Breaking News :

ಸಿದ್ದಾಪುರ ವ್ಯಾಪ್ತಿಯಲ್ಲಿ ಹಲವರನ್ನು ಬಲಿ ಪಡೆದು ಆತಂಕಕ್ಕೆ ಕಾರಣವಾಗಿದ್ದ ಕಾಡಾನೆ ಸೆರೆ : ಅರಣ್ಯ ಇಲಾಖೆಯಿಂದ ಯಶಸ್ವಿ ಕಾರ್ಯಾಚರಣೆ

 


ಜನವಾಹಿನಿ News ಸಿದ್ದಾಪುರ : ವಿರಾಜಪೇಟೆ ತಾಲೂಕಿನ ಸಿದ್ದಾಪುರ ವ್ಯಾಪ್ತಿಯಲ್ಲಿ ಕಾಫಿ ಬೆಳೆಗಾರ ಗಣಪತಿ ಎಂಬುವವರನ್ನು ಬಲಿಪಡೆದಿದ್ದ ಸುಮಾರು 35 ವರ್ಷದ ಕಾಡಾನೆಯನ್ನು ಅರಣ್ಯ ಇಲಾಖೆ ನಡೆಸಿದ ಕಾರ್ಯಾಚರಣೆಯಲ್ಲಿ ಚೆನ್ನೈಯನಕೋಟೆ ಬಾಡಗ ಬಾಣಂಗಾಲ ಸಮೀಪದ ಕಾಫಿ ತೋಟದಲ್ಲಿ ಯಶಸ್ವಿಯಾಗಿ ಸೆರೆ ಹಿಡಿಯಲಾಗಿದ್ದು, ಜಿಲ್ಲೆಯ ದುಬಾರೆ ಆನೆ ಶಿಬಿರಕ್ಕೆ ಸ್ಥಳಾಂತರಿಸಲಾಗಿದೆ.

ಇತ್ತೀಚೆಗೆ ಸಿದ್ದಾಪುರ ಸಮೀಪದ ಕಾಫಿ ತೋಟದಲ್ಲಿ ಕೆಲಸ ಮಾಡುತ್ತಿದ್ದ ವ್ಯಕ್ತಿಯೊಬ್ಬರ ಮೇಲೆ ದಾಳಿ ನಡೆಸಿ ಬಲಿ ಪಡೆದ ನಂತರ ಗ್ರಾಮಸ್ಥರಲ್ಲಿ ಆತಂಕ ಹೆಚ್ಚಾಗಿತ್ತು. ಈ ಹಿನ್ನೆಲೆಯಲ್ಲಿ ಕಾಡಾನೆಯನ್ನು ತಕ್ಷಣ ಸೆರೆಹಿಡಿಯುವಂತೆ ಸ್ಥಳೀಯರು ಅರಣ್ಯ ಇಲಾಖೆಗೆ ಮನವಿ ಮಾಡಿದ್ದರು. ಗ್ರಾಮಸ್ಥರ ಮನವಿಗೆ ಸ್ಪಂದಿಸಿದ ಅರಣ್ಯ ಇಲಾಖೆ ಅಧಿಕಾರಿಗಳು ಶುಕ್ರವಾರ ಬೆಳಗ್ಗಿನಿಂದಲೇ ವಿಶೇಷ ಕಾರ್ಯಾಚರಣೆ ಕೈಗೊಂಡರು.

ಆರು ಸಾಕಾನೆಗಳ ಸಹಾಯದಿಂದ ಸಿದ್ದಾಪುರ, ಪಾಲಿಬೆಟ್ಟ ಹಾಗೂ ಅಮ್ಮತ್ತಿ ಸುತ್ತಮುತ್ತಲ ಕಾಫಿ ತೋಟಗಳಲ್ಲಿ ಶೋಧ ಕಾರ್ಯ ನಡೆಸಲಾಯಿತು. ಕೊನೆಗೆ ಚೆನ್ನೈನಕೋಟೆ ಸಮೀಪದ ಬಾಡಗ ಬಾಣಂಗಾಲ ಪ್ರದೇಶದ ಕಾಫಿ ತೋಟದಲ್ಲಿ ಪತ್ತೆಯಾದ ಒಂಟಿ ಸಲಗಕ್ಕೆ ಪಶುವೈದ್ಯರಾದ ಡಾ. ರಮೇಶ್ ರಂಜನ್ ಅವರ ಮೇಲ್ವಿಚಾರಣೆಯಲ್ಲಿ ಅರವಳಿಕೆ ಮದ್ದು ನೀಡಿ, ಸಾಕಾನೆಗಳ ಸಹಾಯದಿಂದ ಸುತ್ತುವರಿದು ಅದನ್ನು ಯಶಸ್ವಿಯಾಗಿ ಸೆರೆಹಿಡಿಯಲಾಯಿತು.

ಅರಣ್ಯ ಇಲಾಖೆ ಅಧಿಕಾರಿಗಳ ನೇತೃತ್ವದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ತರಬೇತಿ ಪಡೆದ ದುಬಾರೆ ಶಿಬಿರದ ಸಾಕಾನೆಗಳಾದ ಕಂಜನ್, ಸುಗ್ರೀವ, ಧನಂಜಯ್, ಪ್ರಶಾಂತ್ ಹಾಗೂ ಹರ್ಷ ಅಯ್ಯಪ್ಪ ಆನೆಗಳನ್ನು ಬಳಸಿಕೊಳ್ಳಲಾಯಿತು.

ನರಹಂತಕ ಕಾಡಾನೆ ಸೆರೆಹಿಡಿದ ಹಿನ್ನೆಲೆ ಕಳೆದ ಹಲವು ದಿನಗಳಿಂದ ಭಯಭೀತರಾಗಿದ್ದ ಈ ಭಾಗದ ಜನ ನಿಟ್ಟುಸಿರುಬಿಟ್ಟಿದ್ದಾರೆ.

Share this article

ಟಾಪ್ ನ್ಯೂಸ್

More News