ಫಲಾನುಭವಿಗಳಿಗೆ ಯೋಜನೆಯನ್ನು ತಲುಪಿಸಿ: ಅಚ್ಚಪಂಡ ಬೋಪಣ್ಣ.
ವಿರಾಜಪೇಟೆ : ಸರಕಾರದ ಯೋಜನೆಗಳಾದ ಬಸವ ವಸತಿ ಹಾಗೂ ಡಾ. ಬಿ.ಆರ್.ಅಂಬೇಡ್ಕರ್ ಯೋಜನೆ ಗ್ರಾಮೀಣ ಭಾಗದ ಹೆಚ್ಚುವರಿ ಯೋಜನೆಯಡಿ ಮನೆಗಳಿಗೆ ಫಲಾನುಭವಿಗಳನ್ನು ಆಯ್ಕೆ ಮಾಡಲಾಗಿದ್ದು ಇನ್ನು ಅರ್ಜಿ ಸಲ್ಲಿಸಿರುವ ಉಳಿದ ಫಲಾನುಭವಿಗಳಿಗೆ ಮುಂದಿನ ಸಾಲಿಗೆ ಮೊದಲು ಆದ್ಯತೆ ನೀಡಲಾಗುವುದು ಎಂದು ಬೇಟೋಳಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಅಚ್ಚಪಂಡ ಎಂ.ಬೋಪಣ್ಣ ಹೇಳಿದರು.
ವಿರಾಜಪೇಟೆ ಬಳಿಯ ಬೇಟೋಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪುದುಪಾಡಿ ಶ್ರೀ ಅಯ್ಯಪ್ಪ ದೇವಸ್ಥಾನದ ಸಭಾಂಗಣದಲ್ಲಿ ನಡೆದ ”ಹೆಚ್ಚುವರಿ ಯೋಜನೆಯಡಿ ನೀಡಲಾಗಿರುವ ಮನೆಗಳಿಗೆ ಫಲನುಭವಿಗಳ ಆಯ್ಕೆಯ ವಿಶೇಷ ಗ್ರಾಮಸಭೆ”ಯ ಅಧ್ಯಕ್ಷತೆ ವಹಿಸಿ ಮಾತನಾಡಿ ನಿವೇಶನ ಇಲ್ಲದವರಿಗೆ ಮನೆ ಹಂಚಲಾಗುತ್ತಿದ್ದು ಬೇಟೋಳಿ ಪಂಚಾಯಿತಿ ವ್ಯಾಪ್ತಿಗೆ ಒಟ್ಟು ೩೧ ಮನೆಗಳು ಮುಂಜೂರಾಗಿದ್ದು ಮಿಸಲಾತಿಯಂತೆ ಪ.ಜಾತಿ-ಪಂಗಡಗಳಿಗೆ ಹಂಚಿ, ಇತರ ಪಂಗಡದವರಿಗಾಗಿ ಇನ್ನು ೭ ಮನೆಗಳು ಬಾಕಿ ಇರುವುದಾಗಿ ತಿಳಿಸಿದರು.
ವಿಶೇಷ ಗ್ರಾಮ ಸಭೆಗೆ ನೋಡಲ್ ಅಧಿಕಾರಿಯಾಗಿ ಶಿಕ್ಷಣ ಸಂಯೋಜಕರಾದ ಬಿ.ಎಸ್. ರಂಗ ಸ್ವಾಮಿ ಅವರು ಭಾಗವಹಿಸಿ ಮಾತನಾಡಿ ಸರಕಾರದ ಯೋಜನೆಗಳು ಪ್ರತಿಯೋಬ್ಬರಿಗು ತಲುಪುವಂತಾಗ ಬೇಕು. ನಿವೇಶನ ರಹಿತ ರೈತರು ಈ ಸೌಲಭ್ಯವನ್ನು ಸದುಪಯೋಗ ಪಡಿಸಿಕೊಳ್ಳುವಂತಾಗಬೇಕು ಎಂದರು. ಈ ಸಂದರ್ಭ ಗ್ರಾಮಸ್ಥರಾದ ಎ.ಎಂ.ಹರೀಶ್ ಅವರು ಮಾತನಾಡಿ ಹೆಗ್ಗಳ ಗ್ರಾಮದಲ್ಲಿ ಅನೇಕರಿಗೆ ಮನೆ ನಿವೇಶನಗಳಿಲ್ಲ. ಮನೆಗಳನ್ನು ಸರಕಾರ ಪಂಚಾಯಿತಿ ಮೂಲಕ ದೊರಕಿಸಬೇಕು ಎಂದರು. ಈ ವೇಳೆ ಕೆಲವು ಸದಸ್ಯರು ಈ ಭಾಗದಲ್ಲಿ ಹೆಚ್ಚು ಅಲ್ಪ ಸಂಖ್ಯಾತರಿದ್ದು ಅವರಿಗು ಮುಂದಿನ ಸಾಲಿಗೆ ಹೆಚ್ಚು ಮನೆಗಳು ಮೀಸಲಾತಿಯಂತೆ ದೊರಕುವಂತಾಗಬೇಕು ಎಂದರು.
