ಸಿದ್ದಾಪುರ : ಕಾಡಾನೆ ಅರಣ್ಯಕ್ಕೆ ಅಟ್ಟುವ ಕಾರ್ಯಾಚರಣೆ
ಮಡಿಕೇರಿ : ವಿರಾಜಪೇಟೆ ವಲಯ ಅರಣ್ಯ ವ್ಯಾಪ್ತಿಗೆ ಒಳಪಡುವ ಸಿದ್ದಾಪುರ ಸಮೀಪದ ಗುಹ್ಯ ಶಾಲೆಯ ಹತ್ತಿರದ ಕಾಫಿ ತೋಟಗಳಲ್ಲಿ ಬೀಡುಬಿಟ್ಟಿದ್ದ ಕಾಡಾನೆಗಳನ್ನು ಕಾಡಿಗಟ್ಟುವ ಕಾರ್ಯಾಚರಣೆ ಬುಧವಾರ ನಡೆಯಿತು.
ಕೆಲದಿನಗಳಿಂದ ಇಲ್ಲಿನ ಸುತ್ತಮುತ್ತಲ ಕಾಫಿ ತೋಟಗಳಲ್ಲಿ ಬೀಡುಬಿಟ್ಟಿದ್ದ ಕಾಡಾನೆಗಳಿಂದ ವಿದ್ಯಾರ್ಥಿಗಳು, ಪೋಷಕರಲ್ಲಿ ಆತಂಕದ ವಾತಾವರಣ ಸೃಷ್ಟಿಯಾಗಿತು. ಈ ಹಿನ್ನೆಲೆ ಕಾಡಾನೆ ಹಿಂಡನ್ನು ಅರಣ್ಯಕ್ಕೆ ಅಟ್ಟಲು ಇಲಾಖೆಗೆ ಸ್ಥಳೀಯರು ಆಗ್ರಹಿಸಿದ್ದರು.
ವಿರಾಜಪೇಟೆ ವಲಯ ಉಪ ವಿಭಾಗ ಅರಣ್ಯ ಸಂರಕ್ಷಣಾಧಿಕಾರಿ ಜಗನ್ನಾಥ್ ಹಾಗೂ ಎಸಿಎಫ್ ಗೋಪಾಲ್ ಮಾರ್ಗದರ್ಶನದಲ್ಲಿ ವಲಯ ಅರಣ್ಯಾಧಿಕಾರಿ ಶಿವರಾಂ ನೇತೃತ್ವದಲ್ಲಿ ಅರಣ್ಯ ಇಲಾಖೆಯ ಸಿಬ್ಬಂದಿಗಳು ಕಾರ್ಯಾಚರಣೆ ನಡೆಸಿ, ಪಟಾಕಿ ಸಿಡಿಸಿ ಆನೆಗಳನ್ನು ತೋಟಗಳಿಂದ ಅರಣ್ಯಕ್ಕೆ ಅಟ್ಟಿಸಿದರು.
10 ಕ್ಕೂ ಅಧಿಕ ಸಂಖ್ಯೆಯ ಕಾಡಾನೆಗಳನ್ನು ವಾಪಸ್ ಅರಣ್ಯಕ್ಕೆ ಅಟ್ಟಿಸುವಲ್ಲಿ ಅರಣ್ಯ ಇಲಾಖೆ ಸಿಬ್ಬಂದಿಗಳು ಯಶಸ್ವಿಯಾಗಿದ್ದಾರೆ.
ವಿರಾಜಪೇಟೆ ವಲಯದ ಆರ್.ಆರ್.ಟಿ ಹಾಗೂ ಈಟಿಎಫ್ ಸಿಬ್ಬಂದಿಗಳು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.
ಕಾರ್ಯಚರಣೆ ಸಂದರ್ಭ ಗುಹ್ಯ ಶಾಲೆಯಿಂದ ಮನೆಗೆ ತೆರಳುವ ವಿದ್ಯಾರ್ಥಿಗಳನ್ನು ತಮ್ಮ ಮನೆಗಳಿಗೆ ಇಲಾಖೆ ವಾಹನದಲ್ಲಿ ಕರೆದುಕೊಂಡು ಹೋಗಲಾಯಿತು. ವಲಯ ಅರಣ್ಯಾಧಿಕಾರಿ ಶಿವರಾಂ ಸ್ವತಃ ತಾವೇ ವಾಹನ ಚಾಲನೆ ಮಾಡಿಕೊಂಡು ಮಕ್ಕಳನ್ನು ಸುರಕ್ಷಿತವಾಗಿ ಕರೆದುಕೊಂಡು ಹೋಗಿದ್ದು ವಿಶೇಷವಾಗಿತ್ತು.
✒️ ಸುರೇಶ್ ಪೂಜಾರಿ









