ಅಸ್ಸಾಂನವರ ಸೋಗಿನಲ್ಲಿರುವ ಬಾಂಗ್ಲಾ ವಲಸಿಗರಿಂದ ಕಾನೂನು ಬಾಹಿರ ಚಟುವಟಿಕೆಗಳ ಹೆಚ್ಚಳ : ಗಡಿಪಾರಿಗೆ ಜಿಲ್ಲಾ ಬಿಜೆಪಿ ಆಗ್ರಹ
ಮಡಿಕೇರಿ : ಜಿಲ್ಲೆಯಲ್ಲಿ ಅಸ್ಸಾಂನವರ ಸೋಗಿನಲ್ಲಿ ಬಾಂಗ್ಲದೇಶ ವಲಸಿಗರು ಸೇರಿಕೊಂಡಿದ್ದಾರೆ. ಅಲ್ಲದೇ ಜಿಲ್ಲೆಯಲ್ಲಿ ಅಕ್ರಮ ಗಾಂಜಾ ಮಾರಾಟ, ಗೋಮಾಂಸ ಮಾರಾಟ, ಹಲ್ಲೆ ಪ್ರಕರಣಗಳು ವಲಸೆ ಕಾರ್ಮಿಕರಿಂದ ಹೆಚ್ಚಾಗಿ ನಡೆಯುತ್ತಿದೆ. ಈ ಹಿನ್ನೆಲೆ ಜಿಲ್ಲಾಡಳಿತ ಪ್ರತಿ ಗ್ರಾಮ ಪಂಚಾಯಿತಿ ಮತ್ತು ಪೊಲೀಸ್ ಇಲಾಖೆ ಜಂಟಿಯಾಗಿ ವಲಸೆ ಕಾರ್ಮಿಕರ ದಾಖಲಾತಿ ಸಂಗ್ರಹಿಸಲು ಸೂಚನೆ ನೀಡಬೇಕೆಂದು ಜಿಲ್ಲಾಧ್ಯಕ್ಷ ರವಿ ಕಾಳಪ್ಪ ಒತ್ತಾಯಿಸಿದ್ದಾರೆ.
ನಗರದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಸ್ಸಾಂ ಮತ್ತು ಬಾಂಗ್ಲದೇಶ ವಲಸಿಗರಿಗೆ ಜಿಲ್ಲೆಯ ನಿವಾಸಿಗಳು ಎಂದು ಆಧಾರ್ ಕಾರ್ಡ್, ಬಿಪಿಎಲ್ ಕಾರ್ಡ್ ನೀಡಿದ್ದಲ್ಲಿ ಅಂತವರನ್ನು ದೇಶದಿಂದಲೇ ಗಡಿಪಾರು ಮಾಡಬೇಕು ಆಗ್ರಹಿಸಿದರು
ನಗರದ ನಿವಾಸಿಗಳ ವಾಯುವಿಹಾರ ಹಾಗೂ ಪ್ರಕೃತಿ ವೀಕ್ಷಣಾ ಉದ್ಯಾನವನ ಈಗ ವಾಣಿಜ್ಯಕರಣವಾಗಿ ಪರಿವರ್ತನೆಯಾಗುತ್ತಿದೆ. ಈಗಾಗಲೇ ಗ್ರೇಟರ್ ರಾಜಾಸೀಟ್ ಮಾಡಿ ಸಾಕಷ್ಟು ಸಮಸ್ಯೆಗಳು ಎದುರಾಗಿದೆ. ಪ್ರಸ್ತುತ ರಾಜಾಸೀಟ್ನಲ್ಲಿ ಗ್ಲಾಸ್ ಬ್ರಿಡ್ಜ್ ನಿರ್ಮಿಸಲು ಯೋಜನೆ ರೂಪಿಸಲಾಗುತ್ತಿದೆ. ಆದರೆ, ಸ್ಥಳೀಯ ಆಡಳಿತ ನಗರಸಭೆಗೆ ಈ ಕುರಿತು ಯಾವುದೇ ಮಾಹಿತಿ ನೀಡಿಲ್ಲ. ಜನಾಭಿಪ್ರಾಯ ಪಡೆದಿಲ್ಲ. ಅಲ್ಲದೇ, ಜಿಲ್ಲೆಯಲ್ಲಿ ಪ್ರಕೃತಿ ವಿಕೋಪ, ಬರೆಕುಸಿತ ಇಂತಹ ದುರ್ಘಟನೆಗಳು ನಡೆದ ಅನುಭವವಿದ್ದರೂ, ಯೋಜನೆ ಅನುಷ್ಠಾನ ಸಮಂಜಸವಲ್ಲ. ಶೀಘ್ರದಲ್ಲಿ ಜಿಲ್ಲಾಡಳಿತ ಎಚ್ಚೆತ್ತುಕೊಂಡು ತಡೆಯಾಜ್ಞೆ ಹೊರಡಿಸಬೇಕು. ಅದನ್ನೂ ಮೀರಿ ಗ್ರೇಟರ್ ರಾಜಾಸಿಟ್ನಲ್ಲಿ ಗ್ಲಾಸ್ ಬ್ರಿಡ್ಜ್ ನಿರ್ಮಾಣ ಮಾಡಲು ಮುಂದಾದಲ್ಲಿ ನಗರದ ನಿವಾಸಿಗಳೊಡಗೂಡಿ ಕಾನೂನು ಹೋರಾಟ , ಪ್ರತಿಭಟನೆ ಮಾಡಲಾಗುವುದು ಎಂದು ನಾಪಂಡ ರವಿಕಾಳಪ್ಪ ಎಚ್ಚರಿಸಿದರು.
