ಜನವಾಹಿನಿ NEWS ಶನಿವಾರಸಂತೆ : ಶನಿವಾರಸಂತೆ ಪ್ರೆಸ್ ಕ್ಲಬ್ ಭಾಗಿತ್ವದಲ್ಲಿ ಶನಿವಾರಸಂತೆ ಮತ್ತು ಕೊಡ್ಲಿಪೇಟೆ ಹೋಬಳಿಗೆ ಸೇರಿದ ವಿವಿಧ ಗ್ರಾ.ಪಂ.ಗಳಿಗೆ ಸಂಬಂದಿಸಿದ ಕುಂದು ಕೊರತೆ, ಜಟಿಲವಾದ ಸಮಸ್ಯೆಗಳ ಕುರಿತು ಗ್ರಾ.ಪಂ.ಅಧ್ಯಕ್ಷರು, ಉಪಾಧ್ಯಕ್ಷರೊಂದಿಗೆ ಮಾಧ್ಯಮ ಸಂವಾದ ಕಾರ್ಯಕ್ರಮವನ್ನು ಸೋಮವಾರ ಪ್ರೆಸ್ ಕ್ಲಬ್ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಯಿತು. ಶನಿವಾರಸಂತೆ, ದುಂಡಳ್ಳಿ, ಹಂಡ್ಲಿ, ಕೊಡ್ಲಿಪೇಟೆ ಬೆಸೂರು ಮತ್ತು ಆಲೂರುಸಿದ್ದಾಪುರ ಗ್ರಾ.ಪಂ.ಗಳ ಅಧ್ಯಕ್ಷರು, ಉಪಾಧ್ಯಕ್ಷರು ಪಾಲ್ಗೊಂಡಿದ್ದ ಮಾಧ್ಯಮ ಸಂವಾದ ಕಾರ್ಯಕ್ರಮದಲ್ಲಿ ಗ್ರಾ.ಪಂ.ಅಧ್ಯಕ್ಷರು ತಮ್ಮ ಗ್ರಾ.ಪಂ.ಯ ಅಭಿವೃದ್ದಿಯ ಬಗ್ಗೆ ಮತ್ತು ಸಮಸ್ಯೆಗಳ ಬಗ್ಗೆಯೂ ಹೇಳಿಕೊಂಡರೆ ಪತ್ರಕರ್ತರು ಪ್ರತಿಯೊಂದು ಗ್ರಾ.ಪಂ.ಗಳಲ್ಲಿ ಕಂಡುಬಂದ ಕುಂದುಕೊರತೆ, ಸಮಸ್ಯೆಗಳ ಸರಮಾಲೆಯನ್ನು ಮಾಧ್ಯಮ ಸಂವಾದದಲ್ಲಿ ತೆರೆದಿಟ್ಟರು.
ಕೊಡಗು-ಹಾಸನ ಗಡಿಭಾಗದಲ್ಲಿರುವ ಬೆಸೂರು ಗ್ರಾ.ಪಂ.ಉಪಾಧ್ಯಕ್ಷ ಹರೀಶ್ ಹಕ್ಕುಪತ್ರ ಸಮಸ್ಯೆ ಬಗ್ಗೆ ಮಾತನಾಡಿ ದೊಡ್ಡ ಭಂಡಾರ ಗ್ರಾಮದಲ್ಲಿ ಸುಮಾರು ೪೦ ಕುಟುಂಬ ೬೦ ವರ್ಷಗಳಿಂದ ವಾಸ ಮಾಡುತ್ತಿದ್ದಾರೆ ಆದರೆ ಅರಣ್ಯ ಇಲಾಖೆ ಅವರಿಗೆ ಹಕ್ಕುಪತ್ರ ವಿತರಿಸಲು ಅಕ್ಷೇಪ ವ್ಯಕ್ತ ಪಡಿಸುತ್ತಿರುವ ಬಗ್ಗೆ, ಗ್ರಾ.