್ನು ಆಚರಿಸಲಾಗುತ್ತದೆ. ಪ್ರಾಮಾಣಿಕ, ನಿಸ್ವಾರ್ಥ ಸೇವೆ ಸಲ್ಲಿಸಿದ ಸಹಕಾರಿಗಳನ್ನು ಗುರುತಿಸಿ ಗೌರವಿಸುವುದು, ಹಿರಿಯ ಸಹಕಾರಿಗಳಿಗೆ ಸಲ್ಲಿಸುವ ಅತಿ ದೊಡ್ಡ ಪುರಸ್ಕಾರವಾಗಿದೆ. ಆದುದರಿಂದ ಸಹಕಾರ ಸಪ್ತಾಹವನ್ನು ಹಬ್ಬದಂತೆ ವಿಜೃಂಭಣೆಯಿಂದ ಆಚರಿಸಲು ಮುಂದೆ ಬರಬೇಕು ಎಂದರು.
ಭಾರತ ವಿಶ್ವದ ೩ನೇ ಆರ್ಥಿಕತೆ ಹೊಂದಬೇಕಾದರೆ ಸಹಕಾರ ಕ್ಷೇತ್ರದ ಮೂಲಕವೇ ಹೆಚ್ಚಿನ ಸಾಧ್ಯತೆ ಇರುವುದರಿಂದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳನ್ನು ಸಾಮಾನ್ಯ ಸೇವಾ ಕೇಂದ್ರಗಳನ್ನಾಗಿ ಮಾಡಿ ಗ್ರಾಮೀಣ ಜನರಿಗೆ ತಾಂತ್ರಿಕ ಯೋಜನೆಯನ್ನು ಮನೆ ಬಾಗಿಲಿಗೆ ತಲುಪಿಸುವ ವ್ಯವಸ್ಥೆಯನ್ನು ಮಾಡಲಾಗಿದೆ. ಅಂತೆಯೇ ರೈತರ ಸರ್ವತೋಮುಖ ಅಭಿವೃದ್ಧಿಗಾಗಿ ಒತ್ತು ನೀಡಲಾಗಿದೆ. ನಾವೆಲ್ಲರೂ ಈ ನಿಟ್ಟಿನಲ್ಲಿ ಕಾರ್ಯೋನ್ಮುಖರಾಗಬೇಕು. ಪ್ರತಿ ವರ್ಷ ಕೊಡಗು ಜಿಲ್ಲೆಯಿಂದ ಶೇ.೧೦೦ ರಷ್ಟು ಸಹಕಾರ ಶಿಕ್ಷಣ ನಿಧಿ ಸಂಗ್ರಹಣೆಗಾಗಿ ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳದಿಂದ ಸನ್ಮಾನ ಲಭಿಸುತ್ತಿದ್ದು, ಇದು ಜಿಲ್ಲೆಯ ಸಹಕಾರ ಸಂಘಗಳಿಗೆ ಸಂದಿದ ಗೌರವವಾಗಿದೆ ಎಂದರು.
ಸಹಕಾರ ಲೆಕ್ಕಪರಿಶೋಧನಾ ಇಲಾಖೆಯಲ್ಲಿ ಸಹಕಾರ ದವಸ ಭಂಡಾರಗಳ ಲೆಕ್ಕಪರಿಶೋಧನಾ ಕಾರ್ಯವನ್ನು ತ್ವರಿತವಾಗಿ ಹಾಗೂ ನಿಶುಲ್ಕವಾಗಿ ಜರುಗಿಸುವ ಬಗ್ಗೆ ಚರ್ಚಿಸಿ ಲೆಕ್ಕಪರಿಶೋಧನಾ ಇಲಾಖೆಯಲ್ಲಿ ಚರ್ಚಿಸುವಂತೆ ತೀರ್ಮಾನ ಕೈಗೊಳ್ಳಲಾಯಿತು.

ಯೂನಿಯನ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಯೋಗೇಂದ್ರ ನಾಯಕ್, ಉಪಾಧ್ಯಕ್ಷ ಪಿ.ಸಿ.ಮನು ರಾಮಚಂದ್ರ, ನಿರ್ದೇಶಕರಾದ ಕೆ.ಎಂ.ತಮ್ಮಯ್ಯ, ಬಿ.ಎ.ರಮೇಶ್ ಚಂಗಪ್ಪ, ಎನ್.ಎ.ರವಿ ಬಸಪ್ಪ, ಸಿ.ಎಸ್.ಕೃಷ್ಣ ಗಣಪತಿ, ಎನ್.ಎ.ಉಮೇಶ್ ಉತ್ತಪ್ಪ, ಪಿ.ಸಿ.ಅಚ್ಚಯ್ಯ, ಪಿ.ಬಿ.ಯತೀಶ್, ಎ.ಎಸ್.ಶ್ಯಾಮ್‌ಚಂದ್ರ, ಎನ್.ಎ.ಮಾದಯ್ಯ, ಎಚ್.ಎಂ.ರಮೇಶ್, ಯೂನಿಯನ್ ವ್ಯವಸ್ಥಾಪಕಿ ಆರ್.ಮಂಜುಳ ಸೇರಿದಂತೆ ಜಿಲ್ಲೆಯ ವಿವಿಧೆಡೆಯಿಂದ ಯೂನಿಯನ್‌ನ ಸದಸ್ಯರು ಸಭೆಯಲ್ಲಿ ಪಾಲ್ಗೊಂಡಿದ್ದರು.

Share this article

ಟಾಪ್ ನ್ಯೂಸ್

More News