ಧರ್ಮಸ್ಥಳ ಪ್ರಕರಣ : ಎಸ್‍ಐಟಿ ತನಿಖೆಗೆ ಒಪ್ಪಿಸಲು ಆಗ್ರಹಿಸಿ ಕುಶಾಲನಗರದಲ್ಲಿ ಪ್ರತಿಭಟನೆ
ಕುಶಾಲನಗರ : ಧರ್ಮಸ್ಥಳದಲ್ಲಿ ನಡೆದಿದೆ ಎನ್ನಲಾಗಿರುವ ಅತ್ಯಾಚಾರ ಹಾಗೂ ಕೊಲೆ ಪ್ರಕರಣಗಳ ತನಿಖೆಗೆ ಹೈಕೋರ್ಟ್ ನ್ಯಾಯಾಧೀಶರ ನೇತೃತ್ವದಲ್ಲಿ ಎಸ್‍ಐಟಿ ತನಿಖೆಗೆ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್‍ಡಿಪಿಐ) ಕುಶಾಲನಗರದಲ್ಲಿ ಪ್ರತಿಭಟನೆ ನಡೆಸಿತು.
ಪಟ್ಟಣದಲ್ಲಿ ಪ್ರತಿಭಟನೆ ನಡೆಸಿದ ಎಸ್‍ಡಿಪಿಐ ಪ್ರಮುಖರು ಹಾಗೂ ಸದಸ್ಯರು ಧರ್ಮಸ್ಥಳದಲ್ಲಿ ನಡೆದಿರುವ ಘಟನೆಗಳನ್ನು ರಾಜ್ಯ ಸರ್ಕಾರ ಗಂಭೀರವಾಗಿ ಪರಿಗಣಿಸುತ್ತಿಲ್ಲವೆಂದು ಅಸಮಾಧಾನ ವ್ಯಕ್ತಪಡಿಸಿದರು.
ಎಸ್‍ಡಿಪಿಐ ಜಿಲ್ಲಾಧ್ಯಕ್ಷ ಅಮೀನ್ ಮೊಹಿಸಿನ್ ಮಾತನಾಡಿ ಧರ್ಮಸ್ಥಳದ ಪ್ರಕರಣಗಳನ್ನು ಎಸ್‍ಐಟಿ ತನಿಖೆಗೆ ಒಪ್ಪಿಸುವುದಿಲ್ಲ ಎನ್ನುವ ಮುಖ್ಯಮಂತ್ರಿಗಳ ಹೇಳಿಕೆ ಖಂಡನೀಯ ಎಂದರು.
ರಾಜ್ಯ ಸರ್ಕಾರ ಜೀವಂತ ಶವವಾಗಿದ್ದು, ಮುಖ್ಯಮಂತ್ರಿಗಳು ಅಸಹಾಯಕ ಸ್ಥಿತಿಯಲ್ಲಿದ್ದಾರೆ. ಅತ್ಯಾಚಾರ ಮತ್ತು ಕೊಲೆಗೀಡಾದ ಹೆಣ್ಣು ಮಕ್ಕಳ ಪೋಷಕರು ನ್ಯಾಯಕ್ಕಾಗಿ ಕಚೇರಿಯಿಂದ ಕಚೇರಿಗೆ ಅಲೆಯುತ್ತಿದ್ದರೂ ಸರ್ಕಾರಕ್ಕೆ ಕರುಣೆ ಬರುತ್ತಿಲ್ಲ. ಶವಗಳನ್ನು ಹೂತಿಟ್ಟಿರುವ ವ್ಯಕ್ತಿ ಬಂದು ಸಾಕ್ಷಿ ಹೇಳಿದರೂ ರಾಜ್ಯ ಸರ್ಕಾರ ಮೂಕ ಪ್ರೇಕ್ಷನಂತೆ ವರ್ತಿಸುತ್ತಿದೆ ಎಂದು ಆರೋಪಿಸಿದರು.
ಎಸ್‍ಡಿಪಿಐ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಉಸ್ಮಾನ್ ಸುಂಟಿಕೊಪ್ಪ ಹಾಗೂ ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಸಲೀಕ ಮಾತನಾಡಿ ಧರ್ಮಸ್ಥಳದ ಪ್ರಕರಣಗಳನ್ನು ತೀವ್ರವಾಗಿ ಖಂಡಿಸಿದರು. ಕುಶಾಲನಗರ ನಗರಾಧ್ಯಕ್ಷ ಝಕರಿಯಾ ಮತ್ತಿತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.








