ಹಿಂದು ಜಾಗರಣ ವೇದಿಕೆಯಿಂದ ಅಖಂಡ ಭಾರತ ಸಂಕಲ್ಪ ದಿನ : ಆ.೮ ರಿಂದ ಜಿಲ್ಲೆಯ ಏಳು ಕಡೆಗಳಲ್ಲಿ ಪಂಜಿನ ಮೆರವಣಿಗೆ
ಮಡಿಕೇರಿ : ಸ್ವಾತಂತ್ರ್ಯೋತ್ಸವ ಪ್ರಯುಕ್ತ ಹಿಂದು ಜಾಗರಣೆ ವೇದಿಕೆ ವತಿಯಿಂದ ಆ.೮ ರಿಂದ ಆ.೧೪ ರವರೆಗೆ ಜಿಲ್ಲೆಯ ಏಳು ಕಡೆಗಳಲ್ಲಿ ಅಖಂಡ ಭಾರತ ಸಂಕಲ್ಪ ದಿನ ಪಂಜಿನ ಮೆರವಣಿಗೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ವೇದಿಕೆ ಜಿಲ್ಲಾ ಸಂಯೋಜಕ್ ರಂಜನ್ ಗೌಡ ತಿಳಿಸಿದ್ದಾರೆ.
ನಗರದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇಂದಿನ ಯುವ ಪೀಳಿಗೆ ದೇಶಪ್ರೇಮವನ್ನು ಮರೆಯುತ್ತಿದ್ದಾರೆ. ಆದ್ದರಿಂದ ಸ್ವಾತಂತ್ರ್ಯದ ಹಿಂದಿನ ಅಧ್ಯಾಯವನ್ನು ತಿಳಿಸುವ ನಿಟ್ಟಿನಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ. ಆದರೆ, ದೇಶಪ್ರೇಮವನ್ನು ಪಸರಿಸಲು ಕಾರ್ಯಕ್ರಮ ಆಯೋಜನೆ ಸಂದರ್ಭ ಹಲವಾರು ವಿಘ್ನಗಳು ಎದುರಾಗುತ್ತಿದೆ. ಪೊಲೀಸ್ ಇಲಾಖೆಯ ಷರತ್ತಿನ್ನೊಂದಿಗೆ ಆಚರಣೆ ಮಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಲವ್ ಜಿಹಾದ್, ಗೋಹತ್ಯೆ ಪ್ರಕರಣ ಎಗ್ಗಿಲ್ಲದೇ ಸಾಗುತ್ತಿದ್ದರೂ ಕ್ರಮಕೈಗೊಳ್ಳದ ಪೊಲೀಸ್ ಇಲಾಖೆ ಭಾರತ ಮಾತಾಕೀ ಜೈ ಎಂದು ಹೇಳುವವರಿಗೆ ಅಡ್ಡಗಾಲು ಹಾಕುತ್ತಿದ್ದಾರೆ ಎಂದು ದೂರಿದ ಅವರು, ಆ.೮ ರಿಂದ ಆ.೧೪ ರವರೆಗೆ ನಡೆಯುವ ಕಾರ್ಯಕ್ರಮಕ್ಕೆ ದೇಶಪ್ರೇಮಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತಾಗಬೇಕು ಎಂದು ಮನವಿ ಮಾಡಿದರು.