ಪಂ.ವ್ಯಾಪ್ತಿಯಲ್ಲಿ ೧೯೭೩ ರಲ್ಲಿ ಹೇಮಾವತಿ ಮುಳುಗಡೆಯಾದ ಸ.ನಂ೪೭\೩೩ ರಲ್ಲಿ ನೂರು ಮನೆಗಳಿಗೆ ಹಕ್ಕುಪತ್ರ ನೀಡಿಲ್ಲ ಜಿಲ್ಲಾಧಿಕಾರಿಗಳು ಈ ಕುರಿತು ಗಮನ ಹರಿಸುವಂತೆ ಒತ್ತಾಯಿಸಿದರು ಬೆಸೂರು ಗ್ರಾ.ಪಂ.ವ್ಯಾಪ್ತಿಯಲ್ಲಿ ಕಾಡಾನೆ ಕಾಡುಪ್ರಾಣಿಗಳ ಸಮಸ್ಯೆ. ಗ್ರಾಮೀಣ ರಸ್ತೆಗಳ ದುಸ್ಥಿತಿ, ಗ್ರಾ.ಪಂ.ಯಲ್ಲಿನ ಸಿಬ್ಬಂದಿಗಳ ಕೊರತೆ ಪತ್ರಕರ್ತರು ಪ್ರಶ್ನಿಸಿದರು ಗ್ರಾ.ಪಂ.ಅಧ್ಯಕ್ಷೆ ಕಮಲಮ್ಮ ಸಮಜಾಯಿಸಿಕೆ ನೀಡಿದರು.
ಕೊಡ್ಲಿಪೇಟೆ ಗ್ರಾ.ಪಂ.ಮಾಜಿ ಅಧ್ಯಕ್ಷ ಮತ್ತು ಹಾಲಿ ಹಿರಿಯ ಸದಸ್ಯ ಚಂದ್ರಶೇಖರ್ ಗ್ರಾ.ಪಂ.ಯ ಅಭಿವೃದ್ದಿ ಕಾರ್ಯದ ಬಗ್ಗೆ ಮಾತನಾಡಿದರು ಸಂತೆ ಮಾರುಕಟ್ಟೆ ಅಭಿವೃದ್ದಿ, ಹಂಪಾಪುರ ರಸ್ತೆ ಅಭಿವೃದ್ದಿ ಕಾರ್ಯಕ್ಕೆ ಶಾಸಕರು ಹೆಚ್ಚಿನ ಅನುದಾನ ನೀಡಬೇಕೆಂದು ಒತ್ತಾಯಿಸಿದರು. ಕೊಡ್ಲಿಪೇಟೆಯಲ್ಲಿ ಟ್ರಾಪಿಕ್ ಸಮಸ್ಯೆ ಆಗುತ್ತಿರುವುದು, ಮಾರುಕಟ್ಟೆ ರಸ್ತೆ ದುಸ್ಥಿತಿ, ೬೬ಕೆ.ವಿ.ವಿದ್ಯುತ್ ಘಟಕದ ಪ್ರಗತಿ ಕಾರ್ಯ ಕುಂಟಿತಗೊಂಡಿರುವುದು, ಬೇಸಿಗೆಯಲ್ಲಿ ಕುಡಿಯುವ ನೀರಿನ ಸಮಸ್ಯೆ, ಪೊಲೀಸ್ ಸಿಬ್ಬಂದಿಗೆ ವಸತಿ ಗೃಹ ಇಲ್ಲಿದಿರುವುದು, ಸಿಬ್ಬಂದಿಗಳ ಕೊರತೆ ಮುಂತಾದ ಸಮಸ್ಯೆಗಳ ಬಗ್ಗೆ ಪತ್ರಕರ್ತರು ಪ್ರಶ್ನಿಸಿದರು.
