ಸಿದ್ದಾಪುರ ವ್ಯಾಪ್ತಿಯಲ್ಲಿ ಮುಂದುವರೆದ ಕಾಡಾನೆ ದಾಳಿ : ಕಾರ್ಮಿಕರಿಬ್ಬರು ಗಂಭೀರ
ಸಿದ್ದಾಪುರ : ಸಿದ್ದಾಪುರ ವ್ಯಾಪ್ತಿಯಲ್ಲಿ ಮುಂದುವರೆದ ಕಾಡಾನೆ ದಾಳಿ ಪ್ರಕರಣ. ಕಾಡಾನೆ ದಾಳಿಗೆ ಇಬ್ಬರು ಕಾರ್ಮಿಕರು ಗಂಭೀರ
ಸಿದ್ದಾಪುರ ಸಮೀಪದ ಕಂಬಿರಂಡ ಮತ್ತು ಸ್ವರ್ಣಗಿರಿ ಎಸ್ಟೇಟ್ ನಲ್ಲಿ ನಡೆದ ಘಟನೆ.
ತೋಟ ಕಾರ್ಮಿಕರಾದ ಕಣ್ಣನ್ ಮತ್ತು ಸಾಬು ಆಲಿ ಎಂಬುವವರೇ ಕಾಡಾನೆ ದಾಳಿಗೊಳಗಾದ ಕಾರ್ಮಿಕರು.
ಸಿದ್ದಾಪುರ ಸಮೀಪದ ಕಂಬಿರಂಡ ಹಾಗೂ ಸ್ವರ್ಣಗಿರಿ ಎಸ್ಟೇಟ್ ನಲ್ಲಿ ಕೆಲಸ ನಿರ್ವಹಿಸುತ್ತಿದ್ದ ಸಂದರ್ಭ ಕಾಡಾನೆ ದಾಳಿ ಮಾಡಿದ್ದು, ದಾಳಿಗೆ ಒಳಗಾದ ಇಬ್ಬರು ಕಾರ್ಮಿಕರನ್ನು ಸಿದ್ದಾಪುರ ಸಮುದಾಯ ಆರೋಗ್ಯ ಕೇಂದ್ರಕ್ಕೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಮಡಿಕೇರಿ ಜಿಲ್ಲಾಸ್ಪತ್ರೆಗೆ ರವಾನೆ ಮಾಡಲಾಗಿದೆ. ಆಸ್ಪತ್ರೆಗೆ ಅರಣ್ಯಧಿಕಾರಿಗಳು ಭೇಟಿ ನೀಡಿ ಮಾಹಿತಿ ಪಡೆದು ಮುಂದಿನ ಕ್ರಮ ಕೈಗೊಂಡಿದ್ದಾರೆ.
ಇತ್ತೀಚೆಗಷ್ಟೆ ಶಿಲ್ಪಿ ಎಸ್ಟೇಟ್ ನಲ್ಲಿ ಇಬ್ಬರು ಕಾರ್ಮಿಕರ ಮೇಲೆ ಕಾಡಾನೆ ದಾಳಿ ನಡೆಸಿದ ಪ್ರಕರಣ ವರದಿಯಾಗಿತ್ತು. ಅದರ ಬೆನ್ನಲ್ಲೇ ಇದೀಗ ಮತ್ತೆ ಇಬ್ಬರ ಮೇಲೆ ಕಾಡಾನೆ ದಾಳಿ ಮಾಡಿರುವುದು, ಸುತ್ತಮುತ್ತಲ ಗ್ರಾಮಗಳಲ್ಲಿ ಕೂಲಿ ಕೆಲಸ ಮಾಡುವ ಕಾರ್ಮಿಕರಲ್ಲಿ ತೀವ್ರ ಆತಂಕವನ್ನು ಉಂಟುಮಾಡಿದೆ. ಸಿದ್ದಾಪುರ ವ್ಯಾಪ್ತಿಯಲ್ಲಿ ಕಾಡಾನೆಗಳ ಉಪಟಳ ಹೆಚ್ಚಾಗಿದ್ದು, ಶಾಶ್ವತ ಪರಿಹಾರ ಕಲ್ಪಿಸಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದು, ತಪ್ಪಿದಲ್ಲಿ ವಿವಿಧ ಸಂಘ ಸಂಸ್ಥೆಗಳ ಜತೆಗೂಡಿ ಹೋರಾಟ ರೂಪಿಸುವುದಾಗಿ ಎಚ್ಚರಿಸಿದ್ದಾರೆ.








