ಕೊಡ್ಲಿಪೇಟೆ ನಂದಿಪುರ ವ್ಯಾಪ್ತಿಯ ಸರಕಾರಿ ಜಾಗ ಭೂಗಳ್ಳರ ಪಾಲಾಗದಂತೆ ಎಚ್ಚರ ವಹಿಸಲು ದಸಂಸ ಆಗ್ರಹ
ಮಡಿಕೇರಿ : ಕೊಡ್ಲಿಪೇಟೆ ಹೋಬಳಿ ನಂದಿಪುರ ಗ್ರಾಮದ ಸರ್ವೆ ನಂ.೮೮/೧ರ ೪ ಎಕರೆ ೬೬ ಸೆಂಟು ಪೈಸಾರಿ ಭೂಮಿಯನ್ನು ಕಂದಾಯ ಇಲಾಖೆ ಮತ್ತು ಗ್ರಾಮ ಪಂಚಾಯಿತಿ ಸ್ವಾಧೀನಕ್ಕೆ ಪಡೆಯಲು ಸೋಮವಾರಪೇಟೆ ನ್ಯಾಯಾಲಯದ ಆದೇಶವಿದ್ದು, ಸರ್ಕಾರಿ ಜಾಗವನ್ನು ಸರ್ಕಾರ ಸದ್ಬಳಕೆ ಮಾಡಿಕೊಳ್ಳುವ ಮೂಲಕ ಭೂಗಳ್ಳರ ಪಾಲಾಗದಂತೆ ಎಚ್ಚರ ವಹಿಸಬೇಕೆಂದು ದಲಿತ ಸಂಘರ್ಷ ಸಮಿತಿ ಒತ್ತಾಯಿಸಿದೆ.
ನಗರದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಘದ ಜಿಲ್ಲಾ ಸಂಚಾಲಕ ಎಂ.ಎನ್.ರಾಜಪ್ಪ , ಬ್ಯಾಡಗೊಟ್ಟ ಪಂಚಾಯಿತಿಯ ವ್ಯಕ್ತಿಯೋರ್ವರು ನಕಲಿ ಭೂ ದಾಖಲೆ ಸೃಷ್ಠಿಸಿ ಸರ್ಕಾರಿ ಜಾಗವನ್ನು ಏರ್ಟೆಲ್ ಕಂಪೆನಿಗೆ ಭೋಗ್ಯಕ್ಕೆ ನೀಡಿದ್ದರು. ಈ ಪ್ರಕರಣ ಕೋರ್ಟ್ ಮೆಟ್ಟಿಲೇರಿ, ಪೈಸಾರಿ ಭೂಮಿಯನ್ನು ದುರುಪಯೋಗ ಮಾಡಿಕೊಂಡಿರುವುದು ಮೇಲ್ನೋಟಕ್ಕೆ ಕಂಡುಬಂದಿದೆ. ಸರ್ಕಾರಿ ಜಮೀನಿನಲ್ಲಿ ಟವರ್ ಇರುವ ಹಿನ್ನೆಲೆಯಲ್ಲಿ ಯಾವುದೇ ವ್ಯಕ್ತಿ ಅಥವಾ ಏರ್ಟೆಲ್ ಟವರ್ ಕಂಪೆನಿಗೆ ಈ ಭೂಮಿಯ ಮೇಲೆ ಹಕ್ಕು ಇರುವುದಿಲ್ಲ ಎಂದು ಕಂದಾಯ ಇಲಾಖೆಯಿಂದ ಸಾರ್ವಜನಿಕ ಪ್ರಕಟಣೆಯ ಬೋರ್ಡ್ ಅಳವಡಿಸಲಾಗಿದೆ. ಆದ್ದರಿಂದ ಆ ಭೂಮಿಯನ್ನು ಸರ್ಕಾರ ವಶಕ್ಕೆ ಪಡೆದು ಬೇಲಿ ಅಳವಡಿಸಿ ಸಂರಕ್ಷಿಸಬೇಕು. ಸರ್ಕಾರಕ್ಕೆ ಮೋಸ ಮಾಡಿದ ವ್ಯಕ್ತಿಯ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಬೇಕೆಂದು ಆಗ್ರಹಿಸಿದರು.
ಜಿಲ್ಲಾ ಸಂಘಟನಾ ಸಂಚಾಲಕ ಎನ್.ಆರ್.ದೇವರಾಜ್ ಮಾತನಾಡಿ, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಭೂ ಕಬಳಿಕೆ ಮಾಡುವುದು ಕೆಲವರ ಹುನ್ನಾರವಾಗಿತ್ತು. ಈ ಸಂಬಂಧ ಜಿಲ್ಲಾಧಿಕಾರಿ, ತಹಶೀಲ್ದಾರ್ ಅವರಿಗೂ ಪತ್ರ ಬರೆಯಲಾಗಿತ್ತು. ಅಲ್ಲದೇ, ಭೂ ಕಬಳಿಕೆ ಕುರಿತು ದಸಂಸ ನಿರಂತರ ಹೋರಾಟ ಮಾಡಿಕೊಂಡು ಬರುತ್ತಿತ್ತು. ಇಂದು ಜಯ ಲಭಿಸಿದ್ದು, ಮುಂದಿನ ದಿನಗಳಲ್ಲಿ ತಹಶೀಲ್ದಾರ್ ನೇತೃತ್ವದಲ್ಲಿ ಸರ್ವೆ ಮಾಡಿ ಬೇಲಿ ಅಳವಿಸುವಂತಾಗಬೇಕು. ಸರ್ಕಾರಿ ಜಾಗವನ್ನು ಸರ್ಕಾರ ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಮನವಿ ಮಾಡಿದರು.
ಸರ್ಕಾರಿ ಜಾಗದಲ್ಲಿ ಮೂರ್ನಾಲ್ಕು ಕುಟುಂಬಗಳು ಅಕ್ರಮವಾಗಿ ಮನೆ ನಿರ್ಮಿಸಿಕೊಂಡಿದ್ದು, ತಕ್ಷಣವೇ ತೆರವುಗೊಳಿಸಬೇಕು. ಭೂಕಬಳಿಕೆಯಾಗದಂತೆ ಎಚ್ಚರ ವಹಿಸಬೇಕೆಂದು ಸಮಿತಿಯ ಒತ್ತಾಯಿಸಿದರು.
ಸಮಿತಿಯ ರಾಜ್ಯ ಸಂಘಟನಾ ಸಂಯೋಜಕ ರಾಜಶೇಖರ್, ಜಿಲ್ಲಾ ಸಮಿತಿ ಸದಸ್ಯರಾದ ಎನ್.ಸಿ.ಗೋವಿಂದರಾಜು, ಸದಸ್ಯರಾದ ಡಿ.ಬಿ.ಕೇಶವ್, ಯು.ಜೆ.ರಾಜು ಸುದ್ದಿಗೋಷ್ಠಿಯಲ್ಲಿದ್ದರು.