ಹಂಡ್ಲಿ ಗ್ರಾ.ಪಂ.ಅಧ್ಯಕ್ಷೆ ಸುಧಾ ಈರೇಶ್ ಮಾತನಾಡಿ ಗ್ರಾ.ಪಂ.ಅಭಿವೃದ್ದಿ ಪಡಿಸಲು ಶ್ರಮಿಸಲಾಗುತ್ತಿದೆ ಆದರೆ ಖಾಯಂ ಪಿಡಿಒ ಸೇರಿದಂತೆ ಸಿಬ್ಬಂದಿಗಳ ಕೊರತೆಯಿಂದ ಅಭಿವೃದ್ದಿ ಕಾರ್ಯಕ್ಕೆ ಸಮಸ್ಯೆಯಾಗುತ್ತಿದೆ ಎಂದರು. ಹಂಡ್ಲಿ ಗ್ರಾ.ಪಂ.ವ್ಯಾಪ್ತಿಗೆ ಸೇರಿದ ಗುಡುಗಳಲ್ಲಿ ಜಂಕ್ಸನ್ ಬಳಿ ಕೆಲವೊಮ್ಮೆ ಕಸವನ್ನು ಹಾಕುತ್ತಿರುವುದು, ಗುಡುಗಳಲೆ ಗ್ರಾಮ ಪಟ್ಟಣದಂತೆ ಬೆಳೆಯುತ್ತಿದೆ ಆದರೆ ಅಲ್ಲಿ ಸಾರ್ವಜನಿಕರಿಗೆ ಶೌಚಾಲಯ ಇಲ್ಲದಿರುವುದು, ಬೀದಿ ನಾಯಿಗಳ ಸಮಸ್ಯೆ, ಜಾತ್ರಾ ಮೈದಾನದಲ್ಲಿ ವಸ್ತು ಪ್ರದರ್ಶನ ಕಟ್ಟಡ ಶಿಥಿಲಗೊಂಡಿದ್ದರೂ ದುರಸ್ಥಿ ಪಡಿಸದಿರುವುದು, ಜೆಜೆಎಂ ಯೋಜನೆ ವತಿಯಿಂದ ನಡೆದ ಕಾಮಗಾರಿ ಸಂದರ್ಭ ರಸ್ತೆ ಹಾಳಾಗಿದ್ದರೂ ಈ ಕುರಿತು ಗ್ರಾ.ಪಂ.ಯವರು ಕ್ರಮಕೈಗೊಳ್ಳದಿರುವ ಬಗ್ಗೆ ಪತ್ರಕರ್ತರು ಪ್ರಶ್ನಿಸಿದರು.
ಶನಿವಾರಸಂತೆ ಗ್ರಾ.ಪಂ.ಉಪಾಧ್ಯಕ್ಷ ಸರ್ದಾರ್ ಆಹಮ್ಮದ್ ಗ್ರಾ.ಪಂ.ಅಭಿವೃದ್ದಿ ಬಗ್ಗೆ ಮಾತನಾಡಿದರು ಆದರೆ ಹೈಟೇಕ್ ಸಂತೆಮಾರುಕಟ್ಟೆ ಅಭಿವೃದ್ದಿ ಕಾರ್ಯ ಆಗದಿರುವ ಬಗ್ಗೆ ಮತ್ತು ಅಭಿವೃದ್ದಿ ವಿಚಾರದಲ್ಲಿ ಅಧಿಕಾರಿಗಳಿಂದ ನಿರ್ಲಕ್ಷ್ಯತನದ ಬಗ್ಗೆ ಒಪ್ಪಿಕೊಂಡರು. ಪಟ್ಟಣದ ಬೈಪಾಸ್ ರಸ್ತೆ ದುಸ್ಥಿತಿ, ಟ್ರಾಪಿಕ್ ಸಮಸ್ಯೆ ಬಗೆಹರಿಸದಿರುವುದು, ಕೆಲವು ಕಡೆಗಳಲ್ಲಿ ಶೌಚಾಲಯದ ಅಗತ್ಯ ಇರುವುದು, ಗ್ರಂಥಾಲಯಕ್ಕೆ ಮೇಲ್ವಿಚಾರಕನ್ನು ನೇಮಿಸದಿರುವುದು ಮುಂತಾದ ಸಮಸ್ಯೆಗಳ ಬಗ್ಗೆ ಪತ್ರಕರ್ತರು ಪ್ರಶ್ನಿಸಿದರು.
