ಪೆರಂಬಾಡಿ : ಮಹಿಳಾ ಕಾಲೇಜಿನ ನೂತನ ಗ್ರಂಥಾಲಯ ಲೋಕಾರ್ಪಣೆ
ವಿರಾಜಪೇಟೆ : ಪೆರಂಬಾಡಿಯಲ್ಲಿರುವ ಎಸ್.ಇ.ಎ ಮಹಿಳಾ ಕಾಲೇಜಿನ ನೂತನ ಗ್ರಂಥಾಲಯವನ್ನು ಇಂದು ಮಾನ್ಯ ಶಾಸಕರು ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾದ ಅಜ್ಜಿಕುಟ್ಟಿರ.ಪೊನ್ನಣ್ಣ ರವರು ಲೋಕಾರ್ಪಣೆ ಮಾಡಿದರು.
ಬಳಿಕ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದ ಮಾನ್ಯ ಶಾಸಕರು, ಮನುಷ್ಯನ ಜೀವನದಲ್ಲಿ ವಿದ್ಯಾಭ್ಯಾಸ ಪ್ರಮುಖ ಪಾತ್ರವನ್ನು ವಹಿಸುತ್ತದೆ. ಶಾಲಾ ಕಾಲೇಜುಗಳಲ್ಲಿ ಸಿಗುವ ಜ್ಞಾನದೊಂದಿಗೆ ಇಂತಹ ಗ್ರಂಥಾಲಯಗಳಲ್ಲಿ ಲಭ್ಯವಿರುವ ಪ್ರಪಂಚದ ಎಲ್ಲಾ ಇತಿಹಾಸ ಹಾಗೂ ಪ್ರಸಕ್ತ ವಿದ್ಯಮಾನಗಳ ಪುಸ್ತಕಗಳನ್ನು ಓದುವ ಅಭಿರುಚಿಯನ್ನು ವಿದ್ಯಾರ್ಥಿಗಳು ಬೆಳೆಸಿಕೊಳ್ಳಬೇಕು ಎಂದು ಕರೆ ನೀಡಿದರು. ಜೀವನದಲ್ಲಿ ಸಾಧಿಸಲು ಅಥವಾ ತಮ್ಮ ಗುರಿಯನ್ನು ತಲುಪಲು ಅಪಾರ ಜ್ಞಾನದ ಅವಶ್ಯಕತೆ ಇದ್ದು ಇಂತಹ ಜ್ಞಾನವನ್ನು ಪಡೆದುಕೊಳ್ಳುವಲ್ಲಿ ಗ್ರಂಥಾಲಯಗಳು ಮಹತ್ವದ ಪಾತ್ರವನ್ನು ವಹಿಸುತ್ತದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಜಿಲ್ಲಾ ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷರಾದ ಹನೀಫ್, ತಾಲೂಕು ಘಟಕದ ಅಧ್ಯಕ್ಷರಾದ ರಫೀಕ್,ಪುರಸಭೆ ಸದಸ್ಯರಾದ ಮತೀನ್, ಜಾಲಿಲ್,ಬಶೀರ್ ಹಾಜಿ, ಇಸ್ಮಾಯಿಲ್ ಮುಸ್ಲಿಯಾರ್, ಅರ್ಜಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಫಾತಿಮಾ, ಹಾಗೂ ಪಕ್ಷದ ಪ್ರಮುಖರು ಉಪಸ್ಥಿತರಿದ್ದರು.








