ನೀರು ಕೇಳುವ ನೆಪದಲ್ಲಿ ಹಲ್ಲೆ ನಡೆಸಿ ಕಳ್ಳತನ : ಆರೋಪಿಯನ್ನು ಸೆರೆ ಹಿಡಿದು ಪೊಲೀಸರಿಗೆ ಒಪ್ಪಿಸಿದ ಸ್ಥಳೀಯರು
ಮಡಿಕೇರಿ : ಮಹಿಳೆಯೊಬ್ಬರ ಮೇಲೆ ವ್ಯಕ್ತಿಯೊಬ್ಬ ಮಾರಕಾಸ್ತ್ರದಿಂದ ಹಲ್ಲೆ ನಡೆಸಿ ಕತ್ತಿನಲ್ಲಿದ್ದ ಸರ ಕದ್ದೊಯ್ದಿರುವ ಘಟನೆ ಕೊಂಡಗೇರಿಯಲ್ಲಿ ಇಂದು ಮಧ್ಯಾಹ್ನ ನಡೆದಿದ್ದು, ಜಿಲ್ಲೆಯ ಜನ ಬೆಚ್ಚಿ ಬೀಳುವಂತೆ ಮಾಡಿದೆ.
ಕೊಂಡಂಗೇರಿಯ ಸಾರಮ್ಮ ಎಂಬುವವರೇ ಹಲ್ಲೆಗೊಳಗಾದ ಮಹಿಳೆಯಾಗಿದ್ದಾರೆ.
ಏನಿದು ಪ್ರಕರಣ :: ಸಾರಮ್ಮ ತನ್ನ ಸೊಸೆಯೊಂದಿಗೆ ಮನೆಯಲ್ಲಿದ್ದು, ʼನಾನು ಪಕ್ಕದಲ್ಲಿ ಕೆಲಸಕ್ಕೆ ಬಂದಿದ್ದೇನೆ. ಕುಡಿಯೋಕೆ ನೀರು ಕೊಡಿʼ ಅಂತ ವ್ಯಕ್ತಿಯೊಬ್ಬ ಬಂದಿದ್ದಾನೆ. ಕೆಲವೇ ನಿಮಿಷದಲ್ಲಿ ಮಹಿಳೆ ಬಳಿಯಿದ್ದ ಸರವನ್ನು ಕಿತ್ತುಕೊಳ್ಳಲು ಯತ್ನಿಸಿದ್ದು, ಅದಕ್ಕೆ ಆಕೆ ಪ್ರತಿರೋಧವೊಡ್ಡಿದಾಗ ಹಲ್ಲೆ ನಡೆಸಿ ಚಿನ್ನಾಭರಣ ಎಳೆದುಕೊಂಡು ಅಲ್ಲಿಂದ ಪರಾರಿಯಾಗಿದ್ದಾನೆ.
ಹಲ್ಲೆ ನಡೆಸಿ ಕಳ್ಳತನ ಮಾಡುತ್ತಿದ್ದಂತೆ ಮಹಿಳೆ ಕಿರುಚಾಡಿದ್ದ ಶಬ್ದ ಕೇಳಿ ಘಟನಾ ಸ್ಥಳಕ್ಕೆ ಆಗಮಿಸಿದ ಸ್ಥಳೀಯರು ಕೂಡಲೇ ಕಾರ್ಯಪ್ರವೃತ್ತರಾಗಿ ಸುತ್ತಮುತ್ತಲ ಪ್ರದೇಶದಲ್ಲಿ ಹುಡುಕಾಟ ನಡೆಸಿದ್ದಾರೆ. ಈ ಸಂದರ್ಭ ಕಳ್ಳತನ ಮಾಡಿ ತೋಟವೊಂದರಲ್ಲಿ ಅಡಗಿದ್ದ ಯುವಕ ಸಿಕ್ಕಿಬಿದ್ದಿದ್ದಾನೆ. ಆತನನ್ನು ಹಿಡಿದ ಸ್ಥಳೀಯರು ಪೊಲೀಸರಿಗೆ ಒಪ್ಪಿಸಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.
ಕಳ್ಳತನ ಮಾಡಿ ಪರಾರಿಯಾಗಲು ಯತ್ನಿಸಿದ ಯುವಕ ಪಾಲಿಬೆಟ್ಟ ನಿವಾಸಿ ಹ್ಯಾರಿಸ್ ಎಂಬುವವರ ಪುತ್ರ ಮುನಾವರ್ ಎಂಬುದಾಗಿ ತಿಳಿದು ಬಂದಿದೆ. ಹಾಡುಹಗಲೇ ಇಂಥ ಕೃತ್ಯ ನಡೆದಿರುವುದು ಜಿಲ್ಲೆಯ ಜನರನ್ನು ಬೆಚ್ಚಿಬೀಳಿಸಿದೆ.