ದುಂಡಳ್ಳಿ ಗ್ರಾ.ಪಂ.ಅಧ್ಯಕ್ಷೆ ಭವಾನಿ ಗುರು ನಮ್ಮ ಗ್ರಾ.ಪಂ.ಯನ್ನು ಸಾಕಷ್ಟು ಅಭಿವೃದ್ದಿ ಪಡಿಸಿರುವುದಾಗಿ ಹೇಳಿದರು. ದುಂಡಳ್ಳಿ ಗ್ರಾ.ಪಂ.ವ್ಯಾಪ್ತಿಯಲ್ಲಿ ೫ ಗ್ರಾಮಗಳಲ್ಲಿ ಹಕ್ಕುಪತ್ರ ಸಿಗದಿರುವುದು, ಹೆಮ್ಮನೆ ರಸ್ತೆ ದುಸ್ಥಿತಿ, ದುಂಡಳ್ಳಿ ಗ್ರಾ.ಪಂ.ಬಳಿ ಅಲ್ಲಲ್ಲಿ ತ್ಯಾಜವಸ್ತುಗಳನ್ನು ಹಾಕುವುದು, ದುಂಡಳ್ಳಿ ಗ್ರಾ.ಪಂ.ವ್ಯಾಪ್ತಿಯಲ್ಲಿ ೫೦೦ ಏಕರೆ ಸಿ&ಡಿ ಸಮಸ್ಯೆ ಇರುವ ಬಗ್ಗೆ ಪತ್ರಕರ್ತರು ಮಾಧ್ಯಮ ಸಂವಾದದಲ್ಲಿ ಪ್ರಸ್ತಾಪಿಸಿದರು.
ಆಲೂರುಸಿದ್ದಾಪುರ ಗ್ರಾ.ಪಂ.ಉಪಾಧ್ಯಕ್ಷ ಚಂದ್ರಮೋಹನ್ ನಮ್ಮ ಗ್ರಾ.ಪಂ.ವ್ಯಾಪ್ತಿಯ ಸರಕಾರಿ ಶಾಲೆಯಲ್ಲಿ ಗ್ರಾ.ಪಂ.ಯಿಂದ ಉದ್ಯಾನವನ ನಿರ್ಮಿಸಲಾಗಿದೆ ಆದರೆ ಶಾಲೆಯಲ್ಲಿ ಮಕ್ಕಳ ಹಾಜರಾತಿ ಪ್ರಮಾಣ ಕುಸಿಯುತ್ತಿರುವ ಬಗ್ಗೆ ಪ್ರಸ್ತಾಪಿಸಿದರು. ಗ್ರಾಮೀಣ ರಸ್ತೆಗಳು ಹಾಳಾಗುತ್ತಿರುವುದು, ಆಲೂರುಸಿದ್ದಾಪುರದಲ್ಲಿ ಚರಂಡಿ ಇದ್ದರೂ ಸರಿಯಾಗಿ ನಿರ್ವಹಣೆ ಮಾಡದಿರುವುದ್ದರಿಂದ ಮಾಲಿನ್ಯ ಉಂಟಾಗುತ್ತಿರುವುದು, ಸಾರಿಗೆ ಬಸ್ಸು ನಿಲ್ದಾಣ ಪ್ರಸ್ತಾವನೆ ನೆನೆಗುದಿಗೆ ಬಿದ್ದಿರುವುದು ಮುಂತಾದ ಸಮಸ್ಯೆಗಳ ಬಗ್ಗೆ ಪತ್ರಕರ್ತರು ಗಮನ ಸೆಳೆದರು
ಮಾಧ್ಯಮ ಸಂವಾದ ಕಾರ್ಯಕ್ರಮದಲ್ಲಿ ಪ್ರೆಸ್ ಕ್ಲಬ್ ಅಧ್ಯಕ್ಷ ಹರೀಶ್ ಕುಮಾರ್ ಅಧ್ಯಕ್ಷತೆವಹಿಸಿದರು ವರ್ತರ ಸಂಘಧ ಅಧ್ಯಕ್ಷ ಸರ್ದಾರ್ ಆಹಮ್ಮದ್ ಕಾರ್ಯಕ್ರಮ ಉದ್ಘಾಟಿಸಿದರು.