ಆ.೮ರಂದು ಸಂಜೆ ೬ ಗಂಟೆಗೆ ಮಡಿಕೇರಿ ನಗರದ ಮಹದೇವಪೇಟೆಯ ಚೌಡೇಶ್ವರಿ ದೇವಾಲಯದಲ್ಲಿ ಪೂಜೆ ಸಲ್ಲಿಸುವ ಮೂಲಕ ಪಂಜಿನ ಮೆರವಣಿಗೆ ಆರಂಭಗೊಳ್ಳಲಿದೆ. ಇಂದಿರಗಾಂಧಿ ವೃತ್ತ, ಅಂಚೆ ಕಚೇರಿ, ಜನರಲ್ ತಿಮ್ಮಯ್ಯ ವೃತ್ತಕ್ಕಾಗಿ ಮೆರವಣಿಗೆ ಸಾಗಿ ಕೊಡವ ಸಮಾಜದಲ್ಲಿ ೭.೩೦ಕ್ಕೆ ಸಭಾ ಕಾರ್ಯಕ್ರಮ ನಡೆಯಲಿದೆ. ಆ.೯ರಂದು ಮಾದಾಪುರದ ಜಂಬೂರು ಎಫ್ಎಂಸಿ ಬಡಾವಣೆಯಿಂದ ಪಂಜಿನ ಮೆರವಣಿಗೆ ಸಾಗಲಿದೆ. ಆ.೧೦ ರಂದು ಸಂಜೆ ೪ ಗಂಟೆಗೆ ಕೊಯನಾಡು ಮಹಾಗಣಪತಿ ದೇವಾಲಯದ ಸಭಾಂಗಣದಲ್ಲಿ ಸಭಾ ಕಾರ್ಯಕ್ರಮ ನಡೆಯಲಿದೆ. ಇದೇ ದಿನ ಸಂಜೆ ೬ ಗಂಟೆಗೆ ಕೊಡ್ಲಿಪೇಟೆಯ ಗಣಪತಿ ದೇವಾಲಯದಿಂದ ಪಂಜಿನ ಮೆರವಣಿಗೆ ಮತ್ತು ಬಸವೇಶ್ವರ ಕಲ್ಯಾಣ ಮಂಟಪದಲ್ಲಿ ಸಭಾ ಕಾರ್ಯಕ್ರಮ ನಡೆಯಲಿದೆ ಎಂದು ಮಾಹಿತಿ ನೀಡಿದರು.
ಆ.೧೧ ರಂದು ಬೆಳಗ್ಗೆ ೧೦ ಗಂಟೆಗೆ ಗೋಣಿಕೊಪ್ಪ ಆರ್ಎಂಸಿ ಆವರಣದಿಂದ ಗೋಣಿಕೊಪ್ಪ ಬಸ್ ನಿಲ್ದಾಣದ ಮೂಲಕ ಬೈಪಾಸ್ ರಸ್ತೆಗಾಗಿ ಪೊನ್ನಂಪೇಟೆ ಕೊಡವ ಸಮಾಜದಲ್ಲಿ ಸಭಾ ಕಾರ್ಯಕ್ರಮದ ಆಯೋಜಿಸಲಾಗಿದೆ. ಇದೇ ಸಂದರ್ಭ ಬೆಳಗ್ಗೆ ೧೧.೩೦ ಗಂಟೆಗೆ ವಾಹನ ಜಾಥಾ ನಡೆಯಲಿದೆ. ಆ.೧೩ರಂದು ವಿರಾಜಪೇಟೆಯಲ್ಲಿ ೬ ಗಂಟೆಗೆ ತೆಲುಗರ ಬೀದಿ ಶ್ರೀ ಮಾರಿಯಮ್ಮ ದೇವಾಲಯದಿಂದ ಪಂಜಿನ ಮೆರವಣಿಗೆ ಸಾಗಲಿದೆ. ಆ.೧೪ರಂದು ಕುಶಾಲನಗರ ಮಾರಿಯಮ್ಮ ದೇವಾಲಯದಿಂದ ಪಂಜಿನ ಮೆರವಣಿಗೆ ಹೊರಡಲಿದೆ. ರೈತಭವನದಲ್ಲಿ ಸಂಜೆ ೭.೩೦ ಗಂಟೆಗೆ ಸಭಾ ಕಾರ್ಯಕ್ರಮ ನಡೆಯಲಿದೆ. ೭ ದಿನಗಳ ಕಾಲ ನಡೆಯುವ ಸಭಾ ಕಾರ್ಯಕ್ರಮಕ್ಕೆ ಜಿಲ್ಲೆಯಿಂದ ಮತ್ತು ಹೊರ ಜಿಲ್ಲೆಯಿಂದ ದಿಕ್ಸೂಚಿ ಭಾಷಣಕಾರರು ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ವೇದಿಕೆಯ ಜಿಲ್ಲಾ ಸಂಯೋಜಕರಾದ ಸುನಿಲ್ ಮಾದಾಪುರ, ಸಹ ಸಂಯೋಜಕರಾದ ಚೇತನ್, ಶರತ್ ಅಲ್ಲುಮಾಡ, ತಿಮ್ಮಯ್ಯ, ಅಪ್ಪು ರೈ ಇದ್ದರು.








