Breaking News :

ಆ.೩ ರಂದು ಮಡಿಕೇರಿಯಲ್ಲಿ ಕಕ್ಕಡ ೧೮ರ ನಮ್ಮೆ

ಮಡಿಕೇರಿ : ಮಡಿಕೇರಿ ಕೊಡವ ಸಮಾಜದ ಪೊಮ್ಮಕ್ಕಡ ಕೂಟ, ಕೊಡವ ಸಮಾಜ ಮಡಿಕೇರಿ ಹಾಗೂ ಮಡಿಕೇರಿ ಕೊಡವ ಕೇರಿಯ ಸಂಯುಕ್ತ ಆಶ್ರಯದಲ್ಲಿ ಆ.೩ನೇ ಭಾನುವಾರದಂದು ಮಡಿಕೇರಿಯ ಕೊಡವ ಸಮಾಜದ ಸಭಾಂಗಣದಲ್ಲಿ ಕಕ್ಕಡ ೧೮ರ ನಮ್ಮೆ ಹಮ್ಮಿಕೊಳ್ಳಲಾಗಿದೆ  ಮಡಿಕೇರಿ ಕೊಡವ ಸಮಾಜದ ಅಧ್ಯಕ್ಷ ಮಂಡುವಂಡ ಪಿ.ಮುತ್ತಪ್ಪತಿಳಿಸಿದರು.

ನಗರದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮಡಿಕೇರಿ ಕೊಡವ ಸಮಾಜದ ಅಧ್ಯಕ್ಷ ಮಂಡುವಂಡ ಪಿ.ಮುತ್ತಪ್ಪ, ಕೊಡವ ಸಂಸ್ಕೃತಿಯನ್ನು ಉಳಿಸುವ ಮತ್ತು ಮುಂದಿನ ಪೀಳಿಗೆಗೆ ಪರಿಚಯಿಸುವ ನಿಟ್ಟಿನಲ್ಲಿ ಕಕ್ಕಡ ನಮ್ಮೆಯನ್ನು ಈ ಬಾರಿಯೂ ವಿಶೇಷವಾಗಿ ಆಚರಿಸಲಾಗುತ್ತದೆ. ಬೆ.೧೦ ಗಂಟೆಗೆ ಶಾಸಕರಾದ ಎ.ಎಸ್.ಪೊನ್ನಣ್ಣ ಹಾಗೂ ಡಾ.ಮಂತರ್ ಗೌಡ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ಕಕ್ಕಡ ೧೮ರ ವಿಶೇಷತೆಯ ಬಗ್ಗೆ ಅಜ್ಜಿಕುಟ್ಟಿರ ಸುನಿತಾ ಗಿರೀಶ್ ವಿಚಾರ ಮಂಡನೆ ಮಾಡಲಿದ್ದಾರೆ ಎಂದು ಮಾಹಿತಿ ನೀಡಿದರು.

ಕಾರ್ಯಕ್ರಮದಲ್ಲಿ ಮದ್ದ್ ಪಾಯಸ, ಮದ್ದ್ ಪುಟ್ಟ್, ನಾಡ್ ಕುಮ್ಮ್‌ಕರಿ, ಬೈಂಬಳೆ ಕರಿ, ಮಾಂಗೆ ಕರಿ, ಮುದ್‌ರೆ ಕಣ್ಣಿ, ಞಂಡ್ ಕರಿ, ಕೋಳಿ ಕರಿ, ಪಂದಿ ಕರಿ, ಕೊಯಿಲೆ ಪಚ್ಚೆ ಮೀನ್ ಕರಿ, ಚಕ್ಕೆ ಕುರು ಪಜ್ಜಿ, ಕೈಪುಳಿ ಪಜ್ಜಿ ಹಾಗೂ ಕಕ್ಕಡ ಮದ್ದು ಸೊಪ್ಪಿನ ವಿಶೇಷ ಖಾದ್ಯಗಳ ಸ್ಪರ್ಧೆ ಹಾಗೂ ಪ್ರದರ್ಶನ ಇರಲಿದೆ. ವಿಜೇತರಿಗೆ ಪ್ರಥಮ, ದ್ವಿತೀಯ, ತೃತೀಯ ಬಹುಮಾನ ನೀಡಿ ಗೌರವಿಸಲಾಗುವುದು ಎಂದು ವಿವರಿಸಿದರು.

ಮಡಿಕೇರಿ ಕೊಡವ ಸಮಾಜದ ಪೊಮ್ಮಕ್ಕಡ ಕೂಟದ ಅಧ್ಯಕ್ಷೆ ಕನ್ನಂಡ ಕವಿತಾ ಮಾತನಾಡಿ, ಕಕ್ಕಡ ಆರಂಭವಾದ ದಿನದಿಂದ ೧೮ ದಿನಗಳವರೆಗೆ ಪ್ರತಿದಿನ ಒಂದೊಂದು ಔಷಧಿಯಂತೆ ಒಟ್ಟು ೧೮ ಔಷಧಿಗಳು ಮದ್ದು ಸೊಪ್ಪಿನಲ್ಲಿ ಅಡಕವಾಗುತ್ತದೆ. ಆ ಸೊಪ್ಪಿನಿಂದ ಹಲವು ಬಗೆಯ ತಿನಿಸುಗಳನ್ನು ತಯಾರಿಸಿ ಸೇವನೆ ಮಾಡಲಾಗುತ್ತದೆ. ಕಕ್ಕಡ ಒತ್ತೊರ್ಮೆ ಕೂಟದಲ್ಲಿ ತರಾವರಿ ಖಾದ್ಯಗಳಿರಲಿದ್ದು, ಮಡಿಕೇರಿಯ ೧೨ ಕೊಡವ ಕೇರಿಯ ಸಮುದಾಯ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕೆಂದು ಮನವಿ ಮಾಡಿದ ಅವರು, ಸ್ಪರ್ಧೆಗಳಲ್ಲಿ ಭಾಗವಹಿಸುವವರು ಜು.೩೧ರೊಳಗೆ ಹೆಸರು ನೋಂದಾಯಿಸಿಕೊಳ್ಳಬೇಕೆಂದು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಮಡಿಕೇರಿ ಕೊಡವ ಸಮಾಜದ ಗೌರವ ಕಾರ್ಯದರ್ಶಿ ಕನ್ನಂಡ ಸಂಪತ್, ಜಂಟಿ ಕಾರ್ಯದರ್ಶಿ ನಂದಿನೆರವಂಡ ದಿನೇಶ್, ಪೊಮ್ಮಕ್ಕಡ ಕೂಟದ ಕಾರ್ಯದರ್ಶಿ ಕೂಪದಿರ ಜೂನ ವಿಜಯ, ಖಜಾಂಚಿ ಉಳ್ಳಿಯಡ ಸಚಿತ ಹಾಜರಿದ್ದರು.

Share this article

ಟಾಪ್ ನ್ಯೂಸ್

More News