ಜನವಾಹಿನಿ News ಸಿದ್ದಾಪುರ : ಸಿದ್ದಾಪುರ ಗ್ರಾಮ ಪಂಚಾಯತಿಯಲ್ಲಿ ಬೃಹತ್ ಪ್ರಮಾಣದ ಭ್ರಷ್ಟಾಚಾರ ನಡೆದಿರುವ ಕುರಿತು ಸಾರ್ವಜನಿಕ ವಲಯದಲ್ಲಿ ಈಗಾಗಲೇ ಭಾರಿ ಚರ್ಚೆ ನಡೆಯುತ್ತಿದ್ದು, ಈ ಕುರಿತು ಸಂಬಂಧಪಟ್ಟ ಅಧಿಕಾರಿಗಳು ಸೂಕ್ತ ತನಿಖೆ ನಡೆಸಬೇಕೆಂಬ ಒತ್ತಾಯ ಕೇಳಿಬರುತ್ತಿದೆ.
ಆರೋಪಕ್ಕೆ ಪುಷ್ಟಿ ನೀಡುವಂತೆ ಕೆಲವು ದಾಖಲೆಗಳು ಲಭ್ಯವಾಗಿದ್ದು, ಹಗರಣ ನಡೆದಿರುವ ಬಗ್ಗೆ ಮೇಲ್ನೋಟಕ್ಕೆ ಕಂಡುಬಂದಿದೆ
ಡಿಸೆಂಬರ್ 18ರಂದು ಪಂಚಾಯತಿ ಅಡಳಿತ ಮಂಡಳಿ ತರಾತುರಿಯಲ್ಲಿ 15ನೇ ಹಣಕಾಸು ಹಾಗೂ ಉದ್ಯೋಗ ಖಾತ್ರಿ ಯೋಜನೆ ಕಾಮಗಾರಿಗಳ ಲೆಕ್ಕಪರಿಶೋಧನೆ ಸಭೆಯನ್ನು ಗ್ರಾಮಸ್ಥರ ಅನುಪಮಸ್ಥಿತಿಯಲ್ಲಿ ನಡೆಸಿದೆ. ಈ ಸಂದರ್ಭ ಮಂಡಿಸಲಾದ ಲೆಕ್ಕಪತ್ರದಲ್ಲಿ ಉಲ್ಲೇಖಿಸಿರುವ ಮಾಹಿತಿಗಳ ಪ್ರಕಾರ ಹಲವು ಕಾಮಗಾರಿಗಳಲ್ಲಿ ಭ್ರಷ್ಟಾಚಾರ ನಡೆದಿರುವ ಸಾಧ್ಯತೆ ಹೆಚ್ಚಿರುವಂತೆ ಅನುಮಾನ ಮೂಡಿಸಿದೆ.
ಗುಹ್ಯ ಗ್ರಾಮದ ಸರಕಾರಿ ಪ್ರಾಥಮಿಕ ಶಾಲೆಗೆ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ಅಡಿಯಲ್ಲಿ ವಾಲಿಬಾಲ್ ಕೋರ್ಟ್ ನಿರ್ಮಾಣ ಕಾಮಗಾರಿಗೆ ಹೆಚ್ಚಿನ ಮೊತ್ತದ ಬಿಲ್ ಪಾಸ್ ಮಾಡಲಾಗಿದ್ದು, ಕಾಮಗಾರಿ ಹೆಸರಿನಲ್ಲಿ ಹಣ ನೀಡಿರುವುದು ಹಣದ ದುರುಪಯೋಗ ಆಗಿರುವ ಕುರಿತು ಸಂಶಯಕ್ಕೆ ಎಡೆಮಾಡಿಕೊಟ್ಟಿದೆ.
ಇದಲ್ಲದೆ ಲೆಕ್ಕಪತ್ರದಲ್ಲಿ ಉಲ್ಲೇಖಿಸಿರುವ ಕುಡಿಯುವ ನೀರಿನ ಸರಬರಾಜಿಗೆ ಪೈಪ್ ಜೋಡಣೆ, ಕೊಳವೆ ಬಾವಿ ನಿರ್ಮಾಣ, ತೋಡು ಅಭಿವೃದ್ಧಿ ಹೀಗೆ ಕೈಗೊಂಡಿರುವ ಹಲವು ಕಾಮಗಾರಿಗಳಲ್ಲಿ ಸಹ ಮತ್ತಷ್ಟು ಹಗರಣ ನಡೆದಿರುವ ಸಂಶಯ ವ್ಯಕ್ತ ವಾಗಿದ್ದು, ಕೂಡಲೇ ನಿಷ್ಪಕ್ಷಪಾತವಾಗಿ ಸೂಕ್ತ ತನಿಖೆ ನಡೆಸಿ ಹಗರಣದಲ್ಲಿ ಭಾಗಿಯಾದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.