ಗ್ರೇಟರ್ ರಾಜಾಸೀಟ್ ನಲ್ಲಿ ಈಗಾಗಲೇ ಹಲವು ಯೋಜನೆಗಳನ್ನು ಜಾರಿಗೆ ತಂದು ವಾಣಿಜ್ಯಕರಣ ಮಾಡಲಾಗುತ್ತಿದೆ. ಆದರೆ, ಯಾವುದೇ ನಿರ್ವಾಹಣೆ ಇಲ್ಲ. ಪುಟಾಣಿ ರೈಲು ಸ್ಥಗಿತಗೊಂಡರು ಯಾವುದೇ ಕ್ರಮವಿಲ್ಲ. ಸೂಕ್ತ ವಾಹನ ನಿಲುಗಡೆಗೆ ವ್ಯವಸ್ಥೆಯಿಲ್ಲ. ಇದನ್ನು ಮೊದಲು ಕೈಗೊಳ್ಳಬೇಕು ಎಂದು ಆಗ್ರಹಿಸಿದ ಅವರು, ಪ್ರವಾಸೋದ್ಯಮ ಇಲಾಖೆ ಗುರುತು ಮಾಡಿದ ಪಟ್ಟಿಯಿಂದ ಭಾಗಮಂಡಲ ತಲಕಾವೇರಿಯನ್ನು ಕೈಬಿಟ್ಟು ಧಾರ್ಮಿಕ ಸ್ಥಳವಾಗಿ ಮುಂದುವರೆಸಬೇಕು ಎಂದರು.
ಮಡಿಕೇರಿ ನಗರಾಭಿವೃದ್ಧಿ ಪ್ರಾಧಿಕಾರದಿಂದ ಕೆಲವು ವಾಣಿಜ್ಯ ಮತ್ತು ವಸತಿ ಪರಿವರ್ತನೆಗೆ ಸಮಸ್ಯೆಯಾಗುತ್ತಿದೆ. ೧ ಎಕರೆ ಪರಿವರ್ತನೆಗೆ ಲಕ್ಷಾನುಗಟ್ಟಲೇ ಹಣ ಕೊಡಬೇಕಾಗಿದೆ. ಇದರ ಹಿಂದೆ ಬ್ರೋಕರ್ಗಳು ಮತ್ತು ಭೂ ಮಾಫಿಯ ಕೆಲಸ ಮಾಡುತ್ತಿದ್ದು, ಹಗಲು ದರೋಡೆ ನಡೆಯುತ್ತಿದೆ ಎಂದು ಆರೋಪಿಸಿದ ಕಾಳಪ್ಪ, ಮುಡಾದ ಅಧೀನಕ್ಕೆ ಒಳಪಡುವ ಅಕ್ಕಪಕ್ಕದ ಗ್ರಾಮಗಳಲ್ಲಿ ಯಾವ ಜಾಗ ಎಲ್ಲೋ ಜ್ಹೋನ್ ಆಗಿದೆ ಎಂದು ಸಾರ್ವಜನಿಕವಾಗಿ ಪ್ರಕಟಿಸಲು ಆಗ್ರಹಿಸಿದರು.
ಜಿಲ್ಲಾ ಉಪಾಧ್ಯಕ್ಷ ಕಿಲನ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಹೇಶ್ ಜೈನಿ, ನಗರ ಮಂಡಲ ಅಧ್ಯಕ್ಷ ಉಮೇಶ್ ಸುಬ್ರಮಣಿ, ವಕ್ತಾರರಾದ ಅರುಣ್ ಕುಮಾರ್, ತಳೂರು ಕಿಶೋರ್ ಸುದ್ದಿಗೋಷ್ಠಿಯಲ್ಲಿದ್ದರು.








