ವೃಂದ ನೇಮಕಾತಿ ಜಾರಿಗೆ ಒತ್ತಾಯಿಸಿ ಮಡಿಕೇರಿಯಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕರ ಪ್ರತಿಭಟನೆ
ಮಡಿಕೇರಿ: ಪ್ರಾಥಮಿಕ ಶಾಲಾ ಸೇವಾನಿರತ ಪದವೀಧರ ಶಿಕ್ಷಕರಿಗೆ ಸಂಬಂಧಿಸಿದ ವೃಂದ ಮತ್ತು ನೇಮಕಾತಿ ನಿಯಮಗಳ ತಿದ್ದುಪಡಿ ಕಡತಕ್ಕೆ ತಕ್ಷಣ ಅನುಮೋದನೆ ನೀಡುವಂತೆ ಆಗ್ರಹಿಸಿ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಕೊಡಗು ಜಿಲ್ಲಾ ಘಟಕದಿಂದ ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಮಂಗಳವಾರ ಪ್ರತಿಭಟನೆ ನಡೆಸಲಾಯಿತು.
ಈ ಸಂದರ್ಭ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಎಚ್.ಎಸ್.ಚೇತನ್ ಮಾತನಾಡಿ, ೨೦೧೭ರಲ್ಲಿ ವೃಂದ ಮತ್ತು ನೇಮಕಾತಿ ನಿಯಮ ಜಾರಿಗೆ ತರಲಾಗುತ್ತದೆ. ಪಿಎಸ್‌ಡಿ ಮತ್ತು ಜಿಪಿಟಿ ಎಂದು ಪ್ರಾಥಮಿಕ ಶಾಲಾ ಶಿಕ್ಷಕರನ್ನು ಒಡೆದು ಹಾಕುತ್ತಾರೆ. ೧ನೇ ತರಗತಿಯಿಂದ ೮ನೇ ತರಗತಿವರೆಗೆ ನೇಮಕಾತಿ ಮಾಡಿ ನಂತರ ಪಿಎಸ್‌ಡಿ ನಿಯಮದಡಿ ೧ ರಿಂದ ೫ ತರಗತಿಗೆ ಪಾಠ ಮಾಡಿ ಎಂದು ಹಿಂಬಡ್ತಿ ನೀಡುತ್ತಾರೆ. ನಮ್ಮಲ್ಲಿ ಹೆಚ್ಚಿನ ಡಿಗ್ರಿ ಪಡೆದವರು ಕೂಡ ಇದ್ದಾರೆ. ಅಧಿಕಾರಿಗಳಿಗೆ ಕೆಇಎಸ್ ಎಂಬ ಅಸ್ತ್ರವಿದೆ. ನಮ್ಮಲ್ಲಿ ಎಂ.ಎ., ಬಿಎಡ್ ಪಡೆದ ಶಿಕ್ಷಕರು ಇದ್ದಾರೆ. ಹಲವಾರು ತರಬೇತಿ ಪಡೆದವರು ಕೂಡ ಇದ್ದಾರೆ. ಇದನ್ನು ಶಿಕ್ಷಕರು ವಿರೋಧಿಸಿ ಬೃಹತ್ ಹೋರಾಟ ಕೈಗೊಂಡ ಪರಿಣಾಮ ಸಮಿತಿ ರಚಿಸಿ ಒಂದು ತಿಂಗಳಿನಲ್ಲಿ ವರದಿ ಆಧಾರದಲ್ಲಿ ಕ್ರಮಕೈಗೊಳ್ಳಲಾಗುವುದು ಎಂದು ಸರ್ಕಾರ ಹೇಳಿತ್ತು. ಆದರೆ, ಇದುವರೆಗೆ ಯಾವುದೇ ಪರಿಹಾರ ಕ್ರಮಗಳು ಆಗಿಲ್ಲ. ಸಂವಿಧಾನದ ಪ್ರಕಾರ ನಿಯಮ ಜಾರಿಯಾದ ದಿನದಿಂದ ಅದನ್ನು ಅನುಷ್ಠಾನ ಮಾಡಬೇಕು. ಆದರೆ, ಶಿಕ್ಷಕರ ವಿಚಾರದಲ್ಲಿ ಪೂರ್ವ ಅವಧಿ ಅನ್ವಯಿಸಿ ೨೦೧೭ಕ್ಕೂ ಮುನ್ನ ನೇಮಕಗೊಂಡ ಶಿಕ್ಷಕರನ್ನು ಹಿಂಬಡ್ತಿಗೆ ದೂಡಿರುವುದು ಖಂಡನೀಯ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಆ.೨೫ರೊಳಗೆ ಶಿಕ್ಷಕರ ಬೇಡಿಕೆ ಈಡೇರದಿದ್ದಲ್ಲಿ ಶಾಲೆಗಳನ್ನು ಬಂದ್ ಮಾಡಿ ಬೆಂಗಳೂರಿನಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದರು.
ಈ ಸಂದರ್ಭದಲ್ಲಿ ಪ್ರತಿಭಟನಾ ನಿರತರು ವಿವಿಧ ಬೇಡಿಕೆಗಳನ್ನು ಈಡೇರಿಸಿ ಜಿಲ್ಲಾಧಿಕಾರಿಗಳ ಮೂಲಕ ಸರ್ಕಾರಕ್ಕೆ ಮನವಿಸಲ್ಲಿಸಿದರು.
ಪ್ರತಿಭಟನೆಯಲ್ಲಿ ಸಂಘದ ಜಿಲ್ಲಾಧ್ಯಕ್ಷ ಕೆ.ಎಸ್.ಪ್ರಸನ್ನ, ರಾಜ್ಯ ಉಪಾಧ್ಯಕ್ಷ ಎಚ್.ಎನ್.ಮಂಜುನಾಥ್, ಸೋಮವಾರಪೇಟೆ ತಾಲೂಕು ಅಧ್ಯಕ್ಷ ಟಿ.ಕೆ.ಬಸವರಾಜು, ಮಡಿಕೇರಿ ತಾಲೂಕು ಅಧ್ಯಕ್ಷ ಮೋಹನ್ ಪೆರಾಜೆ, ವೀರಾಜಪೇಟೆ ತಾಲೂಕು ಅಧ್ಯಕ್ಷ ಸುರೇಂದ್ರ, ಪ್ರಧಾನ ಕಾರ್ಯದರ್ಶಿಗಳಾದ ಆಕಾಶ್, ಕವಿತಾ, ಬಿ.ವಿ. ಅಶ್ವತ್ಥ್ ಸೇರಿದಂತೆ ಇನ್ನಿತರರು ಹಾಜರಿದ್ದರು.

 
								 
															 
															