ಅದಕ್ಕೆ ಉತ್ತರಿಸಿದ ಬೇಟೋಳಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಮಣಿ ಅವರು ಸಭೆಯನ್ನುದ್ದೇಶಿಸಿ ಸರಕಾರದ ನಿಯಮದಂತೆ ಹೆಚ್ಚುವರಿಯಾಗಿ ಬಸವ ವಸತಿ ಹಾಗೂ ಡಾ,ಬಿ.ಆರ್.ಅಂಬೇಡ್ಕರ್ ಗ್ರಾಮೀಣ ಯೋಜನೆಯಡಿ ಪ,ಜಾತಿ ಮತ್ತು ಪಂಗಡದ ಫಲನುಭವಿಗಳಿಗೆ ಮನೆ ಹಂಚಲಾಗಿದೆ. ಇನ್ನು ಇತರ ಜಾತಿ ಪಂಗಡದವರು ನಮ್ಮ ವ್ಯಾಪ್ತಿಯಲ್ಲಿ ಕಡಿಮೆ ಫಲನುಭವಿಗಳಿದ್ದು ಕೆಲವೇ ಮನೆ ಬಾಕಿ ಇರುವುದಾಗಿ ತಿಳಿಸಿದರಲ್ಲದೆ,ಅಲ್ಪ ಸಂಖ್ಯಾತ ಫಲನುಭವಿಗಳಿಗೆ ಸರಕಾರದ ನಿಯಮ ಮೀಸಲಾತಿಯಂತೆ ವಿತರಿಸಲಾಗುವುದು ಎಂದು ಸಭೆಗೆ ತಿಳಿಸಿದಾಗ, ಕೆಲವು ಸದಸ್ಯರು ಅಲ್ಪ ಸಂಖ್ಯತ ಫಲನುಭವಿಗಳಿಗೆ ಹೆಚ್ಚು ಮನೆಗಳ ಅಗತ್ಯವಿದೆ ಎಂದಾಗ ಮುಂದಿನ ಸಾಲಿಗೆ ಅಲ್ಪ ಸಂಖ್ಯಾತರಿಗೆ ಹೆಚ್ಚು ಮನೆಗಳಿಗೆ ಬೇಡಿಕೆ ಸಲ್ಲಿಸಬೇಕೆಂದು ಒತ್ತಾಯಿಸಿದರು.
ಸಭೆಯನ್ನುದ್ದೇಶಿಸಿ ಸದಸ್ಯರುಗಳಾದ ಎ.ಎ.ವಸಂತ ಕಟ್ಟಿ, ಪಿ.ಬಿ.ಚಂಗಪ್ಪ, ಎಂ.ಎ.ರಜಾಕ್, ಸಿ.ಎಸ್.ಸುದೀಶ್ ಅವರುಗಳು ಸಭೆಯಲ್ಲಿ ಮಾತನಾಡಿದರು. ವೇದಿಕೆಯಲ್ಲಿ ಪಂಚಾಯಿತಿ ಉಪಾಧ್ಯಕ್ಷೆ ಕೆ.ಹೆಚ್.ಅಲೀಮಾ, ವೈ.ಎಂ.ಶಾಂತಿ, ಬಿ.ಜೆ.ಯಶೋದ, ಪಿ.ಕೆ.ಗೀತಾ, ಪಿ.ಎಂ.ಲಕ್ಷಿ, ಕೆ.ಆರ್.ಲತಾ ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಗ್ರಾಮಸ್ಥರು ಹಾಜರಿದ್ದರು.








