ಎಂಪಾಕ್ಸ್ ವೈರಸ್ ಆಫ್ರಿಕನ್ ದೇಶದಲ್ಲಿ ಏಕಾಏಕಿ ಉಲ್ಬಣಗೊಂಡಿದೆ. ಈ ಹಿಂದೆ ಮಂಕಿಪಾಕ್ಸ್ ಎಂದು ಕರೆಯಲ್ಪಡುವ ಈ ವೈರಸ್ ವೇಗವಾಗಿ ಹರಡುವ ಕಾಯಿಲೆಯಾಗಿದ್ದು, ಇದನ್ನು ಸಾರ್ವಜನಿಕ ಆರೋಗ್ಯ ತುರ್ತುಸ್ಥಿತಿ ಎಂದು ಘೋಷಿಸುವ ಬಗ್ಗೆ ವಿಶ್ವ ಆರೋಗ್ಯ ಸಂಸ್ಥೆ (WHO) ಚರ್ಚೆ ನಡೆಸುತ್ತಿದೆ.
ಆಫ್ರಿಕನ್ ದೇಶಗಳಲ್ಲಿ ಎಂಪಾಕ್ಸ್ ವೈರಸ್‌ನ ಮಾರಣಾಂತಿಕ ರೂಪಾಂತರದ ಪ್ರಕರಣಗಳ ನಡುವೆ ವಿಶ್ವ ಆರೋಗ್ಯ ಸಂಸ್ಥೆಯ ಮುಖ್ಯಸ್ಥ ಟೆಡ್ರೊಸ್ ಅಧಾನಮ್ ಘೆಬ್ರೆಯೆಸಸ್ ಬುಧವಾರ ಅಂತರಾಷ್ಟ್ರೀಯ ತಜ್ಞರ ತುರ್ತು ಸಭೆ ಕರೆದಿದ್ದರು.
Mpox ವೈರಸ್ ಎಂದರೇನು?
ಮಂಕಿಪಾಕ್ಸ್ ಎಂದು ಕರೆಯುವ ಎಂಪಾಕ್ಸ್ ವೈರಸ್‌ನಿಂದ ಉಂಟಾಗುವ ಕಾಯಿಲೆಯಾಗಿದೆ. ಈ ವೈರಸ್ ದೇಹವನ್ನು ಪ್ರವೇಶಿಸಿದರೆ, ಜ್ವರ, ಶೀತ ಮತ್ತು ಸ್ನಾಯು ನೋವುಗಳಂತಹ ರೋಗಲಕ್ಷಣಗಳು ಕಂಡು ಬರುತ್ತವೆ. ನಂತರ ದದ್ದುಗಳು, ನೀರುಗುಳ್ಳೆಯಂತಹ ಗುಳ್ಳೆಗಳು ಕೂಡ ಚರ್ಮದ ಮೇಲೆ ಕಾಣಿಸಿಕೊಳ್ಳುತ್ತವೆ.
ವೈರಸ್ ನಿಕಟ ಮತ್ತು ಚರ್ಮದಿಂದ ಚರ್ಮದ ಸಂಪರ್ಕದ ಮೂಲಕ ಒಬ್ಬ ವ್ಯಕ್ತಿಯಿಂದ ಇನ್ನೊಬ್ಬರಿಗೆ ಹರಡುತ್ತದೆ. ಇದು ಸೀನುವಾಗ ಮತ್ತು ಕೆಮ್ಮುವಾಗ ಸೋಂಕಿತ ಉಸಿರಾಟದ ಮೂಲಕವೂ ಹರಡುತ್ತದೆ. ಕಡಿಮೆ ಸಮಯದಲ್ಲಿ ಹೆಚ್ಚು ವ್ಯಕ್ತಿಗಳಿಗೆ ಸೋಂಕು ತಗಲುವ ಕಾರಣ ರೋಗದ ಭೀತಿ ಹೆಚ್ಚಾಗಿದೆ.
ಎಂಪಾಕ್ಸ್ ವೈರಸ್ ಒಂದು ಸಾಂಕ್ರಾಮಿಕ ರೋಗವಾಗಿದ್ದು ಅದು 2 ರಿಂದ 4 ವಾರಗಳವರೆಗೆ ಇರುತ್ತದೆ. ಆದಾಗ್ಯೂ ಸೋಂಕಿನ ನಂತರದ 24-48 ಗಂಟೆಗಳ ನಂತರ ರೋಗಲಕ್ಷಣಗಳು ಕಾಣಿಸಿಕೊಳ್ಳಲು ಪ್ರಾರಂಭಿಸುತ್ತವೆ.
ಬುರುಂಡಿ, ಕೀನ್ಯಾ, ರುವಾಂಡಾ ಮತ್ತು ಉಗಾಂಡಾದಂತಹ ನೆರೆಯ ದೇಶಗಳಲ್ಲಿಯೂ ಇಂತಹ ಪ್ರಕರಣಗಳು ಕಂಡು ಬರುತ್ತಿದ್ದು, ಆರೋಗ್ಯ ತುರ್ತುಪರಿಸ್ಥಿತಿಯ ಭೀತಿ ಎದುರಾಗಿದೆ.







